Advertisement

ಸರ್ಕಾರದಿಂದ ಜಾತಿ- ಧರ್ಮದ ನಡುವೆ ಬೆಂಕಿ ಹಚ್ಚುವ ಕೆಲಸ

03:07 PM Aug 03, 2017 | Girisha |

ಶಿವಮೊಗ್ಗ: ರಾಜಕೀಯ ದುರುದ್ದೇಶದಿಂದ ಜಾತಿ-ಧರ್ಮಗಳ ನಡುವೆ ಬೆಂಕಿ ಹಚ್ಚುತ್ತಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರಕ್ಕೆ ನೋಬೆಲ್‌ ಪ್ರಶಸ್ತಿ ನೀಡಬೇಕು ಎಂದು ಮೇಲ್ಮನೆ ಪ್ರತಿಪಕ್ಷ ನಾಯಕ ಕೆ.ಎಸ್‌. ಈಶ್ವರಪ್ಪ ವ್ಯಂಗ್ಯವಾಡಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯ ಪಕ್ಷಗಳಿಗೆ ಅದರದ್ದೇ ಆದ ಕೆಲಸ ಸಾಕಷ್ಟಿದೆ. ಆದರೆ ಚುನಾವಣೆಯನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರ ಜಾತಿ-ಧರ್ಮದ ನಡುವೆ ವಿಷ ಬೀಜ ಬಿತ್ತುವ ಕೆಲಸದಲ್ಲಿ ನಿರತವಾಗಿದೆ. ಸರ್ಕಾರದ ನಡೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಎಂದರು.

Advertisement

ಲಿಂಗಾಯಿತ ಸ್ವತಂತ್ರ ಧರ್ಮ ವಿಚಾರವಾಗಿ ಮೊದಲು ಬೆಂಕಿ ಹಚ್ಚಿದ್ದು ರಾಜ್ಯ ಸರ್ಕಾರ. ಮಗುವನ್ನು ಚಿವುಟುವ ಕೆಲಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿದ್ದಾರೆ. ಮುಂದೆ ಎಲ್ಲಾ ಜಾತಿಯವರು ಪ್ರತ್ಯೇಕ ಧರ್ಮ ಮಾಡುವಂತೆ ಬೇಡಿಕೆ ಇಡುತ್ತಾರೆ. ಇದು ಕಾಂಗ್ರೆಸ್‌ಗೆ ತಿರುಗು ಬಾಣವಾಗಲಿದೆ ಎಂದು ಹೇಳಿದರು. 

ಲ್ಯಾಂಡ್‌ ಮಾಫಿಯಾ ಗುಲಾಮರು: ಕೆರೆಗಳನ್ನು ಡಿ ನೋಟಿಫಿಕೇಶನ್‌ ಮಾಡುವ ಮೂಲಕ ಕೆರೆಗಳ ಜಾಗವನ್ನು ಲೂಟಿ ಹೊಡೆಯಲು ಸರ್ಕಾರ ಮುಂದಾಗಿರುವುದು ಖಂಡನೀಯ. ಈ ಹಿಂದೆ ಅಕ್ರಮ ಮರಳು ಮಾಫಿಯಾದಲ್ಲಿ ಕಾಂಗ್ರೆಸ್‌ನ ಅನೇಕರು ಭಾಗಿಯಾಗಿದ್ದರು. ಇದೀಗ 
ಸ್ವತಃ ಮುಖ್ಯಮಂತ್ರಿ ಸಿದ್ಧರಾಮಯ್ಯ, ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಸೇರಿದಂತೆ ಸರ್ಕಾರದಲ್ಲಿರುವ ಬಹುತೇಕರು “ಲ್ಯಾಂಡ್‌ ಮಾಫಿಯಾದ ಗುಲಾಮ’ರಾಗಿದ್ದಾರೆ ಎಂದು ಲೇವಡಿ ಮಾಡಿದರು. ಕೆರೆಗಳನ್ನು ಡಿ ನೋಟಿಫೈ ಮಾಡುವ ಸಂಪುಟದ ನಿರ್ಧಾರವನ್ನು ಕೂಡಲೇ ವಾಪಾಸು
ಪಡೆಯಬೇಕು. ಇಲ್ಲವಾದಲ್ಲಿ ರಾಜ್ಯ ಸರ್ಕಾರದ ಕುತಂತ್ರ ರಾಜಕಾರಣಕ್ಕೆ ರಾಜ್ಯದ ಜನತೆ ತಕ್ಕ ಉತ್ತರ ನೀಡಲಿದ್ದಾರೆ. ಈ ಕುರಿತು ರಾಜ್ಯಪಾಲರಿಗೆ ತಾವು ಪತ್ರ ಬರೆದಿರುವುದಾಗಿ ತಿಳಿಸಿದರು.

ರಾಜ್ಯದಲ್ಲಿ ಭೀಕರ ಬರ ಎದುರಾಗಿದೆ. ಕೆರೆ, ಕಟ್ಟೆಗಳಲ್ಲಿ ನೀರಿಲ್ಲ. ಇಂತಹ ಸಂದರ್ಭದಲ್ಲಿ ಸರ್ಕಾರ ಕೆರೆಗಳನ್ನು ಉಳಿಸಲು ಮುಂದಾಗಬೇಕು. ಇದು ಜೀವಂತ ಸರ್ಕಾರದ ಲಕ್ಷಣ. ಆದರೆ ರಾಜ್ಯದಲ್ಲಿ ಇದಕ್ಕೆ ತದ್ವಿರುದ್ಧವಾದ ಸರ್ಕಾರವಿದೆ. ದೇಶದ ಇತಿಹಾಸದಲ್ಲಿ ಇಂತಹ ಕುತಂತ್ರ ಸರ್ಕಾರವನ್ನು ಹಿಂದೆಂದೂ ಕಂಡಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಐಟಿ ದಾಳಿ: ಕಾಂಗ್ರೆಸ್‌ ಮುಖಂಡ ಡಿ.ಕೆ. ಶಿವಕುಮಾರ್‌ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿರುವುದಕ್ಕೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಕಾಂಗ್ರೆಸ್‌ ಪಕ್ಷದವರು ಭ್ರಷ್ಟಾಚಾರ ಮಾಡಿದರೆ ಅದಕ್ಕೆ ಬಿಜೆಪಿ ಹೊಣೆಯಾಗುತ್ತದೆಯೇ ಎಂದರು. ಎಲ್ಲಾ ಸರ್ಕಾರಗಳ ಆಡಳಿತಾವಧಿಯಲ್ಲಿ ಐಟಿ ದಾಳಿ ನಡೆದಿದೆ. ಐಟಿ ದಾಳಿಯಾದಾಗ ಬೇನಾಮಿ ಹಣಕ್ಕೆ ಸ್ಪಷ್ಟ ಉತ್ತರ ಕೊಡಬೇಕೇ ಹೊರತು, ಇದರಲ್ಲಿ ರಾಜಕೀಯ ತರಬಾರದು. ತಪ್ಪು ಮಾಡಿದವರು ಶಿಕ್ಷೆ ಅನುಭವಿಸುತ್ತಾರೆ. ಐಟಿ ದಾಳಿ ಹಿಂದೆ ಬಿಜೆಪಿ ಕೈವಾಡವಿದೆ, ರಾಜಕೀಯ ಕುತಂತ್ರವಿದೆ ಎಂಬ ಕಾಂಗ್ರೆಸ್‌ ಆರೋಪ ಖಂಡನೀಯ ಎಂದರು.

Advertisement

ಗುಜರಾತಿನ ಕಾಂಗ್ರೆಸ್‌ ಶಾಸಕರ ರೇಸಾರ್ಟ್‌ ರಾಜಕೀಯಕ್ಕೂ, ಐಟಿ ದಾಳಿಗೂ ಒಂದಕ್ಕೊಂದು ಸಂಬಂಧವೇ ಇಲ್ಲ. ಕಾಂಗ್ರೆಸ್‌ ಮುಖಂಡರು ಇದಕ್ಕೆ ತಾಳೆ ಹಾಕಿದರೆ ಗುಜರಾತ್‌ನಿಂದ ಬಂದಿರುವ ಶಾಸಕರಲ್ಲಿ ಪಕ್ಷ ನಿಷ್ಠೆ ಇಲ್ಲ. ಅವರು ಖರೀದಿ ವಸ್ತು ಎಂಬುದನ್ನು ಸ್ವತಃ ಒಪ್ಪಿಕೊಂಡಂತಾಗುತ್ತದೆ. ಕಾಂಗ್ರೆಸ್‌ನ ದೌರ್ಬಲ್ಯ ತೋರಿಸಿದಂತಾಗುತ್ತದೆ. ಬೇಕಾದರೆ ಕರೆ ತಂದಿರುವ ಶಾಸಕರನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳಲಿ. ಅದಕ್ಕೆ ನಮ್ಮದೇನು ಅಭ್ಯಂತರವಿಲ್ಲ ಎಂದು ತಿರುಗೇಟು ನೀಡಿದರು. ಗುಜರಾತ್‌ನಲ್ಲಿ ಪ್ರವಾಹ ಪರಿಸ್ಥಿತಿ ಇದೆ. ಜನ ತೊಂದರೆಗೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ಶಾಸಕರಾಗಿ ಅಲ್ಲಿನ ಜನರ ಕಷ್ಟ ಆಲಿಸುವುದರ ಬದಲು ಮೋಜು-ಮಸ್ತಿ ಮಾಡುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next