ಬೆಂಗಳೂರು: ಯಲಹಂಕ ವಾಯುನೆಲೆ ಸಮೀಪದ ಪಾರ್ಕಿಂಗ್ ಸ್ಥಳದಲ್ಲಿ ನಡೆದ ಬೆಂಕಿ ಅವಘಡ ರಾಷ್ಟ್ರ ಮತ್ತು ರಾಜ್ಯಕ್ಕೆ ಸಂಬಂಧಿಸಿದೆ. ಹಾಗಾಗಿ, ಆರೋಪ-ಪ್ರತ್ಯಾರೋಪ ಬಿಟ್ಟು ಈ ರೀತಿ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕಿದೆ ಎಂದು ಗೃಹ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.
ಕೋರಮಂಗಲದ ಕೆಎಸ್‌ಆರ್‌ಪಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯ ಪೊಲೀಸ್ ವಾರ್ಷಿಕ ಕ್ರೀಡಾಕೂಟದ ಸಮಾರೋಪದಲ್ಲಿ ಮಾತನಾಡಿದರು. ಈಗಾಗಲೇ ಕೇಂದ್ರದ ರಕ್ಷಣಾ ಸಚಿವರು, ರಾಜ್ಯದ ಮುಖ್ಯಮಂತ್ರಿಗಳು ಘಟನೆ ಕುರಿತು ಚರ್ಚೆ ನಡೆಸಿದ್ದಾರೆ.
ಭಾರತೀಯ ವಾಯು ಸೇನೆ ಅಧಿಕಾರಿಗಳು ಆಂತರಿಕ ತನಿಖೆ ನಡೆಸಿದ್ದಾರೆ. ಒಟ್ಟಾರೆ ಎರಡು ತನಿಖಾ ವರದಿ ಬಂದ ನಂತರ ನಿಖರ ಕಾರಣ ತಿಳಿಯಲಿದೆ. ದುರ್ಘಟನೆಯಲ್ಲಿ ಕಾರು ಕಳೆದುಕೊಂಡವರಿಗೆ ವಿಮೆ, ದಾಖಲಾತಿ ಕೊಡಿಸಬೇಕಿದೆ ಎಂದರು.
ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಕ್ರೀಡಾ ಕೂಟಗಳಲ್ಲಿ ಭಾಗಿಯಾಗುವುದು ಒಳ್ಳೆಯ ಬೆಳವಣಿಗೆ ಕ್ರೀಡಾ ಕೂಟಗಳಲ್ಲಿ ಭಾಗಿಯಾಗುವುದರಿಂದ ಪೊಲೀಸ್ ಸಿಬ್ಬಂದಿ ಕೂಡ ಕೆಲ ಹೊತ್ತು ಕೆಲಸದೊತ್ತಡದಿಂದ ನಿರಾಳರಾಗುತ್ತಾರೆ. ಮಹಿಳೆಯರಿಗೂ ಕ್ರೀಡೆ ಅವಶ್ಯ ಎಂದು ಹೇಳಿದರು.
ಇದೇ ವೇಳೆ ಕೆಎಸ್‌ಆರ್‌ಪಿ ಕ್ರೀಡಾಂಗಣ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ರಾಣಿ ಅಬ್ಬಕ್ಕ ಮಹಿಳಾ ಬ್ಯಾರಕ್ ಲೋಕಾರ್ಪಣೆಗೊಳಿಸಲಾಯಿತು. ಹಾಗೆಯೇ ಹಗ್ಗ-ಜಗ್ಗಾಟ ಸ್ಪರ್ಧೆಯಲ್ಲಿ ವಿಜೇತರಾದ ಪುರುಷ ಮತ್ತು ಮಹಿಳಾ ತಂಡಕ್ಕೆ ಗೃಹ ಸಚಿವ ಎಂ.ಬಿ.ಪಾಟೀಲ್ ಅವರ ಪತ್ನಿ ಆಶಾ ಪಾಟೀಲ್ ಅವರು ಬಹುಮಾನ ವಿತರಿಸಿದರು.
ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು, ನಗರ ಪೊಲೀಸ್ ಆಯುಕ್ತ ಟಿ.ಸುನಿಲ್ ಕುಮಾರ್ ಇತರರಿದ್ದರು.
ಬಂಡೀಪುರ ಅಭಯಾರಣ್ಯದಲ್ಲಿ ಕಾಣಿಸಿಕೊಂಡಿರುವ ವ್ಯಾಪಕ ಬೆಂಕಿ ನಂದಿಸಲು ಸೇನಾ ಹೆಲಿಕಾಪ್ಟರ್‌ಗಳನ್ನು ಬಳಕೆ ಮಾಡಿಕೊಳ್ಳಲಾಗಿದ್ದು, ಬೆಂಕಿ ನಂದಿಸುವ ಕಾರ್ಯ ಮುಂದುವರಿದಿದೆ. ಅದನ್ನು ಸಮರ್ಥವಾಗಿ ನಿರ್ವಹಿಸುತ್ತವೆ.
-ಎಂ.ಬಿ. ಪಾಟೀಲ್, ಗೃಹ ಸಚಿವ