ಮಂಗಳೂರು : ಉಡುಪಿ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದ ದಿ| ಜೆ.ಎಂ.ಲೋಬೋ ಪ್ರಭು ಅವರ ಮಂಗಳೂರಿನ ಲೈಟ್‌ಹೌಸ್‌ನಲ್ಲಿರುವ ಸುಮಾರು 80 ವರ್ಷಗಳಷ್ಟು ಹಳೆಯ ಬಂಗಲೆಯಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿದ್ದು, ಬಂಗಲೆ ಬಹುತೇಕ ಸುಟ್ಟು ಹೋಗಿದೆ.
ಮಾ.30ರಂದು ರಾತ್ರಿ ಸುಮಾರು 11 ಗಂಟೆಯ ವೇಳೆಗೆ ಬೆಂಕಿ ಆಕಸ್ಮಿಕ ಸಂಭವಿಸಿದೆ. ಮನೆಯಿಂದ ಬೆಂಕಿ ಬರುತ್ತಿರುವುದನ್ನು ಗಮನಿಸಿ ಪಾಂಡೇಶ್ವರ ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಲಾಗಿತ್ತು. ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದ ಸಿಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದ್ದಾರೆ.
“ಶನಿವಾರ ರಾತ್ರಿ ಸುಮಾರು 10.30ಕ್ಕೆ ಮನೆಗೆ ಬೆಂಕಿ ತಗಲಿರುವ ಬಗ್ಗೆ ನನಗೆ ಮಾಹಿತಿ ಬಂತು. ಕೂಡಲೇ ನಾನು ಧಾವಿಸಿ ಬಂದಿದ್ದು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದೆ. ಅಗ್ನಿ ಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಬಂದು ರಾತ್ರಿ ಸುಮಾರು 3 ಗಂಟೆಯವರೆಗೆ ಕಾರ್ಯಾಚರಣೆ ನಡೆಸಿ ಅಗ್ನಿಯನ್ನು ನಂದಿಸಿದರು. ಮನೆಯ ಶೇ.80ರಷ್ಟು ಭಾಗ ಸುಟ್ಟು ಹೋಗಿದೆ. ಮನೆಯಲ್ಲಿದ್ದ ಬಹಳಷ್ಟು ಹೆರಿಟೇಜ್ ವಸ್ತುಗಳು, ಪೀಠೊಪಕರಣಗಳು, ಅಮೂಲ್ಯ ವಸ್ತುಗಳು ಬೆಂಕಿಗೆ ಆಹುತಿಯಾಗಿದೆ. ಶಾರ್ಟ್ ಸರ್ಕ್ನೂಟ್‌ನಿಂದ ಬೆಂಕಿ ತಗಲಿರಬಹುದು ಎಂದು ಆಗ್ನಿಶಾಮಕ ದಳದವರು ಅಭಿಪ್ರಾಯಪಟ್ಟಿದ್ದಾರೆ’ ಎಂದು ದಿ| ಜೆ.ಎಂ.ಲೋಬೋ ಪ್ರಭು ಅವರ ಆಳಿಯ ಹಾಗೂ ಕ್ರೆಡೈ ಅಧ್ಯಕ್ಷ ಡಿ.ಬಿ. ಮೆಹ್ತಾ ಹೇಳಿದ್ದಾರೆ.
ಲೋಬೋ ಪ್ರಭು ಅವರು 1967ರಲ್ಲಿ ಉಡುಪಿ ಕ್ಷೇತ್ರದಿಂದ ಸ್ವತಂತ್ರ ಪಕ್ಷದಲ್ಲಿ ಲೋಕಸಭೆಗೆ ಆಯ್ಕೆಯಾಗಿದ್ದರು. ಮಂಗಳೂರಿನ ಲೈಟ್‌ಹೌಸ್‌ನಲ್ಲಿ ವಾಸ್ತವ್ಯವಿದ್ದ ಅವರು ತನ್ನ ಪತ್ನಿಯ ಹೆಸರಿನಲ್ಲಿ ಈ ಬಂಗಲೆಯನ್ನು ನಿರ್ಮಿಸಿದ್ದರು. ಈ ಮನೆಯಲ್ಲಿ ಯಾರೂ ವಾಸಿಸುತ್ತಿಲ್ಲ. ಈ ಹಿನ್ನಲೆಯಲ್ಲಿ ಬೆಂಕಿ ತಗಲಿರುವುದು ಬೇಗ ಗಮನಕ್ಕೆ ಬಂದಿರಲಿಲ್ಲ. ಬಂಗಲೆಯಲ್ಲಿದ್ದ ಪುಸ್ತಕಗಳು, ಫರ್ನಿಚರ್‌ಗಳು, ಹಳೆಯ ಕಾಲದ ಬೆಲೆ ಬಾಳುವ ವಸ್ತುಗಳು ಸುಟ್ಟು ಹೋಗಿವೆ.