Advertisement

ಕಾರ್ಕಳ ತಾಲೂಕಿನಲ್ಲಿ  ಆಗಿಂದಾಗ್ಗೆ ಬೆಂಕಿ ಅವಘಡ​​​​​​​

12:30 AM Mar 16, 2019 | Team Udayavani |

ವಿಶೇಷ ವರದಿ- ಕಾರ್ಕಳ: ಬಿರು ಬೇಸಗೆಯಲ್ಲಿ ಅಗ್ನಿಶಾಮಕ ಠಾಣೆಗೆ ಅವಘಡದ್ದೆ ಆತಂಕ. ಕಾರ್ಕಳ ತಾಲೂಕಿನಲ್ಲಂತೂ ವರ್ಷದಿಂದ ವರ್ಷಕ್ಕೆ ಬೆಂಕಿ ಅವಘಡ ಸಂಖ್ಯೆ ಹೆಚ್ಚಾಗಿ ಕಂಡು ಬರುತ್ತಿರುವುದರಿಂದ ಸಾರ್ವಜನಿಕರ ಕರೆಗಳು ಜಾಸ್ತಿಯಾಗಿದೆ. ಅಗ್ನಿಶಾಮಕ ದಳಕ್ಕೆ ನಿರಂತರವಾಗಿ ಅವಘಡ ಕುರಿತಾಗಿ ಕರೆಗಳು ಬರುತ್ತಿದ್ದು, ಜನವರಿಯಿಂದ 94 ಕರೆಗಳು ಬಂದಿವೆ. ಕಳೆದ ಬಾರಿ ಇದರ ಸಂಖ್ಯೆ ಕೇವಲ 50. ಬೆಳ್ಮಣ್‌ ಭಾಗದಿಂದ ಹೆಚ್ಚಿನ ಕರೆಗಳು ಬರುತ್ತಿರುವುದು ಗಮನಾರ್ಹ.

Advertisement

ಓಬಿರಾಯನ ಕಾಲದ ಉಪಕರಣ
ಪ್ರತಿಯೊಂದು ಕ್ಷೇತ್ರವೂ ಇಂದು ಆಧುನಿಕ ತಂತ್ರಜ್ಞಾನಕ್ಕೆ ಮೊರೆ ಹೋಗುತ್ತಿದ್ದಲ್ಲಿ ಅಗ್ನಿಶಾಮಕ ದಳ ಮಾತ್ರ ಓಬಿರಾಯನ ಕಾಲದ ಬಸ್‌ ಅನ್ನು ಹಿಡಿದುಕೊಂಡೇ ಮುಂದುವರಿಯತ್ತಿದೆ. ತಂತ್ರಜ್ಞಾನ ಕೂಡ ಹಳೆಯದ್ದೇ. ಕಿರಿದಾದ ರಸ್ತೆಗಳಲ್ಲಿ ಬಸ್‌ ಓಡಾಟ ಸಾಧ್ಯವಿಲ್ಲದಾದರೆ ಪರ್ಯಾಯ ವ್ಯವಸ್ಥೆ ಅಗ್ನಿಶಾಮಕ ಇಲಾಖೆಯಲ್ಲಿಲ್ಲ. ನೆರೆ ಸಂದರ್ಭ ನುರಿತ ಈಜು ಪಟುಗಳು ಇಲಾಖೆಯಲ್ಲಿಲ್ಲದ ಕಾರಣ ಇತರರನ್ನೇ ಅವಲಂಬಿಸುವುದು ಅನಿವಾರ್ಯವಾಗಿದೆ.

ಬುಲೆಟ್‌ ಬೈಕ್‌
ಅಗ್ನಿಶಾಮಕ ದಳವು ಇದೀಗ 10 ಲೀಟರ್‌ ನೀರು ಸಾಮರ್ಥ್ಯ ಹೊಂದಿರುವ ಟ್ಯಾಂಕ್‌ನ ಬುಲೆಟ್‌ ಬೈಕ್‌ ಒಂದನ್ನು ಹೊಂದಿರುವುದು ಇಲಾಖೆಯ ಅಪ್‌ಡೇಟ್‌ಗಳಲ್ಲಿ ಒಂದು ಎಂದು ಹೇಳಬಹುದು.

ಸಿಬಂದಿ ಕೊರತೆ
ಕಾರ್ಕಳ ಅಗ್ನಿಶಾಮಕ ಇಲಾಖೆಯಲ್ಲಿ ಒಟ್ಟು 27 ಮಂದಿ ಸಿಬಂದಿ ಇರಬೇಕಿತ್ತು. ಆದರೆ, ಪ್ರಸ್ತುತ 
ಕೇವಲ 17 ಮಂದಿ ಸಿಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಗೃಹರಕ್ಷಕ ದಳದ ಸಿಬಂದಿ ಸಹಕಾರ ಪಡೆದು ಕಾರ್ಯ ನಿರ್ವಹಿಸಲಾಗುತ್ತಿದೆ. ಎಫ್ಎಸ್‌ಒ (ಫೈರ್‌ ಸ್ಟೇಷನ್‌ ಆಫೀಸರ್‌‌) ಮತ್ತು ಎಎಫ್ಎಸ್‌ಓ (ಅಸಿಸ್ಟೆಂಟ್‌ ಫೈರ್‌ ಸ್ಟೇಷನ್‌ ಆಫೀಸರ್‌) ಹುದ್ದೆಯೂ ಖಾಲಿಯಿದೆ.

ಹೆಬ್ರಿಯಲ್ಲಿ ಕೇಂದ್ರವಿರಲಿ
ಹೆಬ್ರಿ ಪ್ರದೇಶ ಕಾರ್ಕಳದಿಂದ 35 ಕಿ.ಮೀ. ದೂರದಲ್ಲಿರುವ ಕಾರಣ ಅಲ್ಲೊಂದು ಅಗ್ನಿಶಾಮಕ ಘಟಕ ತೆರೆಯುವುದು ಅತಿ ಅಗತ್ಯ. ತುರ್ತು ಸಂದರ್ಭಗಳಲ್ಲಿ ಕಾರ್ಕಳದಿಂದ ಅಲ್ಲಿಗೆ ತಲುಪುವಾಗ ಅನಾಹುತ ಸಂಭವಿಸುವುದಂತೂ ಖಚಿತ. ಹಾಗಾಗಿ ಅದೇ ಪರಿಸರದಲ್ಲೊಂದು ಘಟಕ ತೆರೆಯುವಂತೆ ಬೇಡಿಕೆ ಹೆಚ್ಚಿದ್ದು, ಇದರಿಂದ ಕಾರ್ಕಳ ಅಗ್ನಿಶಾಮಕ ದಳದ ಒತ್ತಡವೂ ಕಡಿಮೆಯಾಗಲಿದೆ.

Advertisement

ಇತ್ತೀಚೆಗೆ ಹೆಬ್ರಿ ಪರಿಸರದ ಸಿಂಡಿಕೇಟ್‌ ಮತ್ತು ಕಾರ್ಪೊರೇಷನ್‌ ಬ್ಯಾಂಕ್‌ನಲ್ಲಿ ಅಗ್ನಿ ದುರಂತ ಸಂಭವಿಸಿದ್ದು ಈ ವೇಳೆ ಕಾರ್ಕಳದಿಂದಲೇ ಅಗ್ನಿಶಾಮಕ ದಳದ ಸಿಬಂದಿ ತೆರಳಿ ಬೆಂಕಿ ನಂದಿಸಿದ್ದರು.

ಮುಂಜಾಗ್ರತಾ ಕ್ರಮ
ವಿದ್ಯುತ್‌ ಪರಿವರ್ತಕ (ಟಿಸಿ) ಸುತ್ತುಮುತ್ತಲು ಮುಳಿಹುಲ್ಲು ಇದ್ದಲ್ಲಿ  ಮೆಸ್ಕಾಂ ಸಿಬಂದಿಗೆ ತಿಳಿಸಿ, ಸ್ವತ್ಛಗೊಳಿಸುವುದು. ಗುಡ್ಡಕಾಡು ಪ್ರದೇಶಕ್ಕೆ ಪಾರ್ಟಿ ಮಾಡಲು ತೆರಳುವವರ ಬಗ್ಗೆ ನಿಗಾ ವಹಿಸುವುದು, ಅವಘಡ ಸಂಭವಿಸಿದಲ್ಲಿ ತತ್‌ಕ್ಷಣವೇ 101 ಅಥವಾ 08258 232223 ನಂಬರ್‌ಗೆ ಮಾಹಿತಿ ಒದಗಿಸುವುದು. ಸಣ್ಣಪುಟ್ಟ ಅವಘಡ ತಪ್ಪಿಸುವ ನಿಟ್ಟಿನಲ್ಲಿ ಸ್ಥಳೀಯರೇ ಸೂಕ್ತ ರೀತಿಯಲ್ಲಿ ಸ್ಪಂದಿಸಿವುದು ಅಗತ್ಯವಾಗಿದೆ.

ಸಾರ್ವಜನಿಕರ ಸಹಕಾರ ಅಗತ್ಯ
ಬೆಂಕಿ ಅವಘಡ ಸಂಭವಿಸಿದ ತತ್‌ಕ್ಷಣ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದಲ್ಲಿ ಕೂಡಲೇ ಸ್ಪಂದಿಸಲು ಅನುಕೂಲವಾಗುವುದು. ಸಿಬಂದಿ ಕೊರತೆ ಸರಿದೂಗಿಸುವ ನಿಟ್ಟಿನಲ್ಲಿ ಗೃಹ ರಕ್ಷಕ ದಳದವರನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಕೆಲವು ಸಂದರ್ಭಗಳಲ್ಲಿ ಸಾರ್ವಜನಿಕರೂ ಸಹಕರಿಸಬೇಕಾಗಿದೆ.
-ವಸಂತ ಕುಮಾರ್‌ ಎಚ್‌.ಎಂ.,
ಜಿಲ್ಲಾ ಅಗ್ನಿಶಾಮಕ ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next