ಗೋರಖ್‌ಪುರ, ಉತ್ತರ ಪ್ರದೇಶ : ಕಳೆದ ವರ್ಷ ಆಮ್ಲಜನಕದ ಕೊರತೆಯಿಂದಾಗಿ 63 ಶಿಶುಗಳ ಸಾವು ಸಂಭವಿಸಿದ ಕಾರಣಕ್ಕೆ ದೇಶಾದ್ಯಂತ ಸುದ್ದಿ ಮಾಡಿದ್ದ ಸರಕಾರಿ ಒಡೆತನದ ಇಲ್ಲಿನ ಬಿಆರ್‌ಡಿ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ಇಂದು ಭಾರೀ ಬೆಂಕಿ ಅವಘಡ ಸಂಭವಿಸಿತು.
ಹಾಗಿದ್ದರೂ ಯಾವುದೇ ಜೀವ ಹಾನಿ ಆಗಿಲ್ಲವೆಂದು ವರದಿಯಾಗಿದೆ.
ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರ ಕಾರ್ಯಾಲಯ ಮತ್ತು ಅದಕ್ಕೆ ತಾಗಿಕೊಂಡಿರುವ ದಾಖಲೆ ಪತ್ರಗಳ ಕೊಠಡಿಯಲ್ಲಿ ಬೆಂಕಿ ಅವಘಡ ಸಂಭವಿಸಿತು. ಇವೆರಡೂ ಕೊಠಡಿಗಳು ಸುಟ್ಟು ಭಸ್ಮವಾಗಿವೆ.
ಬೆಂಕಿಯನ್ನು ನಂದಿಸುವ ಕಾರ್ಯದಲ್ಲಿ ಮೂರು ಅಗ್ನಿ ಶಾಮಕಗಳು ಕಾರ್ಯ ನಿರತವಾಗಿವೆ. ಬೆಂಕಿಗೆ ಕಾರಣವೇನೆಂದು ತತ್‌ಕ್ಷಣಕ್ಕೆ ಗೊತ್ತಾಗಿಲ್ಲ.
ಕಳೆದ ವರ್ಷ ಆಗಸ್ಟ್‌ನಲ್ಲಿ ಈ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದಾಗಿ ನವಜಾತ ಶಿಶುಗಳೂ ಸೇರಿದಂತೆ 63 ಮಕ್ಕಳು ಮೃತಪಟ್ಟಿದ್ದರು. ಪೂರೈಕೆದಾರರಿಗೆ ಹಣ ಬಾಕಿ ಇಟ್ಟಿದ್ದರಿಂದ ಆಸ್ಪತ್ರೆಗೆ ಆಮ್ಲಜನ ಸಿಲಿಂಡರ್‌ಗಳು ಪೂರೈಕೆ ಆಗಿರಲಿಲ್ಲ.