ಪಡುಬಿದ್ರಿ: ಸಮುದ್ರದಲ್ಲಿ ಮೀನುಗಾರಿಕೆ ನಡೆಸುವ ನಾಡದೋಣಿಗಳ ಔಟ್‌ಬೋರ್ಡ್ ಎಂಜಿನ್ ರಿಪೇರಿ ಅಂಗಡಿಯೊಂದಕ್ಕೆ ಶುಕ್ರವಾರ ಮುಂಜಾವ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಆಕಸ್ಮಿಕ ಬೆಂಕಿ ಹತ್ತಿಕೊಂಡು ಸುಮಾರು 20 ಲಕ್ಷ ರೂ.ಗಳ ನಷ್ಟ ಸಂಭವಿಸಿದೆ.
ಹೆಜಮಾಡಿಯ ಎಂಜಿನ್ ಮೆಕ್ಯಾನಿಕ್ ದಿವಾಕರ ಹೆಜ್ಮಾಡಿಯವರಿಗೆ ಸೇರಿದ ಅಂಗಡಿ ಇದಾಗಿದೆ. ಅಲ್ಲಿ ರಿಪೇರಿಗೆ ಬಂದ ಎರಡು ಹೊಸತು ಸೇರಿ ಸುಮಾರು 10ಕ್ಕೂ ಅಧಿಕ ಎಂಜಿನ್‌ಗಳು, ಸಹಸ್ರಾರು ಮೌಲ್ಯದ ಬಿಡಿಭಾಗಗಳು, ಟಲ್ಸ್ ಸಹಿತ ಅಂಗಡಿಯು ಪೂರ್ಣ ಬೆಂಕಿಗಾಹುತಿಯಾಗಿದೆ.
ಮಧ್ಯರಾತ್ರಿ 2 ಗಂಟೆಯ ಸಮಯ ಬೆಂಕಿ ಕಾಣಿಸಿಕೊಂಡಿತ್ತು. ಸ್ಥಳೀಯರ ಗಮನಕ್ಕೆ ಬರುವಷ್ಟರಲ್ಲಿ ಸಂಪೂರ್ಣ ಅಂಗಡಿ ಬೆಂಕಿಗಾಹುತಿಯಾಗಿತ್ತು. ತತ್‌ಕ್ಷಣ ಗ್ರಾ. ಪಂ. ಉಪಾಧ್ಯಕ್ಷ ಸುಧಾಕರ ಕರ್ಕೇರ ಅವರು ಸ್ಥಳೀಯರೊಂದಿಗೆ ಬೆಂಕಿ ನಂದಿಸಲು ಸಹಕರಿಸಿದರು. ಇದರಿಂದ ಪಕ್ಕದ ಅಂಗಡಿ ಮತ್ತು ಮನೆಗಳು ಈ ಅನಾಹುತದಿಂದ ಪಾರಾಗಿವೆ.
ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಜಿ.ಪಂ. ಸದಸ್ಯ ಶಶಿಕಾಂತ್ ಪಡುಬಿದ್ರಿ, ಗ್ರಾ.ಪಂ. ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್, ಉಪಾಧ್ಯಕ್ಷ ಸುಧಾಕರ ಕರ್ಕೇರ, ಕಾಪು ತಹಶೀಲ್ದಾರ್ ಮಹಮ್ಮದ್ ಐಸಾಕ್, ಆರ್. ಐ. ರವಿಶಂಕರ್, ಗ್ರಾಮ ಕರಣಿಕ ಅರುಣ್‌ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.