ದೇವನಹಳ್ಳಿ: ನೀಲಗಿರಿ ತೋಪಿನಲ್ಲಿ ಬೆಂಕಿ ಬಿದ್ದಿದ್ದರಿಂದ ಸುಮಾರು 10 ಎಕರೆ ತೋಪು ಆಹುತಿಯಾಗಿರುವ ಘಟನೆ ತಾಲೂಕಿನ ಕುಂದಾಣ ಮತ್ತು ಚಿನ್ನಕೆಂಪನಹಳ್ಳಿ ಗ್ರಾಮದ ಸಮೀಪದಲ್ಲಿ ನಡೆದಿದೆ.
ಕುಂದಾಣ ನಾಡಕಚೇರಿ ಹತ್ತಿರುವಿರುವ ರಾಜಣ್ಣ ಎಂಬುವರಿಗೆ ಸೇರಿರುವ ಸರ್ವೆ ನಂಬರ್ 154/1 ಮತ್ತು ಚಿನ್ನ ಕೆಂಪನಹಳ್ಳಿಯ ಪ್ರೇಮ ಎಂಬುವವರಿಗೆ ಸರ್ವೆ ನಂಬರ್ 79ರಲ್ಲಿ ಈ ಅವಘಡ ನಡೆದಿದೆ. ನೀಲಗಿರಿ ಮರಗಳ ತೆರವಿಗೆ ನಿರ್ದೇಶನ ನೀಡಲಾಗಿದೆ. ರೈತರು ಪರ್ಯಾಯ ಬೆಳೆ ಬೆಳೆಯಬೇಕು, ನೀಲಗಿರಿಯಿಂದ ಅಂತರ್ಜಲಕ್ಕೂ ತೊಂದರೆ ಯಾಗಲಿದ್ದು, ಬೇಸಿಗೆ ಸಮಯದಲ್ಲಿ ಬೆಂಕಿ ಅವಘಡ ಹೆಚ್ಚಾಗುತ್ತಿವೆ. ಇದರಿಂದ ಪಕ್ಕದ ಜಮೀನಿನ ಕೃಷಿಕರಿಗೂ ತೊಂದರೆ ಯಾಗಲಿದೆ. ಅದನ್ನು ಅರಿತು ಏಲ್ಲರೂ ಶೀಘ್ರವೇ ನೀಲಗಿರಿ ತೆರವಿಗೆ ಮುಂದಾಗಿ ಎಂದು ಕಂದಾಯ ಇಲಾಖೆ ಸಿಬ್ಬಂದಿ ಹೇಳಿದರು.
ಬಿದಿರು ಮತ್ತು ಇತರ ಮರಗಳಲ್ಲಿ ಗೂಡು ಕಟ್ಟಿಕೊಂಡಿದ್ದ ನೂರಾರು ಪಕ್ಷಿಗಳು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾದವು. ಮೊಟ್ಟೆಗಳನ್ನು ರಕ್ಷಿಸಲು ಜೋರು ಧ್ವನಿಯಲ್ಲಿ ಕೂಗಿದವು. ಅಕ್ಕಪಕ್ಕದ ರೈತರು ಬೆಳೆದಿದ್ದ ಬೆಳೆಗಳಿಗೆ ವ್ಯಾಪಿಸಿದ ಬೆಂಕಿ ಅಲ್ಪ ಪ್ರಮಾಣದ ಹಾನಿ ಮಾಡಿತು.
ಹೊಸ ಪದ್ಧತಿ ಅಳವಡಿಸಿ: ವಿದೇಶ ಮತ್ತು ಇತರೆ ಕಡೆಗಳಲ್ಲಿ ಬೆಂಕಿಯನ್ನು ನಂದಿಸಲು ಹೊಸ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಆದರೆ, ಅಗ್ನಿಶಾಮಕ ದಳ ಬರುವ ತನಕ ಕಾಯುವ ಪರಿಸ್ಥಿತಿಯಿದೆ. ಬೆಂಕಿ ಅವಘಡ ಸ್ಥಳದಿಂದ ತುರ್ತು ನಂಬರ್‌ಗೆ ಕರೆ ಮಾಡಿದ ಒಂದು ತಾಸಿನ ನಂತರ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದಿದ್ದಾರೆ. ವಿದೇಶಗಳಲ್ಲಿ ಹೆಲಿಕಾಪ್ಟರ್ ಮೂಲಕ ನೀರನ್ನು ಹಾಕಿ ಬೆಂಕಿಯನ್ನು ನಂದಿಸುತ್ತಾರೆ. ಇನ್ನಾದರೂ ಸರ್ಕಾರ ಹೊಸ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ಸ್ಥಳೀಯ ನಾಗರಿಕರು ಒತ್ತಾಯಿಸಿದ್ದಾರೆ.
ಸಾವಿರಾರು ಎಕರೆ ತೋಪು ಬೆಂಕಿಗಾಹುತಿ: ಸ್ಥಳೀಯರು ಸಹಕಾರದಿಂದ ಮಣ್ಣು ಸುರಿದು ಬೆಂಕಿ ನಂದಿಸುವ ಪ್ರಯತ್ನ ಮಾಡಲಾಯಿತು. ಕೃಷಿಕರು ಬಿಂದಿಗೆಗಳಲ್ಲಿ ನೀರು ತಂದು ಪಕ್ಕ ಜಮೀನಿಗೆ ಬೆಂಕಿ ಆವರಿಸದಂತೆ ತಡೆಯಲು ಪ್ರಯತ್ನಿಸಿದರು. ಮರದ ಇದ್ದಿಲಿಗೆ ಬೇಡಿಕೆ ಹೆಚ್ಚಾಗಿದ್ದು, ಬೇಸಿಗೆಯಲ್ಲಿ ನೀಲಗಿರಿ ತೋಪುಗಳಿಗೆ ಬೆಂಕಿ ಇಡುತ್ತಾರೆ. ಪ್ರತಿ ವರ್ಷವೂ ಸಾವಿರಾರು ಎಕರೆ ತೋಪು ಬೆಂಕಿಗಾಹುತಿಯಾಗುತ್ತಿವೆ ಎಂದು ಸ್ಥಳೀಯ ರೈತರು ಆರೋಪಿಸಿದರು.
ಸಾಮಾನ್ಯವಾಗಿ ನೀಲಗಿರಿ ತೋಪುಗಳ ಮರಗಳನ್ನು ಖರೀದಿಸಲು ದಲ್ಲಾಳಿಗಳು ಬರುತ್ತಾರೆ. ವ್ಯವಹಾರ ಕುದುರದಿದ್ದರೆ ಬೆಂಕಿ ಹಚ್ಚಿ ಹೋಗುತ್ತಾರೆ ಎಂದು ಮಂಜುನಾಥ್ ಎಂಬ ರೈತ ಆರೋಪಿಸಿದರು. ಕಂದಾಯ ಇಲಾಖೆಯ ವಿಶ್ವನಾಥಪುರ ವೃತ್ತ ಗ್ರಾಮಲೆಕ್ಕಾಧಿಕಾರಿ ಸಂತೋಷ್, ಕುಂದಾಣ ಗ್ರಾಮ ಲೆಕ್ಕಾಧಿಕಾರಿ ಲಾವಣ್ಯ, ಅರಣ್ಯ ರಕ್ಷಕ ನಿಖೀಲ್, ಅರಣ್ಯ ವೀಕ್ಷಕ ರಂಜಿತ್, ಸ್ಥಳೀಯರು ಇದ್ದರು.
ಎಚ್ಚರಿಕೆಯಿಂದ ಇರಿ:
ಸಾಕಷ್ಟು ಸುಧಾರಿತ ಬೆಳೆ ಬೆಳೆಯಲು ಅವಕಾಶವಿದೆ. ರೈತರು ನೀಲಗಿರಿ ಬದಲು ಹೆಬ್ಬೆವು ಬೆಳೆಯಬೇಕು. ತಾಲೂಕಿನಲ್ಲಿ ಸಾಕಷ್ಟು ಕಡೆ ಬೇಸಿಗೆ ಸಮಯದಲ್ಲಿ ಇಂತಹ ಕೃತ್ಯ ಹೆಚ್ಚಾಗುತ್ತಿವೆ. ರೈತರು ಎಚ್ಚರಿಕೆಯಿಂದರಬೇಕು ಎಂದು ಅರಣ್ಯ ಇಲಾಖೆಯ ಉಪ ಅರಣ್ಯಧಿಕಾರಿ ಶಿವಶಂಕರ್ ಹೇಳಿದರು.