ಬೆಂಗಳೂರು : ಯುವತಿ ಮೇಲೆ ಜೊಮ್ಯಾಟೊ ಫುಡ್ ಡೆಲಿವರಿ ಬಾಯ್ ಹಲ್ಲೆ ನಡೆಸಿದ್ದಾನೆ ಎನ್ನುವ ಆರೋಪದ ಪ್ರಕರಣದಲ್ಲಿ ಮತ್ತೊಂದು ಹೊಸ ಬೆಳವಣೆಗೆ ನಡೆದಿದೆ.
ಇಂದು ( ಮಾರ್ಚ್ 15) ಹಲ್ಲೆಗೊಳಗಾಗಿದ್ದೇನೆ ಎಂದು ಆರೋಪಿಸಿದ ಯುವತಿ ಹಿತೇಶಾ ಚಂದ್ರಾಣಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಡೆಲಿವರಿ ಬಾಯ್ ಕಾಮರಾಜ್ ದೂರಿನ ಮೇರೆಗೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ 355 (ಹಲ್ಲೆ),504 ( ಅಪಮಾನ) ಮತ್ತು 506 ( ಕ್ರಿಮಿನಲ್ ಬೆದರಿಕೆ) ಸೆಕ್ಷನ್‍ಗಳಡಿ ಎಫ್‍ಐಆರ್ ದಾಖಲಾಗಿದೆ ಎಂದು ಎಎನ್‍ಐ ಸುದ್ದಿ ಸಂಸ್ಥೆ ಟ್ವೀಟ್ ಮಾಡಿದೆ.
ಘಟನೆ ಹಿನ್ನೆಲೆ : ಆಹಾರ ತಲುಪಿಸಲು ತಡವಾಗಿದ್ದ ವಿಚಾರಕ್ಕೆ ಹಿತೇಶಾ ಹಾಗೂ ಕಾಮರಾಜ್ ನಡುವೆ ಗಲಾಟೆ ನಡೆದಿತ್ತು. ಕಾಮರಾಜ್ ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿ ಹಿತೇಶಾ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಮಾಡಿ ಹರಿಬಿಟ್ಟಿದ್ದಳು ಹಾಗೂ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ಘಟನೆಯಿಂದ ಕಾಮರಾಜ್ ಕೆಲಸ ಕಳೆದುಕೊಳ್ಳಬೇಕಾಯಿತು. ಪೊಲೀಸರು ಕಾಮರಾಜ್ ನನ್ನು ಬಂಧಿಸಿ ಸದ್ಯ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.
ಇನ್ನು ತಾನು ಹಲ್ಲೆ ನಡೆಸಿಲ್ಲ ಎಂದು ಕಾಮರಾಜ್ ಹೇಳಿಕೊಂಡಿದ್ದು, ‘ಮಹಿಳೆಯೇ ತಮ್ಮ ಉಂಗುರದಿಂದ ಮುಖಕ್ಕೆ ಹೊಡೆದು ಕೊಂಡಿದ್ದರು. ಪರಿಣಾಮ ಮೂಗಿನಿಂದ ರಕ್ತ ಸುರಿಯಿತು. ನಾನು ಹಲ್ಲೆ ಮಾಡಿಲ್ಲ ಎಂದು ಹೇಳಿಕೊಂಡಿದ್ದ.
ಈ ಘಟನೆ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿತ್ತು. ಕಾಮರಾಜ್‍ನ ಪರ ಟ್ವಿಟರ್ ನಲ್ಲಿ ಅಭಿಯಾನ ಶುರುವಾಗಿತ್ತು. ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಸಹ ಕಾಮರಾಜ್ ನಿಜವಾಗಿಯೂ ನಿರಪರಾಧಿಯಾಗಿದ್ದರೆ, ಯುವತಿ ಹಿತೇಶಾಳಿಗೆ ದಂಡ ಹಾಕಿ ಎಂದು ರವಿವಾರ ಟ್ವೀಟ್ ಮಾಡಿದ್ದರು.