Advertisement

ಕಟೀಲ್‌ ವಿರುದ್ಧದ ಎಫ್ಐಆರ್‌ ರದ್ದು

06:00 AM Nov 21, 2018 | Team Udayavani |

ಬೆಂಗಳೂರು: ಆರೆಸ್ಸೆಸ್‌ ಕಾರ್ಯಕರ್ತ ಶರತ್‌ ಮಡಿವಾಳ ಹತ್ಯೆ ಖಂಡಿಸಿ ಹಾಗೂ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಕ್ಕೆ ಆರೆಸ್ಸೆಸ್‌ ಮುಖಂಡ ಕಲ್ಲಡ್ಕ ಪ್ರಭಾಕರ್‌ ಭಟ್‌, ಸಂಸದ ನಳಿನ್‌ ಕುಮಾರ್‌ ಕಟೀಲ್‌ ಸೇರಿ 14 ಮಂದಿ ಚುನಾಯಿತ ಜನಪ್ರತಿನಿಧಿಗಳು ಹಾಗೂ ಹಿಂದೂ ಸಂಘಟನೆಗಳ ಮುಖಂಡರ ಮೇಲೆ ಬಂಟ್ವಾಳ ಪೊಲೀಸರು ದಾಖಲಿಸಿದ್ದ ಎಫ್ ಐಆರ್‌ನ್ನು ಹೈಕೋರ್ಟ್‌ ಮಂಗಳವಾರ ವಜಾಗೊಳಿಸಿ ಆದೇಶಿಸಿತು.

Advertisement

ಈ ಕುರಿತಂತೆ ಮಂಗಳೂರು ಲೋಕಸಭಾ ಕ್ಷೇತ್ರದ ಸದಸ್ಯ ನಳಿನ್‌ ಕುಮಾರ್‌ ಕಟೀಲ್‌ ಹಾಗೂ ಇತರ 13 ಮಂದಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಅಶೋಕ್‌ ಜಿ.ನಿಜಗಣ್ಣನವರ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ, “ನಿಷೇಧಾಜ್ಞೆ ಉಲ್ಲಂಘನೆ ಮಾಡಿದ ಪ್ರಕರಣದಲ್ಲಿ ಪೊಲೀಸರಿಗೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳುವ  ಅಧಿಕಾರವಿಲ್ಲ. ನಿಷೇಧಾಜ್ಞೆ ಜಾರಿಗೊಳಿಸಿದವರೆ ದೂರು
ದಾಖಲಿಸಿಕೊಳ್ಳಬೇಕು’ ಎಂಬ ಅರ್ಜಿದಾರರ ಪರ ವಕೀಲರ ವಾದವನ್ನು ಮಾನ್ಯ ಮಾಡಿ ಈ ಮೇಲಿನ ಆದೇಶ ನೀಡಿತು. ಅರ್ಜಿದಾರರ ಪರ ವಕೀಲ ಅರುಣ್‌ ಶ್ಯಾಮ್‌ ವಾದ ಮಂಡಿಸಿದರು. 

ಅರ್ಜಿದಾರರು ಎಲ್ಲರೂ ಸಾಮಾಜಿಕ ಕಾರ್ಯಕರ್ತರು, ರಾಷ್ಟ್ರವಾದಿಗಳು ಹಾಗೂ ಧಾರ್ಮಿಕ ವ್ಯಕ್ತಿಗಳಾಗಿದ್ದಾರೆ. ಎಲ್ಲರೂ ಹಲವು ಶೈಕ್ಷಣಿಕ ಹಾಗೂ ದತ್ತಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇವರೆಲ್ಲರ ವಿರುದ್ಧ ಬಂಟ್ವಾಳ ಪೊಲೀಸರು 2017ರ ಜು.7ರಂದು ದಾಖಲಿಸಿರುವ ಎಫ್ಐಆರ್‌ನಲ್ಲಿ ಸುಳ್ಳು, ಕ್ಷುಲ್ಲಕ ಹಾಗೂ ನಿರಾಧಾರ ಆರೋಪಗಳನ್ನು ಮಾಡಲಾಗಿದೆ. ಅಲ್ಲದೆ ಘಟನೆ ನಡೆದು,
ಎಫ್ಐಆರ್‌ ದಾಖಲಾದ ಏಳು ತಿಂಗಳ ಬಳಿಕ ಅಂದರೆ, 2018ರ ಫೆ.15ರಂದು ವಿಚಾರಣೆಗೆ ಹಾಜರಾಗಲು ನೋಟಿಸ್‌
ನೀಡಲಾಗಿದೆ. ಅರ್ಜಿದಾರರು ಸಮಾಜದಲ್ಲಿ ಹೊಂದಿರುವ ಘನತೆ, ಗೌರವಗಳಿಗೆ ಚ್ಯುತಿ ತರಲು ಪೊಲೀಸರು ತಮ್ಮ ವ್ಯಾಪ್ತಿ ಮೀರಿ ಅವರುಗಳ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ. ಆದ್ದರಿಂದ, ಪೊಲೀಸರು ದಾಖಲಿಸಿಕೊಂಡಿರುವ ದೂರು, ಎಫ್ಐಆರ್‌ ಹಾಗೂ ಇಡೀ ವಿಚಾರಣಾ ಪ್ರಕ್ರಿಯೆಯನ್ನೇ ರದ್ದುಗೊಳಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next