ನವದೆಹಲಿ:ಹಾಸ್ಟೆಲ್ ಶುಲ್ಕವನ್ನು ಮಿತಿಮೀರಿ ಹೆಚ್ಚಳ ಮಾಡಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಮಂಗಳವಾರ ಜವಾಹರಲಾಲ್ ನೆಹರು ಯೂನಿರ್ವಸಿಟಿ(ಜೆಎನ್ ಯು) ವಿದ್ಯಾರ್ಥಿಗಳ ಮೇಲೆ ಎರಡು ಪ್ರಕರಣ ದಾಖಲಿಸಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಪ್ರತಿಭಟನೆಗೆ ಸಂಬಂಧಿಸಿದಂತೆ ಕೃಷ್ಣಗಢ್ ಪೊಲೀಸ್ ಠಾಣೆ ಹಾಗೂ ಲೋಧಿ ಕಾಲೋನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ವರದಿ ಹೇಳಿದೆ.
ಸಹಾಯಕ ಪೊಲೀಸ್ ಕಮೀಷನರ್ ಅತುಲ್ ಕುಮಾರ್ ಠಾಕೂರ್ ಮಾಹಿತಿ ಪ್ರಕಾರ, ವಿದ್ಯಾರ್ಥಿಗಳ ವಿರುದ್ಧ ಐಪಿಸಿ ಸೆಕ್ಷನ್ಸ್ 186, 353, 332, 188ರ ಅಡಿ ಲೋಧಿ ಕಾಲೋನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಐಪಿಸಿ ಸೆಕ್ಷನ್ 147(ಗಲಭೆ), 148 (ಗಲಭೆ, ಮಾರಕಾಯುಧ ಬಳಕೆ), 149 (ಕಾನೂನು ಬಾಹಿರವಾಗಿ ಗುಂಪುಸೇರಿ ಗಲಾಟೆ), 151(5 ಜನರಿಗಿಂತ ಹೆಚ್ಚು ಜನರ ಗುಂಪು), 34(ಗುಂಪು ಗಲಾಟೆ), 3(ಸಾರ್ವಜನಿಕ ಆಸ್ತಿ-ಪಾಸ್ತಿಗೆ ಹಾನಿ)ರ ಅನ್ವಯ ಎಫ್ ಐಆರ್ ದಾಖಲಾಗಿದೆ ಎಂದು ವರದಿ ಹೇಳಿದೆ.
ಎಫ್ಐಆರ್ ದಾಖಲಾದ ಬಗ್ಗೆ ಜೆಎನ್ ಯು ಸ್ಟೂಡೆಂಟ್ಸ್ ಯೂನಿಯನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸೋಮವಾರ ಜೆಎನ್ ಯು ವಿದ್ಯಾರ್ಥಿಗಳು ಸಾವಿರಾರು ಸಂಖ್ಯೆಯಲ್ಲಿ ಸೇರಿ ರಾಜಧಾನಿ ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ್ದರು. ಹಾಸ್ಟೆಲ್ ಶುಲ್ಕ ಏರಿಕೆ ಖಂಡಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದ್ದರು.