ಶ್ರೀನಗರ: ಪಕ್ಷದ ಕಾರ್ಯಕರ್ತರ ಬಂಧನ ವಿರೋಧಿಸಿ ಬಿಜ್ ಬೆಹರಾ ಅನಂತನಾಗ್ ಮುಖ್ಯರಸ್ತೆಯನ್ನು ತಡೆದು ಪ್ರತಿಭಟನೆ ನಡೆಸಿದ್ದ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೆ, ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ವಿರುದ್ಧ ಜಮ್ಮು-ಕಾಶ್ಮೀರ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ.
ಇದನ್ನೂ ಓದಿ:Bellary: ಸರಕಾರಿ ಅಧಿಕಾರಿ ಆತ್ಮಹತ್ಯೆ… ಸಚಿವ ನಾಗೇಂದ್ರ ರಾಜೀನಾಮೆಗೆ ಗಡವು ನೀಡಿದ ಬಿಜೆಪಿ
ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದಡಿ ನನ್ನ ಮೇಲೆ ಎಫ್ ಐಆರ್ ದಾಖಲಿಸಲಾಗಿದೆ. ಸತ್ಯವನ್ನು ಹೇಳಿದ್ದಕ್ಕಾಗಿ ಪಿಡಿಪಿ ಬೆಲೆ ತೆತ್ತಂತಾಗಿದೆ. ಪಿಡಿಪಿಯ ನೂರಾರು ಕಾರ್ಯಕರ್ತರನ್ನು ಬಂಧಿಸಿರುವುದನ್ನು ಖಂಡಿಸಿ ನಾವು ಪ್ರತಿಭಟನೆ ನಡೆಸಿದ್ದಕ್ಕೆ ದೂರು ದಾಖಲಿಸಲಾಗಿದೆ ಎಂದು ಮೆಹಬೂಬಾ ಮುಫ್ತಿ ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.
ಮೆಹಬೂಬಾ ಮುಫ್ತಿ ವಿರುದ್ಧ ದಾಖಲಿಸಿರುವ ಎಫ್ ಐಆರ್ ಅನ್ನು ಖಂಡಿಸಿರುವ ಇಲ್ತಿಜಾ ಮುಫ್ತಿ, ಇದು ಪಿಡಿಪಿ ಪಕ್ಷಕ್ಕೆ ಬೆದರಿಕೆಯಾಗಿದೆ ಎಂದು ಆರೋಪಿಸಿದ್ದಾರೆ.
ನಾವು ಇಂತಹ ಬೆದರಿಕೆಗೆ ಹೆದರುವ ಪ್ರಶ್ನೆಯೇ ಇಲ್ಲ. ನಾವು ಇಲ್ಲಿ ಸತ್ಯ ಹೇಳುವ ಕೆಲಸ ಮಾಡುತ್ತಿದ್ದು, ಇನ್ನು ಮುಂದೆಯೂ ಸತ್ಯ ಹೇಳುವ ಕೆಲಸ ಮುಂದುವರಿಸುತ್ತೇವೆ ಎಂದು ಮುಫ್ತಿ ಪುತ್ರಿ ಇಲ್ತಿಜಾ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಜತೆ ಕೈಜೋಡಿಸಿರುವ ಜಮ್ಮುಕಾಶ್ಮೀರದ ಅಧಿಕಾರಿಗಳು, ಈ ಪ್ರದೇಶದಲ್ಲಿ ಭಯ ಹುಟ್ಟಿಸುವ ಕೆಲಸ ಮಾಡುವ ಮೂಲಕ ಪಿಡಿಪಿ ಕಾರ್ಯಕರ್ತರನ್ನು ಹೆದರಿಸುವ ಕೆಲಸ ಮಾಡಿದೆ ಎಂದು ಇಲ್ತಿಜಾ ಆರೋಪಿಸಿದ್ದಾರೆ.