ಬೆಂಗಳೂರು: ಡಾ.ಶಿವರಾಮ ಕಾರಂತ ಬಡವಾಣೆಯ ಡಿನೋಟಿಫಿಕೇಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸಿಬಿ ತನಿಖೆಗೆ ತಡೆಯಾಜ್ಞೆ ನೀಡುವಂತೆ ಕೋರಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಪೂರ್ಣಗೊಳಿಸಿರುವ ಹೈಕೋರ್ಟ್ ತೀರ್ಪು ನೀಡುವ ಪ್ರಕ್ರಿಯೆ ಆರಂಭಿಸಿದೆ.
ಈ ಪ್ರಕರಣದ ಬಗ್ಗೆ ನ್ಯಾಯಮೂರ್ತಿ ಅರವಿಂದಕುಮಾರ್ ಅವರಿದ್ದ ಏಕಸದಸ್ಯ ಪೀಠ, ಗುರುವಾರ ತೀರ್ಪು ನೀಡಲು ಆರಂಭಿಸಿದ್ದು ಇಡೀ ದಿನ ವಾದ-ಪ್ರತಿವಾದಗಳ ಅಂಶಗಳನ್ನು ಆಧರಿಸಿ ತೀರ್ಪನ್ನು ಬರೆಸಿದರು. ಶುಕ್ರವಾರ ಪೂರ್ಣಪ್ರಮಾಣದ ತೀರ್ಪು ಪ್ರಕಟವಾಗುವ ಸಾಧ್ಯತೆಯಿದ್ದು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ರಿಲೀಫ್ ಸಿಗಲಿದೆಯೇ ಇಲ್ಲವೋ ಎಂಬುದು ಕುತೂಹಲ ಮೂಡಿಸಿದೆ.
ಗುರುವಾರ ದಿನವಿಡೀ ನೀಡಿದ ತೀರ್ಪಿನಲ್ಲಿ ನ್ಯಾಯಪೀಠ, ಎಸಿಬಿ ಒಂದೇ ದೂರಿಗೆ ಎರಡು ಎಫ್ಐಆರ್ ದಾಖಲಿಸಿದ್ದಕ್ಕೆ ಯಡಿಯೂರಪ್ಪನವರ ಪರ ವಕೀಲರು ಎತ್ತಿರುವ ಆಕ್ಷೇಪ ಹಾಗೂ ಎಸಿಬಿಯ ಪ್ರತಿವಾದಗಳ ಅಂಶಗಳನ್ನು ದಾಖಲಿಸಿದೆ. ಅಲ್ಲದೆ ಪ್ರಮುಖ ಮೂರು ಕಾನೂನು ಅಂಶಗಳನ್ನು ಪ್ರಸ್ತಾಪಿಸಿದ್ದು ಶುಕ್ರವಾರ ತೀರ್ಪಿನಲ್ಲಿ ನಾಲ್ಕನೇ ಅಂಶವನ್ನೂ ಉಲ್ಲೇಖೀಸಲಿದೆ.
ಉದ್ದೇಶಿತ ಶಿವರಾಮ ಕಾರಂತ ಬಡವಾಣೆಯ ಭೂ ಸ್ವಾಧೀನ ಪ್ರಕ್ರಿಯೆಯಿಂದ 257 ಎಕರೆ ಜಮೀನು ಕೈ ಬಿಡುವಂತೆ ಅಂದಿನ ಸಿಎಂ ಬಿ.ಎಸ್.ಯಡಿಯೂರಪ್ಪ ಸೂಚಿಸಿದ್ದು, ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಸಂಬಂಧ ಎಸಿಬಿ ಎರಡು ಪ್ರತ್ಯೇಕ ಎಫ್ಐಆರ್‌ಗಳನ್ನು ದಾಖಲಿಸಿಕೊಂಡಿದೆ.
ಕಿಕ್ಕಿರಿದು ತುಂಬಿದ್ದ ವಕೀಲರು!: ಸಾಕಷ್ಟು ಕುತೂಹಲ ಕೆರಳಿಸಿರುವ ಈ ಪ್ರಕರಣದ ತೀರ್ಪು ಆಲಿಸಲು ಕೋರ್ಟ್ ಹಾಲ್‌ನ ಒಳಗೆ ವಕೀಲರು ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದರು. ಜೊತೆಗೆ ಭ್ರಷ್ಟಾಚಾರ ನಿಗ್ರಹದಳದ ಉನ್ನತ ಅಧಿಕಾರಿಗಳು, ಯಡಿಯೂರಪ್ಪ ಆಪ್ತ ಸಿಬ್ಬಂದಿಯೂ ನ್ಯಾಯಪೀಠದ ತೀರ್ಪನ್ನು ಆಲಿಸಿದರು.