ಕಾಗವಾಡ: ಕಾಂಗ್ರೆಸ್ ಕಾರ್ಯಕರ್ತ ವಿವೇಕ್ ಶೆಟ್ಟಿ ಅವರ ಮೇಲೆ ನಂಡೆ ಗುಂಪು ದಾಳಿಗೆ ಸಂಬಂಧಿಸಿ ಎಫ್ಐಆರ್ ದಾಖಲಾಗುತ್ತಿದ್ದಂತೆ ಬಿಜೆಪಿ ಶಾಸಕ ರಾಜು ಕಾಗೆ, ಕುಟುಂಬ ಸೇರಿ 13 ಮಂದಿ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.
ಜನವರಿ 9 ರಂದು ವಿವೇಕ್ ಶೆಟ್ಟಿ ಮೇಲೆ ಮಹಿಳೆಯರು ಸೇರಿದಂತೆ ಗುಂಪು ದಾಳಿ ನಡೆಸಿ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದರು. ಈ ಸಂಬಂಧ ಪೊಲೀಸರು ಎಫ್ಐಆರ್ ದಾಖಲಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳು ತಲೆ ಮರೆಸಿಕೊಳ್ಳಲು ಸಹಕಾರಿಯಾದ ಆರೋಪದಲ್ಲಿ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತರು ಶಂಕರ್ ವಾಘಮೋರೆ, ಮಲಗೊಂಡ ಪಾಟೀಲ್, ಸುದರ್ಶನ್ ನಾಂದೇಣಿ ಮತ್ತು ರವೀಂದ್ರ ನಾಗ್ಮನಿ ಎಂದು ತಿಳಿದು ಬಂದಿದೆ.
ಪೊಲೀಸರು ಆರೋಪಿಗಳಾದ ರಾಜು ಕಾಗೆ ಕುಟುಂಬದ ಶೋಧ ಕಾರ್ಯದಲ್ಲಿ ನಿರತರಾಗಿದ್ದಾರೆ. ವಿವೇಕ್ ಶೆಟ್ಟಿ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು ಚೇತರಿಸಿಕೊಂಡಿದ್ದಾರೆ.
ಕಾಗೆ ಬೆಂಬಲಿಗ ಗುಂಪು ವಿವೇಕ್‌ಶೆಟ್ಟಿಗೆ ಬಡಿಗೆಗಳಿಂದ ಹಿಗ್ಗಾಮುಗ್ಗಾ ಥಳಿಸಿ, ಮೆಟ್ಟಿಲುಗಳಲ್ಲಿ ದರದರನೆ ಎಳೆದೊಯ್ದ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಕಾಗೆ ಪುತ್ರಿಯ ವಿರುದ್ಧ ಫೇಸ್ ಬುಕ್ನಲ್ಲಿ ಅವಹೇಳನಕಾರಿಯಾಗಿ ಬರೆದ ಎಂಬ ಆರೋಪದಲ್ಲಿ ರೊಚ್ಚಿಗೆದ್ದ ಕಾಗೆ ಸಹೋದರ ಸೇರಿದಂತೆ 11 ಮಂದಿ ಸಂಬಂಧಿಕರು ಹಲ್ಲೆ ನಡೆಸಿದ್ದರು.