ಕಲಬುರಗಿ: ಕೊವಿಡ್-19 ವೈರಸ್ ವ್ಯಾಪಕ ನಡುವೆ ಎಲ್ಲೆಂದರಲ್ಲಿ ನಿಲ್ಲಿಸುವ, ಅಡ್ಡಾದಿಡ್ಡಿಯಾಗಿ ಓಡಿಸುವ ಹಾಗೂ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವ ಆಟೋಗಳ ವಿರುದ್ಧ ಇಲ್ಲಿನ ಸಂಚಾರಿ ಪೊಲೀಸರು ಎಫ್ ಐಆರ್ ದಾಖಲಿಸಲು ಮುಂದಾಗಿದ್ದಾರೆ.
ಎಷ್ಟೇ ತಿಳಿ ಹೇಳಿದರೂ ಆಟೋ ಚಾಲಕರು ಸಂಚಾರಿ ನಿಯಮಗಳಿಗೆ ಕ್ಯಾರೇ ಎನ್ನದ ಹಿನ್ನೆಲೆಯಲ್ಲಿ ಸಂಚಾರಿ ವಿಭಾಗದವರು ಎಫ್ಐಆರ್ ಹಾಕುವ ಕಾರ್ಯಾಚರಣೆ ಗೆ ಇಳಿದಿದ್ದಾರೆ.
ಜುಲೈ 27ರ ಸೋಮವಾರದಿಂದ ಸುಗಮ ಸಂಚಾರ ಕಲ್ಪಿಸುವ ಹಿನ್ನೆಲೆಯಲ್ಲಿ ಎಫ್ ಐಆರ್ ಹಾಕುವ ಕಾರ್ಯ ಆರಂಭಿಸಿದ್ದು, ಈಗಾಗಲೇ ಆರು ಆಟೋಗಳ ವಿರುದ್ದ ಮೊಕದ್ದಮೆ ದಾಖಲಿಸಲಾಗಿದೆ.
ಸಂಚಾರಿ-1 ಠಾಣೆಯ ಇನ್ಸ್ಪೆಕ್ಟರ್ ರಮೇಶ ಕಾಂಬಳೆ ಹಾಗೂ ಸಂಚಾರಿ ಠಾಣೆ-2 ಇನ್ಸ್ಪೆಕ್ಟರ್ ಶಾಂತಿನಾಥ ಹಾಗೂ ಸಿಬ್ಬಂದಿಯವರು ಸಂಚಾರಿ ನಿಯಮಗಳ ಉಲ್ಲಂಘಿಸುವ ಅಟೋಗಳಿಗೆ ದಂಡ ವಿಧಿಸುವ ಬದಲು ಎಫ್ಐಆರ್ ದಾಖಲಿಸುವ ಮೂಲಕ ಆಟೋಗಳಿಗೆ ಬಿಸಿ ಮುಟ್ಟಿಸಿದ್ದಾರೆ.
ಕೋವಿಡ್ 19 ಸ್ಪೋಟವಾಗುತ್ತಿರುವುದರಿಂದ ಎಲ್ಲರೂ ಜವಾಬ್ದಾರಿಯಿಂದ ನಿರ್ವಹಿಸುವುದು ಅಗತ್ಯವಾಗಿದೆ. ಬಹು ಮುಖ್ಯವಾಗಿ ದಟ್ಟ ಸಂಚಾರಿ ದೂರ ಮಾಡಬೇಕಾಗಿದೆ. ಹೀಗಾಗಿ ಸಂಚಾರಿ ಪೊಲೀಸರು ಮೊಕದ್ದಮೆ ದಾಖಲಿಸುವ ಕಾರ್ಯಾಚರಣೆಗೆ ಇಳಿದಿದ್ದಾರೆಂದು ಸಂಚಾರ ಉಪ ವಿಭಾಗದ ಎಸಿಪಿ ವಿರೇಶ ಕರಡಿಗುಡ್ಡ ತಿಳಿಸಿದ್ದಾರೆ.