Advertisement

ಪದ್ಮನಾಭ ರೆಡ್ಡಿ ಸೇರಿ 12 ಮಂದಿ ವಿರುದ್ಧ ಎಫ್ಐಆರ್‌

12:14 PM Apr 11, 2018 | Team Udayavani |

ಬೆಂಗಳೂರು: ಕೋಲಾರದ ನರಸಾಪುರ ಹೋಬಳಿಯ ಭೈರಸಂದ್ರದಿಂದ 62 ಅಡಿ ಏಕಶಿಲಾ ಹನುಮ ಮೂರ್ತಿ ಹೊತ್ತು ತರುತ್ತಿದ್ದ ವಾಹನವು ಕಾಚರಕನಹಳ್ಳಿಗೆ ಬಂದು ಸೇರಿದೆ. ಆದರೆ, ಅದರ ರವಾನೆಗಾಗಿ ಮೋರಿ ಮುಚ್ಚಿದ್ದ ಹಾಗೂ ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಆಯೋಜಕರಾದ ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ, ಜಗದೀಶ್‌ ರೆಡ್ಡಿ, ಎಂ.ಎನ್‌.ರೆಡ್ಡಿ ಹಾಗೂ ಗೋಪಾಲ ರೆಡ್ಡಿ ಸೇರಿದಂತೆ 12 ಮಂದಿ ವಿರುದ್ಧ ಎಫ್ಐಆರ್‌ ದಾಖಲಿಸಲಾಗಿದೆ.

Advertisement

ಸೋಮವಾರ ಬೆಳಿಗ್ಗೆ ಎಚ್‌ಬಿಆರ್‌ ಬಡಾವಣೆ ಪ್ರವೇಶಿಸಿದ್ದ ಮೂರ್ತಿಯನ್ನು ಕೋದಂಡ ರಾಮಸ್ವಾಮಿ ದೇವಾಲಯದ ಮೈದಾನದತ್ತ ತರಲಾಗುತ್ತಿತ್ತು. ಇದಕ್ಕಾಗಿ ರಸ್ತೆಯಲ್ಲಿದ್ದ ವಿಭಜಕಗಳನ್ನು ಒಡೆದು ಹಾಕಲಾಯಿತು. ಜತೆಗೆ ರಸ್ತೆ ಪಕ್ಕದಲ್ಲಿದ್ದ ಮೋರಿಯನ್ನು ಮುಚ್ಚಲಾಯಿತು.

ಇದಕ್ಕೆ ಯಾವುದೇ ಅನುಮತಿಯನ್ನೂ ಆಯೋಜಕರು ಪಡೆದಿರಲಿಲ್ಲ. ಈ ಸಂಬಂಧ ಮಾಹಿತಿ ಪಡೆದು ಸ್ಥಳಕ್ಕೆ ಬಂದ ಉಪವಿಭಾಗಾಧಿಕಾರಿ ಜಗದೀಶ್‌, ಆಯೋಜಕರ ವರ್ತನೆಯನ್ನು ಪ್ರಶ್ನಿಸಿದರು. ಮೂರ್ತಿ ರವಾನೆ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕಿತ್ತು. ಏಕಾಏಕಿ ಸಾರ್ವಜನಿಕರ ಆಸ್ತಿಗೆ ಧಕ್ಕೆ ಮಾಡುವುದು ಅಪರಾಧ ಎಂದು ಹೇಳಿ ಪ್ರಕರಣ ದಾಖಲಿಸಿದ್ದಾರೆ.

ಮೂರ್ತಿ ಹೊತ್ತ ಲಾರಿಯು 26 ಅಡಿ ಅಗಲವಿದೆ. 750 ಟನ್‌ ಭಾರವಿದೆ. ಇದನ್ನು ರಸ್ತೆಯಲ್ಲಿ ಸಾಗಿಸುವಾಗ ಸರ್ಕಾರಿ ಜಾಗದಲ್ಲಿ ಅತಿಕ್ರಮವಾಗಿ ಪ್ರವೇಶಿಸಲಾಗಿದೆ. ಅದನ್ನು ಕೇಳಿದ್ದ ಸರ್ಕಾರಿ ಅಧಿಕಾರಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ. ಈ ಸಂಬಂಧ ಉಪವಿಭಾಗಾಧಿಕಾರಿ ಜಗದೀಶ್‌ ಅವರೇ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next