ಬಾಗಲಕೋಟೆ: ಲೋಕಸಭೆ ಚುನಾವಣೆಗೆ ಟಿಕೆಟ್ ಸಿಗದ ಕಾರಣ ಮುನಿಸಿಕೊಂಡಿದ್ದ ಜಿ.ಪಂ. ಮಾಜಿ ಅಧ್ಯಕ್ಷೆ, 2019ರ ಕಾಂಗ್ರೆಸ್ ಅಭ್ಯರ್ಥಿ ವೀಣಾ ಕಾಶಪ್ಪನವರ್ ಅವರು ದಿಢೀರ್ ಬೆಳವಣಿಗೆಯಲ್ಲಿ ಕಾಂಗ್ರೆಸ್ ಪಾಳಯದಲ್ಲಿ ಕಾಣಿಸಿಕೊಂಡಿದ್ದು, ಜಿಲ್ಲೆಯ ಕಾಂಗ್ರೆಸ್ ಬಿಕ್ಕಟ್ಟು ಬಹುತೇಕ ಶಮನವಾದಂತಿದೆ.
ಟಿಕೆಟ್ ಘೋಷಣೆಯಿಂದಲೂ ಕಾಂಗ್ರೆಸ್ ನಾಯಕರಿಗೆ ಮುಜುಗರ ತರಿಸುತ್ತಿದ್ದ ವೀಣಾ ಶುಕ್ರವಾರ ಕಾಂಗ್ರೆಸ್ ಬೃಹತ್ ಮೆರವಣಿಗೆಯಲ್ಲಿ ಪತಿಯೊಂದಿಗೆ ಕಾಣಿಸಿಕೊಳ್ಳುವ ಜತೆಗೆ ಪಕ್ಷದ ಅಭ್ಯರ್ಥಿ ಸಂಯುಕ್ತಾ ಪಾಟೀಲ್ ಗೆಲುವಿಗೆ ಶ್ರಮಿಸುವ ಮಾತು ಕೊಟ್ಟಿದ್ದಾರೆ. ವೀಣಾಗೆ ಕೊನೆ ಗಳಿಗೆಯಲ್ಲಿ ಟಿಕೆಟ್ ಕೈತಪ್ಪಿತ್ತು.
ಜಿಲ್ಲಾ ನಾಯಕರ ಶಿಫಾರಸು ಪಟ್ಟಿಯಲ್ಲಿ ಅವರ ಹೆಸರಿರಲಿಲ್ಲ ಎಂಬುದು ಕೆಪಿಸಿಸಿ ವಿವರಣೆಯಾದರೆ, ಕೆಪಿಸಿಸಿಯಿಂದ ನಮಗೆ ಹೆಸರೇ ಬಂದಿಲ್ಲ ಎಂಬುದು ಎಐಸಿಸಿ ವಾದವಾಗಿತ್ತು. ಇದರಿಂದ ನೊಂದಿದ್ದ ವೀಣಾ ಬೆಂಬಲಿಗರ ಸಭೆ ನಡೆಸಿದ್ದರು. ಈ ಮಧ್ಯೆ ಬೆಂಗಳೂರಿನಲ್ಲಿ ಸ್ವತಃ ಸಿಎಂ, ಡಿಸಿಎಂ ನೇತೃತ್ವದಲ್ಲಿ ಸಂಧಾನ ನಡೆದರೂ ವೀಣಾ ಮುನಿಸು ಶಮನವಾಗಿರಲಿಲ್ಲ. ಅವರ ಪತಿ ವಿಜಯಾನಂದ ಅವರು ಪಕ್ಷದ ಪರ ಪ್ರಚಾರ ಆರಂಭಿಸಿದ್ದರೂ ವೀಣಾ ಕಾಣಿಸಿಕೊಂಡಿರಲಿಲ್ಲ. ದಾವಣಗೆರೆಯಲ್ಲಿ ವಾರಗಳ ಕಾಲ ತಂದೆ-ತಾಯಿ ಜತೆಗಿದ್ದ ಅವರು, ಶುಕ್ರವಾರ ಮಧ್ಯಾಹ್ನ ಕಾಂಗ್ರೆಸ್ ಮೆರವಣಿಗೆಯಲ್ಲಿ ಕಾಣಿಸಿಕೊಂಡರು.
ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಸ್ಥಾನದ ಭರವಸೆ?
ವೀಣಾಗೆ ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಸ್ಥಾನ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಹಾಲಿ ಅಧ್ಯಕ್ಷೆ ಪುಷ್ಪಾ ಅಮರನಾಥ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರಕ್ಕೆ ನೇಮಕಗೊಂಡಿದ್ದಾರೆ.