ಮೈಸೂರು: ಕೋವಿಡ್-19 ಹೆಚ್ಚುತ್ತಿರುವ ಆತಂಕದ ನಡುವೆಯೂ ಶಿಕ್ಷಣ ಇಲಾಖೆ ಅಗತ್ಯ ಮುಂಜಾಗ್ರತಾ ಕ್ರಮಗಳೊಂದಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಶುಕ್ರವಾರಕ್ಕೆ ನಿರಾತಂಕವಾಗಿ ಮುಕ್ತಾಯಗೊಳಿಸಿದೆ. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಹಾಗೂ ಪೋಷಕರು ನಿಟ್ಟುಸಿರು ಬಿಡುವಂತಾಗಿದೆ. ದಿನದಿಂದ ದಿನಕ್ಕೆ ಕೋವಿಡ್ 19 ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ನಡುವೆಯೂ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಮುಂದಾದ ಶಿಕ್ಷಣ ಇಲಾಖೆ, ವಿದ್ಯಾರ್ಥಿಗಳಿಗೆ ಸೋಂಕು ಹರಡದಂತೆ ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳೊಂದಿಗೆ ಯಶಸ್ವಿಯಾಗಿ ಪರೀಕ್ಷೆ ನಡೆಸಿದೆ.
ಪೋಷಕರ ಪ್ರಶಂಸೆ: ಜಿಲ್ಲೆಯ ವಿವಿಧೆಡೆ ಕಂಟೈನ್ಮೆಂಟ್ ಪ್ರದೇಶಗಳು ಹೆಚ್ಚಾಗಿದ್ದರಿಂದ, ಆ ಪ್ರದೇಶದ ವ್ಯಾಪ್ತಿಗೆ ಬರುವ ವಿದ್ಯಾರ್ಥಿಗಳು ಸಹ ಯಾವುದೇ ಸಮಸ್ಯೆ ಇಲ್ಲದೆ ಪರೀಕ್ಷೆ ಬರೆಯಲು ಅಗತ್ಯ ಸೌಲಭ್ಯ ಒದಗಿಸಲಾಗಿತ್ತು. ಯಾವೊಬ್ಬ ವಿದ್ಯಾರ್ಥಿಗೂ ಸೋಂಕು ತಗುಲದಂತೆ ಇಲಾಖೆ ಕೈಗೊಂಡ ಕ್ರಮಕ್ಕೆ ಪೋಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಆತಂಕವಿಲ್ಲದೆ ಮುಕ್ತಾಯ: ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾಗಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಕೋವಿಡ್ 19 ಕರಿ ನೆರಳು ಆವರಿಸಿತ್ತು. ಈ ಹಿನ್ನೆಲೆ ಮೇ ತಿಂಗಳ ಕೊನೆಯಲ್ಲಿ ಆರಂಭವಾಗಬೇಕಿದ್ದ ಪರೀಕ್ಷೆ ಜೂ.25ರಂದು ಆರಂಭಿಸಲಾಗಿತ್ತು. ಶುಕ್ರವಾರ ಯಾವುದೇ ಸಮಸ್ಯೆಯಿಲ್ಲದೆ ಎಲ್ಲಾ ಪರೀಕ್ಷೆಗಳು ನಿರಾಂತಕವಾಗಿ ಮುಕ್ತಾಯಗೊಂಡಿದೆ. ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆಯೊಂದಿಗೆ ಕೈ ಜೋಡಿಸಿ, ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲಾಗಿತ್ತು.
ಕೋವಿಡ್ 19 ಭೀತಿಯಿಂದ ತವರಿಗೆ ಮರಳಿದ 476 ವಿದ್ಯಾರ್ಥಿಗಳು ಸೇರಿದಂತೆ 139 ಪರೀಕ್ಷೆ ಕೇಂದ್ರಗಳಲ್ಲಿ ಪರೀಕ್ಷೆ ಬರೆದರು. ಸಾರ್ವಜನಿಕ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಹೆಚ್ಚು ನಿಗಾವಹಿಸಿದ್ದರು. ಜೊತೆಗೆ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಹಾಜರಾಗಲು ಸಮಸ್ಯೆ ಆಗದಂತೆ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಬಳಸಿಕೊಳ್ಳುವ ಮೂಲಕ ಸಾರಿಗೆ ಸೌಲಭ್ಯವನ್ನು ಒದಗಿಸಿತ್ತು. ತೃತೀಯ ಭಾಷೆಯ ಪರೀಕ್ಷೆಗೆ 37, 675 ವಿದ್ಯಾರ್ಥಿಗಳು ಹಾಜರಾದರೆ, 356 ವಿದ್ಯಾರ್ಥಿಗಳು ಗೈರಾದರು.
ತಾಯಿ ಅಗಲಿದ ನೋವಿನಲ್ಲೇ ಪರೀಕ್ಷೆ ಬರೆದ ದೀಪು: ಎಸ್ಸೆಸ್ಸೆಲ್ಸಿಯ ಕೊನೆ ಪರೀಕ್ಷೆ ದಿನದಂದು ತನ್ನ ತಾಯಿಯನ್ನು ಕಳೆದುಕೊಂಡ ವಿದ್ಯಾರ್ಥಿನಿಯೊಬ್ಬಳು ತಾಯಿ ಅಗಲಿಕೆಯ ನೋವಿನಲ್ಲೇ ಪರೀಕ್ಷೆ ಬರೆದಳು. ಮೈಸೂರು ತಾಲೂಕು ಬೀರಿಹುಂಡಿ ಗ್ರಾಮದ ನಿವಾಸಿ ಲಕ್ಷ್ಮಮ್ಮ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಗುರುವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.
ತಾಯಿಯ ಸಾವಿನ ನೋವಿನಿಂದಾಗಿ ದೀಪು ಪರೀಕ್ಷೆ ಬರೆಯಲು ಹಿಂದೇಟು ಹಾಕಿದ್ದಳು. ಆದರೆ ಬೀರಿಹುಂಡಿ ಗ್ರಾಪಂ ಮಾಜಿ ಸದಸ್ಯ ಶಿವಣ್ಣ, ವಿದ್ಯಾರ್ಥಿನಿಗೆ ಧೈರ್ಯ ತುಂಬಿ ತಮ್ಮ ಕಾರಿನಲ್ಲೇ ರೂಪಾನಗರದ ಪರೀಕ್ಷಾ ಕೇಂದ್ರಕ್ಕೆ ಕರೆದುಕೊಂಡು ಬಂದು ಪರೀಕ್ಷೆ ಬರೆಸಿದರು. ಪರೀಕ್ಷೆ ಮುಗಿದ ಬಳಿಕ ವಾಪಸ್ ಕಾರಿನಲ್ಲೇ ಕರೆದುಕೊಂಡು ಹೋಗಿ, ತಾಯಿ ಅಂತ್ಯಸಂಸ್ಕಾರದಲ್ಲಿ ಭಾಗವಹಿಸುವಂತೆ ನೋಡಿಕೊಂಡರು.
ಕಂಟೈನ್ಮೆಂಟ್ ಪ್ರದೇಶದಿಂದ ಬಂದ 81 ವಿದ್ಯಾರ್ಥಿಗಳು ಅನಾರೋಗ್ಯದಿಂದ ಬಳಲಿದ 34 ವಿದ್ಯಾರ್ಥಿಗಳು ಪ್ರತ್ಯೇಕ ಕೊಠಡಿ ಯಲ್ಲಿ ಪರೀಕ್ಷೆ ಬರೆದರು. ಇವರ ಜೊತೆಗೆ ವಸತಿ ನಿಲಯಗಳಿಂದ ಬಂದ 446, ಹೊರ ಜಿಲ್ಲೆಗಳಿಂದ ಬಂದ 339 ವಿದ್ಯಾರ್ಥಿಗಳು ಪರೀಕ್ಷೆ ಬರೆದರು.
-ಡಾ.ಪಾಂಡುರಂಗ, ಉಪ ನಿರ್ದೇಶಕ, ಶಿಕ್ಷಣ ಇಲಾಖೆ