ರಾಯಚೂರು: ನಗರದ ಹೊರವಲಯ ಯರಮರಸ್ ಬಳಿ ನಿರ್ಮಿಸಲು ಉದ್ದೇಶಿಸಿರುವ ರಾಯಚೂರು ವಿಮಾನ ನಿಲ್ದಾಣ ಪ್ರದೇಶದ ಸರ್ವೇ ಕಾರ್ಯವನ್ನು ಒಂದು ವಾರದೊಳಗೆಮುಗಿಸಿ ಗಡಿ ಗುರುತು ಮಾಡುವಂತೆ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ್ ಭೂ ದಾಖಲೆಗಳ ಉಪನಿರ್ದೇಶಕರಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಸಂಸ್ಥೆ ಹಾಗೂ ಅಧಿಕಾರಿಗಳೊಂದಿಗೆ ಶನಿವಾರ ನಡೆದ ಸಭೆಯಲ್ಲಿ ಮಾತನಾಡಿದರು. ನಗರದ ಹೊರವಲಯ ಯರಮರಸ್ ಬಳಿ ವಿಮಾನ ನಿಲ್ದಾಣಕ್ಕೆಂದು ಸುಮಾರು 422 ಎಕರೆ ಪ್ರದೇಶ ಮೀಸಲಿರಿಸಲಾಗಿದೆ. ಅಲ್ಲಿ ಕೂಡಲೇ ಸರ್ವೇ ಕಾರ್ಯ ಕೈಗೊಂಡು ವಾರದೊಳಗೆ ವರದಿ ನೀಡಬೇಕು. ನಂತರ ಆ ಪ್ರದೇಶದಲ್ಲಿ ಧ್ವಜವನ್ನು ನೆಡುವ ಮೂಲಕ ಗಡಿ ಗುರುತು ಮಾಡಲಾಗುವುದು. ಮುಂಬರುವ ಸೋಮವಾರ ಕೇಂದ್ರ ಸರ್ಕಾರಕ್ಕೆ ರಾಯಚೂರು ವಿಮಾನ ನಿಲ್ದಾಣ ನಿರ್ಮಿಸುವ ಕುರಿತು ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
ವಿಮಾನ ನಿಲ್ದಾಣದ ರನ್ ವೇ ನಿಗದಿ ಹಾಗೂ ನಿಲ್ದಾಣದಲ್ಲಿ ಅಗ್ನಿಶಾಮಕ ದಳ, ನೀರಿನ ಘಟಕ ಸೇರಿದಂತೆ ಇತರೆ ಅಗತ್ಯ ಸೌಕರ್ಯಗಳು ಯಾವ ಯಾವ ಸ್ಥಳದಲ್ಲಿ ಬರಬೇಕೆಂಬುದನ್ನು ಪರಿಶೀಲಿಸುವಂತೆ ವಿಮಾನ ನಿಲ್ದಾಣಗಳ ಕಾಮಗಾರಿ ನಿರ್ವಹಣಾ ಸಂಸ್ಥೆಯಾದ ಸುಪ್ರೀಂ ಏರ್‌ಲೈನ್ಸ್ ಮುಖ್ಯಸ್ಥ ಅಮಿತ್ ಕೆ. ಅಗರವಾಲ್ ಅವರಿಗೆ ಜಿಲ್ಲಾಧಿ ಕಾರಿ ಸೂಚಿಸಿದರು.
ಈ ವೇಳೆ ಮಾತನಾಡಿದ ಅಮಿತ್ ಅಗರವಾಲ್, ಯರಮರಸ್ ಬಳಿಯ ವಿದ್ಯುತ್ ಶಾಖೋತ್ಪನ್ನ ಕೇಂದ್ರದ ಚಿಮಣಿಗಳು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಯಾವುದೇ ರೀತಿಯಿಂದಲೂ ಅಡ್ಡಿಪಡಿಸುವುದಿಲ್ಲ. ರನ್ ವೇ ನಿರ್ಮಾಣಕ್ಕೆ ಎರಡು ಕಿ.ಮೀ. ಸಾಕಾಗಿದ್ದು, ವಿಮಾನ ನಿಲ್ದಾಣಕ್ಕಾಗಿ ನಿಗದಿಪಡಿಸಿರುವ ಸ್ಥಳದಲ್ಲಿ ಕಾಮಗಾರಿಗೆ ಆರು ತಿಂಗಳುಗಳ ಕಾಲಾವಕಾಶ ಬೇಕು ಎಂದರು.
ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಚನ್ನಬಸಪ್ಪ ಮೆಕಾಲೆ, ಕೈಗಾರಿಕಾಇಲಾಖೆಯ ಜಂಟಿ ನಿರ್ದೇಶಕ ಮಹ್ಮದ್ ಇರ್ಫಾನ್, ಭೂ ವಿಜ್ಞಾನ ಇಲಾಖೆಯ ವಿಶ್ವನಾಥ ಸೇರಿ ಇತರೆ ಇಲಾಖೆಗಳ ಅಧಿಕಾರಿಗಳು ಹಾಗೂ ಜಿಲ್ಲಾ ಚೆಂಬರ್ ಆಫ್ ಕಾಮರ್ಸ್‌ನ ಅಧ್ಯಕ್ಷ ತ್ರಿವಿಕ್ರಮ ಜೋಶಿ ಸಭೆಯಲ್ಲಿದ್ದರು. ಬಳಿಕ ಸುಪ್ರೀಂ ಏರ್‌ಲೈನ್ಸ್ ಮುಖ್ಯಸ್ಥ ಅಮಿತ್ ಕೆ. ಅಗರವಾಲ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಯರಮರಸ್ ಬಳಿ ಕಾಯ್ದಿರಿಸಲಾದ ವಿಮಾನ ನಿಲ್ದಾಣ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದರು.