ಬೆಂಗಳೂರು: ಸರ್ಕಾರಿ, ಖಾಸಗಿ ಸೇರಿದಂತೆ ರಾಜ್ಯದ ಎಲ್ಲ ವಿಶ್ವವಿದ್ಯಾಲ ಯಗಳಲ್ಲಿ ಬಾಕಿ ಉಳಿದಿರುವ ಪರೀಕ್ಷೆ ಮತ್ತು ಎಂಜಿನಿಯರಿಂಗ್ ವಿದ್ಯಾರ್ಥಿಗಳ ಅಂತಿಮ ಸೆಮಿಸ್ಟರ್ ಪರೀಕ್ಷೆ ಆದಷ್ಟು ಬೇಗ ಮುಗಿಸಬೇಕು ಎಂದು ಸರ್ಕಾರದ ಶಿಕ್ಷಣ ಸುಧಾರಣೆ ಸಲಹೆಗಾರ ಪ್ರೊ. ಎಂ.ಆರ್.ದೊರೆಸ್ವಾಮಿ ಸಮಿತಿ ಶಿಫಾರಸು ಮಾಡಿದೆ.
ನಗರದಲ್ಲಿ ಗುರುವಾರ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರೊಂದಿಗೆ ಮಾತುಕತೆ ನಡೆಸಿದ ಪ್ರೊ. ಎಂ.ಆರ್.ದೊರೆಸ್ವಾಮಿ ಹಾಗೂ ಸಮಿತಿಯ ಸದಸ್ಯರು 7 ಪ್ರಮುಖ ಶಿಫಾರಸುಗಳ ವರದಿಯನ್ನು ಸಲ್ಲಿಸಿದರು. ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ಅಂತಿಮ ಸೆಮಿಸ್ಟರ್ ಪರೀಕ್ಷೆಗಳನ್ನು ಆದಷ್ಟು ಬೇಗ ಮಾಡಬೇಕು. ವಿದ್ಯಾರ್ಥಿಗಳ ಪಾಲಿಗೆ ಅಂತಿಮ ಸೆಮಿಸ್ಟರ್ ಬಹಳ ಮುಖ್ಯ.
ಈಗಾಗಲೇ ಬಹುತೇಕ ವಿದ್ಯಾರ್ಥಿಗಳು ವಿವಿಧೆಡೆ ಯಲ್ಲಿ ಉದ್ಯೋಗಾವಕಾಶಕ್ಕೆ ಆಯ್ಕೆಯಾಗಿದ್ದು, ಅವರಿಗೆ ಉತ್ತೀರ್ಣತೆಯ ಪ್ರಮಾಣ ಪತ್ರ ಬೇಕು. ಹೀಗಾಗಿ ಆದಷ್ಟು ಬೇಗ ಪರೀಕ್ಷೆಯನ್ನು ಮುಗಿಸಬೇಕು. ಸರ್ಕಾರಿ, ಖಾಸಗಿ ಸೇರಿದಂತೆ ರಾಜ್ಯದ ಎಲ್ಲ ವಿವಿಗಳಲ್ಲಿ ಬಾಕಿ ಉಳಿದಿರುವ ಪರೀಕ್ಷೆಗಳನ್ನು ನಡೆಸಬೇಕು. ಈ ಪರೀಕ್ಷೆಗಳ ಮಹತ್ವವನ್ನು ಕಡೆಗಣಿಸಬಾರದು ಎಂದು ಸಮಿತಿ ಶಿಫಾರಸಿನಲ್ಲಿ ತಿಳಿಸಿದೆ.
ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸಮಗ್ರ ಮಾರ್ಗದರ್ಶನ ನೀಡುವ ವ್ಯವಸ್ಥೆ, ವಿಶೇಷಚೇತನ ವಿದ್ಯಾರ್ಥಿಗಳ ಸಬಲೀಕರಣಕ್ಕಾಗಿ ಪ್ರತ್ಯೇಕ ವಿವಿ ಸ್ಥಾಪನೆ,6 ಜಿಲ್ಲೆಗಳನ್ನು ಒಳಗೊಂಡಿರುವ ಕಲ್ಯಾಣ ಕರ್ನಾಟಕದಲ್ಲಿ ಸುಧಾರಿತ ಶಿಕ್ಷಣ ನೀತಿ, ಜತೆಗೆ ಆ ಭಾಗದಲ್ಲಿ ಹೆಚ್ಚು ಕೌಶಾಲ್ಯಾಭಿವೃದಿ ಕೇಂದ್ರಗಳನ್ನು ಸ್ಥಾಪಿಸಬೇಕು.
ಜಾಗತಿಕ ಭಾಷಾ ಕಲಿಕಾ ಕೇಂದ್ರ ಸ್ಥಾಪನೆ ಮತ್ತು ಶಿಕ್ಷಕರ ಅಕಾಡೆಮಿ, ಕ್ರೀಡಾ ಅಕಾಡೆಮಿ ಸ್ಥಾಪನೆ ಮಾಡಬೇಕು ಎಂದು ಶಿಫಾರಸಿನಲ್ಲಿ ಉಲ್ಲೇಖೀಸಿದೆ. ಶೈಕ್ಷಣಿಕ ಸಮಿತಿ ನೀಡಿರುವ ಶಿಫಾರಸು ಗಳ ಬಗ್ಗೆ ಮುಖ್ಯಮಂತ್ರಿಯವರೊಂ ದಿಗೆ ಹಾಗೂ ಸಂಪುಟ ಸಭೆಯಲ್ಲಿ ಚರ್ಚೆ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.
ಜಯಂತಿಗಳಿಗೆ ರಜೆ ಬೇಡ: ಗಾಂಧಿ ಜಯಂತಿ ಸೇರಿ ಎಲ್ಲ ಗಣ್ಯ ಮಾನ್ಯರ ಜಯಂತಿಗಳಿಗೆ ಶಾಲಾ ಕಾಲೇಜುಗಳಿಗೆ ರಜೆ ನೀಡುವುದರ ಬದಲು ಅರ್ಥಪೂರ್ಣವಾಗಿ ಜಯಂತಿಯನ್ನು ಶಾಲಾ ಕಾಲೇಜಿನಲ್ಲಿ ಆಚರಿಸಬೇಕು. ರಜೆ ಬದಲಿಗೆ ಗಣ್ಯ ವ್ಯಕ್ತಿಗಳ ಬಗ್ಗೆ ಉಪನ್ಯಾಸ-ಕಾರ್ಯಾಗಾರಗಳನ್ನು ಆಯೋಜಿಸಬೇಕು ಎಂದು ಪ್ರೊ.ಎಂ.ಆರ್.ದೊರೆಸ್ವಾಮಿ ಸಲಹೆ ನೀಡಿದ್ದಾರೆ.
ಸಂಕಷ್ಟದ ಸಮಯದಲ್ಲಿ ಶೈಕ್ಷಣಿಕ ವರ್ಷವನ್ನು ಸಮರ್ಪಕವಾಗಿ ಪೂರೈಸಬೇಕು. ಸಮಯದ ಸದ್ಭಳಕೆ ಬಹಳ ಮುಖ್ಯ. ಉತ್ತಮ ವಿದ್ಯಾರ್ಥಿಗಳನ್ನು ರೂಪಿಸಲು ಬೋಧನಾ ಅವಧಿಯನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದರು.