ಉಗುರನ್ನು ನಮ್ಮ ದೇಹದ ಸಣ್ಣ ಅಂಗ ಅಂತ ನಿರ್ಲಕ್ಷಿಸಲು ಸಾಧ್ಯವೇ ಇಲ್ಲ. ಉಗುರು ಕೂಡಾ ಈಗ ಸೌಂದರ್ಯದ ದ್ಯೋತಕ. ಉಗುರನ್ನು ಉದ್ದಕ್ಕೆ ಬೆಳೆಸಬೇಕು, ಅದಕ್ಕೆ ಸರಿಯಾದ ಶೇಪ್ ಕೊಟ್ಟು, ನೇಲ್ ಪಾಲಿಶ್, ನೇಲ್ ಆರ್ಟ್‌ನಿಂದ ಅದಕ್ಕೆ ಮೆರುಗು ತುಂಬಬೇಕು ಎಂಬ ಆಸೆಯಿಂದ, ಯುವತಿಯರು ಏನೇನೆಲ್ಲಾ ಮಾಡುತ್ತಾರೆ. ಆದರೂ, ಏನೋ ಕೆಲಸ ಮಾಡುವಾಗ ಕಷ್ಟಪಟ್ಟು ಬೆಳೆಸಿದ್ದ ಉಗುರು ತುಂಡಾಗಿ ಬಿಡುತ್ತದೆ, ಆಕಾರ ಕಳೆದುಕೊಂಡು ಬಿಡುತ್ತದೆ ಅಥವಾ ಬಣ್ಣ ಕಳೆದುಕೊಂಡು, ಕಳೆಗುಂದುತ್ತದೆ. ಹಾಗಾಗಬಾರದು ಅಂತಿದ್ರೆ, ಉಗುರನ್ನು ಸದೃಢವಾಗಿಸಬೇಕು. ಅದಕ್ಕಾಗಿ ಕೆಲವು ಸರಳ ಉಪಾಯಗಳು ಇಲ್ಲಿವೆ:
.ರಾತ್ರಿ ಮಲಗುವ ಮುನ್ನ ಆಲಿವ್ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ, ಕೈ ಉಗುರುಗಳಿಗೆ ಹಚ್ಚಿ ಮಸಾಜ್ ಮಾಡಿ. ನಂತರ, ಹತ್ತಿಯ ಗ್ಲೌಸ್ ಧರಿಸಿ ಮಲಗಿ. ಪ್ರತಿನಿತ್ಯ ಹೀಗೆ ಮಾಡುವುದರಿಂದ ಕೈ ಉಗುರುಗಳು ಸದೃಢವಾಗಿ ಬೆಳೆಯುತ್ತವೆ.
.ಕಾಲು ಕಪ್ ಕೊಬ್ಬರಿ ಎಣ್ಣೆ , ಕಾಲು ಕಪ್ ಜೇನುತುಪ್ಪ ಹಾಗೂ ನಾಲ್ಕು ಹನಿ ರೋಸ್ ಎಣ್ಣೆ / ರೋಸ್‌ವಾಟರ್ ಅನ್ನು ಮಿಶ್ರಣ ಮಾಡಿ. ಅದನ್ನು ಕೊಂಚ ಬೆಚ್ಚಗೆ ಮಾಡಿ, ಅದರಲ್ಲಿ ಉಗುರುಗಳನ್ನು ಅದ್ದಿ ಹದಿನೈದು ನಿಮಿಷದ ನಂತರ ತೊಳೆದುಕೊಳ್ಳಿ. ವಾರಕ್ಕೆ ಎರಡು ಅಥವಾ ಮೂರು ಬಾರಿ ಹೀಗೆ ಮಾಡಿದರೆ ಉಗುರುಗಳು ಮುರಿಯುವುದಿಲ್ಲ.
.ತಾಜಾ ಕಿತ್ತಳೆ ಹಣ್ಣಿನ ರಸದಲ್ಲಿ, ಉಗುರುಗಳನ್ನು ಅದ್ದಿ, ಹತ್ತು ನಿಮಿಷದ ನಂತರ ಅರೆ ಬೆಚ್ಚಗಿನ ನೀರಿನಲ್ಲಿ ಕೈ ತೊಳೆದುಕೊಳ್ಳಿ. ಉಗುರುಗಳು ಗಟ್ಟಿಯಾಗುವವರೆಗೂ ಪ್ರತಿನಿತ್ಯ ಹೀಗೆ ಮಾಡಿ.
.1 ಚಮಚ ಲಿಂಬೆ ರಸಕ್ಕೆ 3 ಚಮಚ ಆಲಿವ್ ಎಣ್ಣೆ ಸೇರಿಸಿ ಸ್ವಲ್ಪ ಬಿಸಿ ಮಾಡಿ. ಆ ಮಿಶ್ರಣವನ್ನು ಉಗುರುಗಳಿಗೆ ಲೇಪಿಸಿ, ಹತ್ತು ನಿಮಿಷ ಬಿಟ್ಟು ಕೈ ತೊಳೆಯಿರಿ. ದಿನನಿತ್ಯ ಹೀಗೆ ಮಾಡಿದರೆ ಪರಿಣಾಮಕಾರಿ.
.ಕೊಬ್ಬರಿ ಎಣ್ಣೆ ಮತ್ತು ಹರಳೆಣ್ಣೆಯನ್ನು ಮಿಶ್ರಣ ಮಾಡಿ, ಹಚ್ಚಿದರೆ ಉಗುರುಗಳಿಗೆ ಹೊಳೆಯುವ ಬಣ್ಣ ಬರುತ್ತದೆ.