Advertisement

ಗ್ರಾಪಂ ಮಟ್ಟದಲ್ಲಿ ಮುಷ್ಟಿ ಅಕ್ಕಿ ಅಭಿಯಾನ

06:30 AM Mar 05, 2018 | Team Udayavani |

ಬೆಂಗಳೂರು: ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ ರೈತ ಬಂಧು ಬಿ.ಎಸ್‌.ಯಡಿಯೂರಪ್ಪ ಮುಷ್ಟಿ ಅಕ್ಕಿ ಅಭಿಯಾನವನ್ನು ಗ್ರಾಮ ಪಂಚಾಯ್ತಿ ಮಟ್ಟಕ್ಕೆ ವಿಸ್ತರಿಸಲು ರಾಜ್ಯ ಬಿಜೆಪಿ ನಿರ್ಧರಿಸಿದೆ.

Advertisement

ರಾಜ್ಯದ ಎಲ್ಲಾ ಗ್ರಾಮ ಪಂಚಾಯ್ತಿಗಳಲ್ಲಿ ಜೋಳಿಗೆ ಹಿಡಿದು ಮುಷ್ಟಿ ಅಕ್ಕಿ (ಉತ್ತರ ಕರ್ನಾಟಕ ಭಾಗದಲ್ಲಿ ಜೋಳ) ಸಂಗ್ರಹಿಸಿ ಅದನ್ನು ಜಿಲ್ಲಾ ಕೇಂದ್ರಕ್ಕೆ ತಂದು ಬೇಯಿಸಿ ಸಾಮೂಹಿಕ ಭೋಜನ ಸೇವಿಸುವ ಕಾರ್ಯಕ್ರಮ ರೂಪಿಸಲಾಗಿದೆ. ಮಾ.12ರವರೆಗೆ ಗ್ರಾಮ ಪಂಚಾಯ್ತಿಗಳಲ್ಲಿ ಮುಷ್ಟಿ ಧಾನ್ಯ ಸಂಗ್ರಹ ಮಾಡಿ, ಮಾ.12ರಿಂದ 15ರ ಅವಧಿಯಲ್ಲಿ ಜಿಲ್ಲಾ ಕೇಂದ್ರದಲ್ಲಿ ಆ ಧಾನ್ಯದಿಂದ ಸಾಮೂಹಿಕ ಭೋಜನ ಸೇವಿಸುವ ವ್ಯವಸ್ಥೆ ಮಾಡಲಾಗುತ್ತದೆ.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಸಂಸದೆ ಶೋಭಾ
ಕರಂದ್ಲಾಜೆ, ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್‌.ಯಡಿಯೂರಪ್ಪ ಮತ್ತು ರೈತರ ನಡುವೆ ಮತ್ತಷ್ಟು ಬಾಂಧವ್ಯ ಬೆಸೆಯುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಮುಷ್ಟಿ ಅಕ್ಕಿ ಅಭಿಯಾನದ ಅಕ್ಕಿಯಲ್ಲಿ ಅನ್ನ ಮಾಡಿ ಅದನ್ನು ಸೇವಿಸುವ ಮೂಲಕ ಯಡಿಯೂರಪ್ಪ ಅವರನ್ನು ರೈತರ ಋಣಕ್ಕೆ ಬೀಳಿಸಿ, ಅಧಿಕಾರಕ್ಕೆ ಬಂದ ಮೇಲೆ ಆ ಋಣ ತೀರಿಸುವ ಕೆಲಸ ಮಾಡಬೇಕು ಎಂಬ ಉದ್ದೇಶದೊಂದಿಗೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಏನಿದು ಅಭಿಯಾನ?: ರಾಜ್ಯದ ಎಲ್ಲಾ ಗ್ರಾಪಂಗಳಿಗೆ ಮುಷ್ಟಿ ಅಕ್ಕಿ ಅಭಿಯಾನದ ಕಿಟ್‌ ಗಳನ್ನು (ರೈತಬಂಧು ಯಡಿಯೂರಪ್ಪ ಲೋಗೋ ಇರುವ ಕಿಟ್‌) ಕಳುಹಿಸಲಾಗಿದ್ದು, ಈ ಕಿಟ್‌ನಲ್ಲಿ ಯಡಿಯೂರಪ್ಪ ಅವರ ಭಾವಚಿತ್ರವಿರುವ ಜೋಳಿಗೆ, ಯಡಿಯೂರಪ್ಪ ಅವರು ಸಹಿ ಮಾಡಿದ ಪತ್ರ, ಸ್ಟಿಕರ್‌ಗಳು, ಗ್ರಾಮಸಭೆ ನಡೆಸಲು ಬೇಕಾದ ಬ್ಯಾನರ್‌, ಬಿಜೆಪಿಯ ಶಾಲುಗಳಿವೆ. ಪ್ರತಿ ಗ್ರಾಮ ಪಂಚಾಯ್ತಿಗೆ ಒಬ್ಬ ರೈತಮಿತ್ರನನ್ನು ನೇಮಿಸಲಾಗಿದೆ ಎಂದು ಹೇಳಿದರು.

ಈ ರೈತಮಿತ್ರರು ಗ್ರಾಮ ಪಂಚಾಯ್ತಿ ಕೇಂದ್ರಕ್ಕೆ ತೆರಳಿ ಕಿಟ್‌ನಲ್ಲಿರುವ ಬ್ಯಾನರ್‌ ಹಾಕಿ ರೈತರ ನೇತೃತ್ವದಲ್ಲಿ ಗ್ರಾಮಸಭೆ ಕರೆಯಬೇಕು. ಅಲ್ಲಿ ಕರಪತ್ರಗಳನ್ನು ಹಂಚುವುದರ ಜತೆಗೆ ಯಡಿಯೂರಪ್ಪ ಅವರ ಸಹಿ ಇರುವ ಪತ್ರದ ಸಾರಾಂಶ ಓದಿ ಅದರಲ್ಲಿರುವ ಅಂಶಗಳ ಬಗ್ಗೆ ಪ್ರತಿಜ್ಞೆ ಮಾಡಬೇಕು. ನಂತರ ಆ ಗ್ರಾಮ ಪಂಚಾಯ್ತಿಯಲ್ಲಿ ಹಲವು ಮನೆಗಳಿಗೆ ತೆರಳಿ ಧಾನ್ಯ (ಉತ್ತರ ಕರ್ನಾಟಕ ಭಾಗದಲ್ಲಿ ಜೋಳ, ಇತರೆಭಾಗಗಳಲ್ಲಿ ಅಕ್ಕಿ) ಸಂಗ್ರಹಿಸಬೇಕು. ಅಲ್ಲದೆ, ನೀಡಿರುವ ಸ್ಟಿಕರ್‌ಗಳನ್ನು ಮನೆಗಳಿಗೆ ಅಂಟಿಸಬೇಕು. ಈ ವೇಳೆ ಆ ಗ್ರಾಮ ಪಂಚಾಯ್ತಿಗಳಲ್ಲಿ ಪ್ರಮುಖರು ಬಿಜೆಪಿ ಸೇರುವುದಿದ್ದರೆ ಅವರಿಗೆ ಪಕ್ಷದ ಶಾಲು ಹೊದಿಸಿ ಬರಮಾಡಿಕೊಳ್ಳಲಾಗುತ್ತದೆ ಎಂದರು.

Advertisement

ಮಾ.12ರವರೆಗೆ ರೈತಮಿತ್ರರು  ಜೋಳಿಗೆಗಳಲ್ಲಿ ಧಾನ್ಯ ಸಂಗ್ರಹಿಸಿ ಅದನ್ನು ಜಿಲ್ಲಾ ಕೇಂದ್ರಕ್ಕೆ ತರಬೇಕು. ಮಾ.12ರಿಂದ 15ರ ಮಧ್ಯೆ ಜಿಲ್ಲಾ ಕೇಂದ್ರದ ದೇವಸ್ಥಾನ, ಮಠ ಅಥವಾ ಯಾವುದಾದರೂ ಐತಿಹಾಸಿಕ ಜಾಗದಲ್ಲಿ ಸಂಗ್ರಹಿಸಿದ ಧಾನ್ಯವನ್ನು ಬೇಯಿಸಿ ಸಾಮೂಹಿಕ ಭೋಜನ ಸ್ವೀಕರಿಸಲಾಗುವುದು. ಈ ಕಾರ್ಯಕ್ರಮದಲ್ಲಿ ರಾಜ್ಯದ ಒಂದು ಜಿಲ್ಲಾ ಕೇಂದ್ರದಲ್ಲಿ ಯಡಿಯೂರಪ್ಪ ಅವರು ಪಾಲ್ಗೊಳ್ಳುತ್ತಾರೆ. ಉಳಿದ ಜಿಲ್ಲೆಗಳಲ್ಲಿ ರಾಜ್ಯ ಮುಖಂಡರು ಅಥವಾ ಸ್ಥಳೀಯ ಮುಖಂಡರು ಪಾಲ್ಗೊಂಡು ಸಾಮೂಹಿಕ ಭೋಜನ ಸೇವಿಸುತ್ತಾರೆ ಎಂದು ತಿಳಿಸಿದರು.

ಈ ಬಾರಿ ಬಿಜೆಪಿ ಘೋಷಣೆಗೆ ಬಿಎಸ್‌ವೈ ಫೋಟೋ: ರಾಜ್ಯದ ಎಲ್ಲಾ ಗ್ರಾಮಗಳಲ್ಲಿ ಈ ಬಾರಿ ಬಿಜೆಪಿ ಎಂಬ ಘೋಷಣೆಯನ್ನು ಗೋಡೆ ಅಥವಾ ಕಾಂಪೌಂಡ್‌ಗಳಲ್ಲಿ ಬರೆಯಲು ಈಗಾಗಲೇ ತೀರ್ಮಾನಿಸಲಾಗಿದ್ದು, ಇದರೊಂದಿಗೆ ಮುಖ್ಯಮಂತ್ರಿ ಅಭ್ಯರ್ಥಿಯಾಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಭಾವಚಿತ್ರವನ್ನೂ ಅಳವಡಿಸಲಾಗುವುದು ಎಂದು ಶೋಭಾ ಕರಂದ್ಲಾಜೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next