Advertisement

ಪ್ಲಾಸ್ಟಿಕ್‌ ಬಳಸಿದರೆ ದಂಡ ಖಚಿತ

03:10 PM Jan 08, 2020 | Team Udayavani |

ಚಿಕ್ಕೋಡಿ: ಪ್ಲಾಸ್ಟಿಕ್‌ ಮಾರಾಟ ಮಾಡುವ ವ್ಯಕ್ತಿಗಳು ಹಾಗೂ ಅಂಗಡಿ ಮುಂಗಟ್ಟುಗಳ ಮೇಲೆ ನಗರಸಭೆ ಅಧಿಕಾರಿಗಳು ದಾಳಿ ನಡೆಸಿ ಓರ್ವ ವ್ಯಾಪಾರಸ್ಥನಿಗೆ 25 ಸಾವಿರ ದಂಡ ಹಾಕಿದ್ದಾರೆ.

Advertisement

ನಿಪ್ಪಾಣಿ ನಗರಸಭೆ ಪೌರಾಯುಕ್ತ ಮಹಾವೀರ ಬೋರನ್ನವರ ನೇತೃತ್ವದಲ್ಲಿ ಅ ಧಿಕಾರಗಳ ತಂಡ ಪ್ರತಿದಿನ ನಿಪ್ಪಾಣಿ ನಗರದಲ್ಲಿ ಜಾಗೃತಿ ಮೂಡಿಸುವುದರೊಂದಿಗೆ ಪ್ಲಾಸ್ಟಿಕ್‌ ಬಳಕೆ ಮಾಡುವ ಅಂಗಡಿಗಳ ಮೇಲೆ ದಾಳಿ ನಡೆಸಿ ಪ್ಲಾಸ್ಟಿಕ್‌ ವಶಪಡಿಸಿಕೊಂಡು ದಂಡ ಹಾಕುತ್ತಿದ್ದಾರೆ. ಸರ್ಕಾರ ಪ್ಲಾಸ್ಟಿಕ್‌ ನಿಷೇಧ ಮಾಡಿದರೂ ನಿಪ್ಪಾಣಿಯಲ್ಲಿ ಪ್ಲಾಸ್ಟಿಕ್‌ ಬಳಕೆ ಇರುವುದನ್ನು ಗಮನಿಸಿದ ನಗರಸಭೆ ಅಧಿಕಾರಿಗಳು ಅಂಗಡಿಗಳ ಮೇಲೆ ದಾಳಿ ನಡೆಸಿ 10 ಸಾವಿರ ರೂ ಮೌಲ್ಯದ ಕೆಮಿಕಲ್‌ ಮಿಶ್ರಿತ ಪ್ಲಾಸ್ಟಿಕ್‌ ಹಾಗೂ ಒಂದು ದ್ವಿಚಕ್ರ ವಾಹನ ವಶಪಡಿಸಿಕೊಂಡು 25 ಸಾವಿರ ರೂ ದಂಡ ಹಾಕಿದ್ದಾರೆ.

ಈ ಕುರಿತು ಪೌರಾಯುಕ್ತ ಮಹಾವೀರ ಬೋರನ್ನವರ ಮಾತನಾಡಿ, ಇಡೀ ದೇಶದಲ್ಲಿ ಪ್ಲಾಸ್ಟಿಕ್‌ ಬಳಕೆ ನಿಷೇಧಿಸಲಾಗಿದೆ. ಆದರೆ ನಗರದಲ್ಲಿ ಕೆಲವೊಬ್ಬರು ಅಕ್ರಮವಾಗಿ ಅಂಗಡಿ, ಹೊಟೇಲ, ಬೇಕರಿ ಮತ್ತು ಸಣ್ಣ ಸಣ್ಣ ವ್ಯಾಪಾರಸ್ಥರು ಪ್ಲಾಸ್ಟಿಕ್‌ ಬಳಕೆ ಮಾಡುತ್ತಿರುವುದು ಗಮನಕ್ಕೆ ಬಂದಿದ್ದು, ದಾಳಿ ನಡೆಸಲಾಗುತ್ತಿದೆ. ಅದರಂತೆ ಬೇಕರಿಯಲ್ಲಿ ಸಾಮಾನು ಖರೀದಿ ಮಾಡಿ ಪ್ಲಾಸ್ಟಿಕ್‌ನಲ್ಲಿ ತೆಗೆದುಕೊಂಡು ಹೋಗುವ ವ್ಯಕ್ತಿಯೊಬ್ಬನಿಗೂ 2 ಸಾವಿರ ರೂ. ದಂಡ ಹಾಕಲಾಗಿದೆ ಎಂದರು.

ನಗರದ ಎಲ್ಲ ಸಾರ್ವಜನಿಕರು ಸರ್ಕಾರದ ನಿಯಮ ಪಾಲನೆ ಮಾಡಬೇಕು. ಪ್ಲಾಸ್ಟಿಕ್‌ ಬಳಕೆ ನಿಷೇಧವಿದೆ. ವ್ಯಾಪಾರಸ್ಥರು ಬಳಕೆ ಮಾಡುವುದನ್ನು ನಿಲ್ಲಿಸಬೇಕು. ನಗರದ ಸ್ವಚ್ಛತೆಗೆ ಸಹಕರಿಸಬೇಕು ಎಂದು ಪೌರಾಯುಕ್ತ ಮಹಾವೀರ ಬೋರನ್ನವರ ಸಾರ್ವಜನಿಕರಲ್ಲಿ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.