ನವದೆಹಲಿ: ತಂಬಾಕು ಹಾಗೂ ತಂಬಾಕು ಉತ್ಪನ್ನಗಳ ಬಳಕೆ ನೀತಿಯನ್ನು ಉಲ್ಲಂಘಿಸುವ ಸಾರ್ವಜನಿಕರಿಗೆ ದಂಡ ವಿಧಿಸುವ ಅಧಿಕಾರವನ್ನು ಮುಖ್ಯ ಪೇದೆ ಮತ್ತು ಮುನಿಸಿಪಲ್ ಅಧಿಕಾರಿಗಳಿಗೂ ನೀಡಬೇಕು ಎಂದು ರಾಜ್ಯಗಳ ಆರೋಗ್ಯ ಇಲಾಖೆಗೆ ಕೇಂದ್ರ ಆರೋಗ್ಯ ಸಚಿವಾಲಯ ಪತ್ರ ಬರೆದಿದೆ. ಎಲ್ಲ ರಾಜ್ಯಗಳ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿರುವ ಜಂಟಿ ಕಾರ್ಯದರ್ಶಿ ವಿಕಾಸ್ ಶೀಲ್, ಭಾರತವು ಮೂರನೇ ಅತಿ ಹೆಚ್ಚು ತಂಬಾಕು ಉತ್ಪಾದನೆಯ ದೇಶವಾಗಿದ್ದು, ತಂಬಾಕು ಬಳಕೆಯಲ್ಲಿ ಎರಡನೇ ಅತಿದೊಡ್ಡ ದೇಶವಾಗಿದೆ. ಬಾಯಿ ಕ್ಯಾನ್ಸರ್‌ಗೆ ಬಲಿಯಾಗುತ್ತಿರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, ತಂಬಾಕಿನಿಂದಾಗಿ ಮರಣವನ್ನಪ್ಪುತ್ತಿರುವವರ ಸಂಖ್ಯೆ 13 ಲಕ್ಷಕ್ಕೆ ಏರಿಕೆಯಾಗಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ. ಇದಕ್ಕೆ ಸಾಮಾಜಿಕ ಹೋರಾಟಗಾರರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ತಂಬಾಕು ಬಳಕೆಯನ್ನು ಕಡಿಮೆ ಮಾಡುವಲ್ಲಿ ಈ ಕ್ರಮ ಸಹಾಯಕವಾಗಲಿದೆ ಎಂದಿದ್ದಾರೆ.