ದೊಡ್ಡಬಳ್ಳಾಪುರ: ಪ್ಲಾಸ್ಟಿಕ್ ಪೇಪರ್ ಬಳಕೆ ಹಾಗೂ ಸೂಕ್ತ ರೀತಿಯಲ್ಲಿ ಕಸ ವಿಂಗಡಿಸದ ಹೋಟಲ್ ಮಾಲೀಕರನ್ನು ಹಾಗೂ ವಾಣಿಜ್ಯ ಮಳಿಗೆಗಳ ಮಾಲೀಕರನ್ನು ಜಿಲ್ಲಾಧಿಕಾರಿ ಕರೀಗೌಡ ಬೆಳ್ಳಂ ಬೆಳಗ್ಗೆಯೇ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಬೆಳಗ್ಗೆ 5.30ಕ್ಕೆ ನಗರಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಕರೀಗೌಡ ವಿವಿಧ ಹೋಟೆಲ್, ವಾರ್ಡ್‌ಗಳಿಗೆ ಭೇಟಿ ನೀಡಿ ಕಸ ವಿಲೇವಾರಿ, ಪ್ಲಾಸ್ಟಿಕ್ ಬಳಕೆ ತಡೆಗಟ್ಟುವ ಕುರಿತು ಪರಿಶೀಲನೆ ನಡೆಸಿದರು.
ಕಸ ವಿಂಗಡನೆ ಮಾಡದ್ದಕ್ಕೆ ದಂಡ : ಹೋಟೆಲ್‌ಗಳಲ್ಲಿ ಹಸಿ ಕಸ ಹಾಗೂ ಒಣ ಕಸವನ್ನು ಪ್ರತ್ಯೇಕವಾಗಿ ವಿಂಗಡಣೆ ಮಾಡದೆ ಇರುವ ಮಾಲೀಕರಿಗೆ ದಂಡ ವಿಧಿಸಿದರು. ಕೆಲ ಸಾರ್ವಜನಿಕರು, ನಾವು ಪ್ರತ್ಯೇಕ ಮಾಡಿಕೊಟ್ಟರೂ ಪ್ರಯೋಜನ ಇಲ್ಲದಾಗುತ್ತಿದೆ. ಒಂದೇ ಲಾರಿಯಲ್ಲಿ ತುಂಬಿಕೊಂಡು ಹೋಗುತ್ತಿದ್ದಾರೆಂದರು.
ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸುವಂತೆ ನಗರಸಭೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು. ಇದರಿಂದ ನಗರಸಭೆ ಪರಿಸರ ಮತ್ತು ಆರೋಗ್ಯ ವಿಭಾಗದ ಅಧಿಕಾರಿಗಳು ಉತ್ತರಿಸಲಾಗದೆ ತಬ್ಬಿಬ್ಟಾದರು. ಇಂದಿನಿಂದಲೇ 2 ರೀತಿಯ ಕಸವನ್ನು ಪ್ರತ್ಯೇಕವಾಗಿಯೇ ಸಂಗ್ರಹಣೆ ಮಾಡಿ ಸಾಗಾಣಿಕೆ ಮಾಡಬೇಕು. ಕಸ ವಿಲೇವಾರಿ ಹಾಗೂ ಪ್ಲಾಸ್ಟಿಕ್ ಬಳಕೆ ತಡೆಗಟ್ಟುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದರೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ಲಾಸ್ಟಿಕ್ ಬಾಟಲ್ ಬಳಕೆ ನಿಷೇಧ : ಅಂಗಡಿ, ಹೋಟೆಲ್‌ಗಳಿಗೆ ನುಗ್ಗಿದ ಡಿಸಿ: ರಸ್ತೆಯಲ್ಲಿ ಮಾತ್ರ ನಡೆದು ಹೋಗದೆ ರಸ್ತೆ ಬದಿಯಲ್ಲಿನ ಹೋಟೆಲ್‌ಗಳಿಗೆ ದಿಢೀರ್ ಒಳ ನುಗ್ಗಿ ತ್ಯಾಜ್ಯ ಸಂಗ್ರಹಣೆ ಡಬ್ಬಿ ಸುರಿದು ನೋಡಿ ಪ್ಲಾಸ್ಟಿಕ್ ಬಳಸಿದವರಿಗೆ ಸ್ಥಳದಲ್ಲೇ ದಂಡ ವಿಧಿಸಿದರು. ನೀರಿನ ಪ್ಲಾಸ್ಟಿಕ್ ಬಾಟಲ್ ಬಳಸುವಂತಿಲ್ಲ. ಸರ್ಕಾರ ಈ ಕುರಿತು ಕಾನೂನು ಸಿದ್ಧಪಡಿಸಿದೆ. ಸರ್ಕಾರಿ ಸಮಾರಂಭಗಳಲ್ಲಿ ಈಗಾಗಲೇ ಫ್ಲಾಸ್ಟಿಕ್ ನೀರಿನ ಬಾಟಲ್ ನಿಷೇಧಿಸಲಾಗಿದೆ ಎಂದು ತಿಳಿಸಿದರು.
ಗಡಿ ಗುರುತಿಸಲು ಸೂಚನೆ: ಕರೇನಹಳ್ಳಿ ಭಾಗದ ಪ್ರದೇಶ ನಗರಸಭೆ ಹಾಗೂ ಗ್ರಾಪಂ ಎರಡೂ ಕಡೆಗೂ ಸೇರ್ಪಡೆಯಾಗಿದೆ. ಹೀಗಾಗಿ ಅಭಿವೃದ್ಧಿ ಕೆಲಸಗಳಿಗೆ, ನಾಗರೀಕರಿಗೆ ಸೌಲಭ್ಯ ನೀಡಲು ತೊಂದರೆಯಾಗಿದೆ. ಈ ಬಗ್ಗೆ ಸೂಕ್ತ ಗಡಿ ಗುರುತಿಸಲು ಮುಂದಾಗಬೇಕೆಂದು ಶಾಸಕ ಟಿ.ವೆಂಕಟರಮಣಯ್ಯ ಹೇಳಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಕರೀಗೌಡ, ನಗರಸಭೆ ಹಾಗೂ ತಾಲೂಕು ಕಚೇರಿಯಲ್ಲಿನ ಕಂದಾಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಸರ್ವೆ ನಡೆಸಿ ಗಡಿ ಗುರುತಿಸಿ ನೀಡಿದರೆ ಆದೇಶ ಮಾಡಲಾಗುವುದು. ಇದರಿಂದ ಎಲ್ಲಾ ಗೊಂದಲಗಳು ಪರಿಹಾರವಾಗಲಿವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಟಿ.ಎನ್.ಪ್ರಭುದೇವ್, ಪೌರಾಯುಕ್ತ ಆರ್.ಮಂಜುನಾಥ್, ಕಾರ್ಯಾಪಾಲಕ ಎಂಜಿನಿಯರ್ ಷೇಕ್ ಫಿರೋಜ್, ನಗರಸಭೆ ಸದಸ್ಯ ವಡ್ಡರಹಳ್ಳಿ ರವಿ, ಪಿ.ಸಿ.ಲಕ್ಷ್ಮೀನಾರಾಯಣ್, ಶಿವಕುಮಾರ್, ಎಸ್ .ಎ.ಭಾಸ್ಕರ್, ಭಾಗ್ಯ ಚೌಡರಾಜ್, ನಾಮಿನಿ ಸದಸ್ಯ ಅಂಜನಮೂರ್ತಿ ಉಪಸ್ಥಿತರಿದ್ದರು.