Advertisement

ಆನೆ ಬೇಟೆಯ ಪ್ರಾಚೀನ ವೀರಗಲ್ಲು ಪತ್ತೆ

09:46 PM Jul 22, 2019 | Lakshmi GovindaRaj |

ದೇವನಹಳ್ಳಿ: ನಾಡಿನ ಚರಿತ್ರೆ ಸಾರುವ ದೇವನಹಳ್ಳಿಯನ್ನು ಆಳಿದ ರಾಜ ಮನೆತನಗಳ ಕುರುಹು ಆಗಿರುವ ಶಾಸನ-ವೀರಗಲ್ಲುಗಳು ತಾಲೂಕಿನ ಕೆಲವೆಡೆ ಬೆಳಕಿಗೆ ಬರುತ್ತಿದ್ದು ಅವುಗಳ ಸಂರಕ್ಷಣೆ, ದಾಖಲೀಕರಣ ಮಾಡಬೇಕು ಎಂದು ಇತಿಹಾಸ ಸಂಶೋಧನಾ ಆಸಕ್ತ ಹಾಗೂ ಸಾಹಿತಿ ಬಿಟ್ಟಸಂದ್ರ ಬಿ.ಜಿ. ಗುರುಸಿದ್ದಯ್ಯ ಒತ್ತಾಯಿಸಿದ್ದಾರೆ. ತಾಲೂಕಿನ ಕೊಯಿರಾ ಗ್ರಾಮದಲ್ಲಿ ಅಪರೂಪದ ಆನೆ ಬೇಟೆಯ ವೀರಗಲ್ಲು ಪತ್ತೆಯಾಗಿದ್ದು ಪರಿಶೀಲನೆ ನಡೆಸಿ ಮಾತನಾಡಿದರು.

Advertisement

ವೀರಗಲ್ಲು ಪ್ರಕಾರಗಳಲ್ಲಿ ಅತ್ಯಂತ ಅಪರೂಪವಾದ ಈ ವೀರಗಲ್ಲು ಇಲ್ಲಿನ ವಿಶ್ವನಾಥಪುರದ ಕಾಲೇಜು ರಸ್ತೆಯಿಂದ ಎಡಭಾಗದ ಧರ್ಮಪ್ರಕಾಶ ಕೆ.ಸಿ.ರಾಮಯ್ಯನವರ ಹೊಲದಲ್ಲಿದೆ. 6 ಅಡಿ ಅಗಲ, 5 ಅಡಿ ಎತ್ತರ ಮತ್ತು ಮುಕ್ಕಾಲು ಅಡಿ ದಪ್ಪದ ಗ್ರಾÂನೈಟ್‌ ಶಿಲೆಯಲ್ಲಿ ಎರಡು ಹಂತದ ವೀರಗಲ್ಲಿನ ಚಿತ್ರಣ ಮೂಡಿ ಬಂದಿದೆ. ಕೆಳ ಹಂತದಲ್ಲಿ 6 ಜನ ಸ್ತ್ರೀಯರ ಚಿತ್ರಗಳಿದ್ದು ಇವರೆಲ್ಲಾ ತಮ್ಮ ಕೈಗಳಲ್ಲಿ ಛತ್ರಿ ಚಾಮರ ಹಿಡಿದು ಅಶ್ವರೂಢರಾಗಿ ಭೇಟಿಗೆ ಹೊರಡಿರುವ ರಾಜ ಅಥವಾ ನಾಯಕನಿಗೆ ಸೇವೆಗೈಯುತ್ತಾ ಬೀಳ್ಕೊಡುವ ದೃಶ್ಯವಿದೆ.

ಈ ಸೇವಕಿಯವರ ಮಧ್ಯೆ ಚಲಿಸುತ್ತಿರುವ ಅಶ್ವದ ಮೇಲೆ ಉದ್ದನೆಯ ಈಟಿ ಹಿಡಿದು ವೀರ ಕುಳಿತಿದ್ದಾನೆ. ಈ ಚಿತ್ರಣದ ಕೆಳಗೆ ಜಿಂಕೆ ಮತ್ತು ಮೂರು ನಾಯಿಗಳು ಮದವೇರಿದ ಆನೆಯನ್ನು ಮುತ್ತಿ ಆಕ್ರಮಣ ಮಾಡಿ ಕಾದಾಡುತ್ತಿರುವ ಚಿತ್ರಣವಿದೆ. ಮೇಲಿನ ಹಂತದಲ್ಲಿ ಸ್ವರ್ಗದಲ್ಲಿ ವೀರ ಕೈಮುಗಿದು ಕುಳಿತಿದ್ದಾನೆ. ಆತನ ಎರಡು ಬದಿಗಳಲ್ಲಿ 10 ಮಂದಿ ದೇವ ಕನ್ನಿಕೆಯರು (ಅಪ್ಸರೆಯರು) ತಮ್ಮ ಕೈಗಳಿಂದ ಚಾಮರ ಬೀಸುವ ಮೂಲಕ ವೀರನಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಇವರೆಲ್ಲರೂ ಕಲಾತ್ಮಕವಾದ ಉಡುಗೆ ತೊಟ್ಟಿರುವುದು ಕಾಣಿಸುತ್ತಿದೆ ಎಂದು ಹೇಳಿದರು.

ಮದವೇರಿದ ಆನೆ ಈ ಪ್ರದೇಶದಲ್ಲಿ ಪುಂಡಾಟಿಕೆ ನಡೆಸುತ್ತಿದ್ದಾಗ ವೀರ ತನ್ನ ಬೇಟೆ ನಾಯಿಗಳ ಸಹಿತ ಆನೆ ಮೇಲೆ ಎರಗಿ ಬಿದ್ದಿದ್ದಾನೆ. ಆಗ ವೀರ, ಆನೆ ದಾಳಿಯಿಂದ ಮಡಿದಿದ್ದಾನೆ. ವೀರನ ವೀರತನದ ಸ್ಮಾರಕಕ್ಕಾಗಿ ಈ ವೀರಗಲ್ಲನ್ನು ಹಾಕಿಸಲಾಗಿದೆ. ಕರ್ನಾಟಕದಲ್ಲಿ ಈವರೆಗೆ ದೊರೆತಿರುವ ಪ್ರಾಚೀನ ವೀರಗಲ್ಲುಗಳಲ್ಲಿ ಇದು ಭಿನ್ನವಾಗಿದ್ದು, ಜಿಂಕೆ ಹಾಗೂ ಬೇಟೆ ನಾಯಿಗಳ ಚಿತ್ರಣ ರೋಚಕವಾಗಿದೆ.

ಪ್ರಾಚೀನ ವೀರಗಲ್ಲುಗಳಲ್ಲಿನ ಕಾಳಗದ ಚಿತ್ರಣದಲ್ಲಿ ಆನೆಗಳನ್ನು ಕಾಣಬಹುದು. ಆದರೆ ಇಲ್ಲಿನ ಆನೆ ಬೇಟೆಯ ವೀರಗಲ್ಲಿನ ಚಿತ್ರಣ ಅಪರೂಪ ಮತ್ತು ವಿರಳವೂ ಆಗಿದೆ. ಕಾಲಮಾನದ ದೃಷ್ಟಿಯಿಂದ ಈ ವೀರಗಲ್ಲು ಕ್ರಿ.ಶ.ಸುಮಾರು 12ನೇ ಶತಮಾನದ್ದಾಗಿದೆ. ತಾಲೂಕಿನಲ್ಲಿ 82 ಶಾಸನ ಪ್ರಕಟಿಸಿದ್ದಾರೆ ಇವಲ್ಲದೇ ತಾಲೂಕಿನ ಐತಿಹಾಸಿಕ ಪರಂಪರೆಯುಳ್ಳ ಗ್ರಾಮಗಳಲ್ಲಿ ಕೆಲವು ಶಾಸನಗಳು ಇತ್ತೀಚಿಗೆ ಬೆಳಕಿಗೆ ಬಂದಿದೆ.

Advertisement

ಅವುಗಳಲ್ಲಿ 20 ಕ್ಕೂ ಹೆಚ್ಚು ತಮಿಳು ಶಾಸನಗಳು ಇದ್ದು ಅದರಲ್ಲಿ ಬ್ಯಾಡರಹಳ್ಳಿ, ಕಾರಹಳ್ಳಿ, ಆವತಿ, ಮುದುಗುರ್ಕಿ, ಗಂಗವಾರ ಗ್ರಾಮಗಳಲ್ಲಿ ತಮಿಳು ಶಾಸನಗಳನ್ನು ಕಾಣಬಹುದು. ಇವುಗಳನ್ನು ಪುರಾತತ್ವ ಇಲಾಖೆ ಹೆಚ್ಚು ಗಮನ ಹರಿಸಿ ಸಂಶೋಧನಾತ್ಮಕ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು. ಈ ವೇಳೆ ಸಂಶೋಧಕರಾದ ಡಾ.ಮುತ್ತುರಾಜ್‌, ಪ್ರೊ. ನರಸಿಂಹನ್‌, ಗೋಪಾಲಗೌಡ ಕಲ್ವಮಂಜಲಿ, ಕೆ.ಧನ್‌ಪಾಲ್‌, ಗ್ರಾಮದ ಹಿರಿಯ ಮುಖಂಡ ಕೃಷ್ಣಪ್ಪ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next