Advertisement

ಅತ್ಯಾಚಾರಿಗಳ ಪತ್ತೆ ಹಚ್ಚಿ, ಕಠಿಣ ಶಿಕ್ಷೆಗೊಳಪಡಿಸಿ

05:34 PM Oct 16, 2018 | Team Udayavani |

ದಾವಣಗೆರೆ: ಕಕ್ಕರಗೊಳ್ಳ (ದಾವಣಗೆರೆ ತಾಲೂಕು) ಗ್ರಾಮದ ರಂಜಿತಾ ಎಂಬ ಯುವತಿ ಮೇಲೆ ಅತ್ಯಾಚಾರ ನಡೆಸಿ, ಬರ್ಬರವಾಗಿ ಹತ್ಯೆಗೈದ ಆರೋಪಿಗಳನ್ನು ಬಂಧಿಸಿ, ಗಲ್ಲಿಗೇರಿಸಲು ಒತ್ತಾಯಿಸಿ ಆಕೆಯ ಪೋಷಕರು, ಎಐಡಿಎಸ್‌ಒ, ಎಐಡಿವೈಒ, ಎಐಎಂಎಸ್‌ ಎಸ್‌, ಎಐಟಿಯುಟಿಯುಸಿ ಸಂಘಟನೆ ಪದಾಧಿಕಾರಿಗಳು, ವಿದ್ಯಾರ್ಥಿಗಳು ಸೋಮವಾರ ಜಯದೇವ ವೃತ್ತದಲ್ಲಿ ಪ್ರತಿಭಟಿಸಿದ್ದಾರೆ.

Advertisement

ದಾವಣಗೆರೆ ಜಿಲ್ಲೆಯಲ್ಲಿ ಅಮಾನವೀಯ ಅತ್ಯಾಚಾರ ನಡೆಯುವುದಿಲ್ಲ ಎಂದೇ ಭಾವಿಸಲಾಗಿತ್ತು. ರಂಜಿತಾಳ ಮೇಲೆ ನಡೆದಿರುವ ಅತ್ಯಾಚಾರ, ನಂತರ ಆಕೆಯನ್ನು ಅತ್ಯಂತ ಬರ್ಬರವಾಗಿ ಕೊಲೆಗೈದಿರುವುದನ್ನು ನೋಡಿದರೆ ಇಂತಹ ರಾಕ್ಷಸಿ ಕೃತ್ಯ ನಡೆಸುವರು ಇದ್ದಾರಾ ಎಂಬ ಭಯ ಉಂಟಾಗುತ್ತದೆ. ಪ್ರತಿಯೊಬ್ಬರೂ ಅಂಜುವಂತೆ ಅತೀ ಅಮಾನುಷವಾಗಿ ಅತ್ಯಾಚಾರ ಎಸಗಿರುವ ದುಷ್ಕರ್ಮಿಗಳನ್ನು ಪೊಲೀಸರು ಕೂಡಲೇ ಬಂಧಿಸಿ, ಶಿಕ್ಷೆಗೆ ಒಳಪಡಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಜೀವನ ನಿರ್ವಹಣೆಗಾಗಿ ದಾವಣಗೆರೆಗೆ ಬಂದು ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ರಂಜಿತಾಳನ್ನು ಅತೀ ಕ್ರೂರವಾಗಿ ಅತ್ಯಾಚಾರ ನಡೆಸಿ, ಕೊಲೆಗೈಯಲಾಗಿದೆ. ಘಟನೆ ನಡೆದು 3-4 ದಿನಗಳೇ ಕಳೆದರೂ ಈವರೆಗೆ ಆರೋಪಿಗಳನ್ನು ಬಂಧಿಸದೇ ಇರುವುದು ಮತ್ತಷ್ಟು ಭಯಕ್ಕೆ
ಕಾರಣವಾಗಿದೆ. ದುಷ್ಕರ್ಮಿಗಳು ನನ್ನ ಇನ್ನಿಬ್ಬರು ಹೆಣ್ಣು ಮಕ್ಕಳನ್ನು ಸುಮ್ಮನೆ ಬಿಟ್ಟಾರಾ… ಎಂದು ರಂಜಿತಾಳ ತಂದೆ-ತಾಯಿ ಕೇಳುವ ಪ್ರಶ್ನೆಗೆ ಉತ್ತರಿಸುವವರು ಯಾರು…. ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು. 

ಕರೂರು ಸಮೀಪದ ಹೊಲವೊಂದರಲ್ಲಿ ರಂಜಿತಾಳ ಶವ ಪತ್ತೆಯಾಗಿರುವ ರೀತಿ ನೋಡಿದರೆ ಸಾಮಾನ್ಯ ಕೊಲೆಯಲ್ಲ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಸಂಪೂರ್ಣ ವಿವಸ್ತ್ರಗೊಳಿಸಿ, ಅಮಾನುಷವಾಗಿ ಹಿಂಸಿಸಿ ಕೊಲೆ ಮಾಡಲಾಗಿದೆ. ಕಣ್ಣುಗಳಲ್ಲಿ ರಕ್ತ ಹರಿದಿದೆ. ಅಂತಹ ಭೀಭತ್ಸ ರೀತಿ ಕೊಲೆ ಮಾಡಿದವರು ನಾಗರಿಕ ಸಮಾಜದಲ್ಲಿ ಬದುಕಲು ಅನರ್ಹರು. ಅಂತಹ ರಾಕ್ಷಸಿಕೃತ್ಯ ಎಸಗಿದವರನ್ನು ಗಲ್ಲಿಗೇರಿಸುವ ಮೂಲಕ ಇತರರಿಗೆ ಎಚ್ಚರಿಕೆಯ ಸಂದೇಶ ರವಾನಿಸಬೇಕು ಎಂದು ಒತ್ತಾಯಿಸಿದರು.

ಕೋಲಾರದ ಮಾಲೂರಿನಲ್ಲಿ ನಡೆದ ವಿದ್ಯಾರ್ಥಿನಿಯ ಅತ್ಯಾಚಾರದ ಆರೋಪಿಗಳನ್ನು ಬಂಧಿಸಿದ 45 ದಿನಗಳಲ್ಲಿ ವಿಚಾರಣೆ ನಡೆಸಿ, ಗಲ್ಲು ಶಿಕ್ಷೆ ವಿಧಿಸಿದ ಉದಾಹರಣೆ ಇದೆ. ಅದೇ ರೀತಿ ರಂಜಿತಾಳ ಮೇಲೆ ಅತ್ಯಾಚಾರ ನಡೆಸಿ, ಕೊಲೆ  ಮಾಡಿದವರನ್ನು ಬಂಧಿಸಿ, ತ್ವರಿತಗತಿಯಲ್ಲಿ ವಿಚಾರಣೆ ನಡೆಸಿ, ಗಲ್ಲು ಶಿಕ್ಷೆಗೆ ಒಳಪಡಿಸುವ ಮೂಲಕ ರಂಜಿತಾಳಿಗೆ ನ್ಯಾಯ ಒದಗಿಸಬೇಕು. ಆರೋಪಿಗಳನ್ನು ಅತೀ ಶೀಘ್ರದಲ್ಲಿ ಬಂಧಿಸುವ ಮೂಲಕ ದಾವಣಗೆರೆ ಜಿಲ್ಲೆಯ ಪೊಲೀಸರು ಮಾದರಿ ಆಗಬೇಕು. ಜತೆಗೆ ರಂಜಿತಾಳ ಕುಟುಂಬ ವರ್ಗಕ್ಕೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.

Advertisement

ರಂಜಿತಾಳ ತಂದೆ ದ್ಯಾಮಪ್ಪ, ತಾಯಿ ಲಕ್ಕವ್ವ, ಸಹೋದರಿಯರಾದ ಚೇತನ, ಪೂಜಾ, ಸಂಘಟನೆಯ ಟಿ.ವಿ.ಎಸ್‌. ರಾಜು, ಮಂಜುನಾಥ್‌ ಕುಕ್ಕುವಾಡ, ಬನಶ್ರೀ, ಮಧು ತೊಗಲೇರಿ, ಸ್ಮಿತಾ, ಮಂಜುನಾಥ್‌ ರೆಡ್ಡಿ, ನಾಗಜ್ಯೋತಿ, ಶಶಿಕುಮಾರ್‌, ಶಿವಾಜಿರಾವ್‌, ತಿಪ್ಪೇಸ್ವಾಮಿ, ಹರಿಪ್ರಸಾದ್‌, ಸತೀಶ್‌, ಗುರು ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next