Advertisement
ಭಾರತೀಯ ವಿಜ್ಞಾನ ಸಮ್ಮೇಳನ ಸಂಘ (ಐಎಸ್‌ಸಿಎ)ವು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಂಡಿರುವ 107ನೇ ಭಾರತೀಯ ವಿಜ್ಞಾನ ಸಮ್ಮೇಳನವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು. ಏಕ ಬಳಕೆ ಪ್ಲಾಸ್ಟಿಕ್‌ನ್ನು ನಿಷೇಧಿಸಿದ್ದೇವೆ. ಇದಕ್ಕೆ ಪರ್ಯಾಯ ಮಾರ್ಗ ಹುಡುಕಬೇಕಿದೆ. ಅದನ್ನು ಅಭಿವೃದ್ಧಿ ಪಡಿಸಿ. ಮಣ್ಣು, ಫೈಬರ್, ಹೊಟ್ಟು, ನಾರು ಬಳಸಿ ಪ್ಲಾಸ್ಟಿಕ್‌ಗೆ ಪರ್ಯಾಯವಾದುದ್ದನ್ನು ತಂತ್ರಜ್ಞಾನದ ಮೂಲಕ ಅಭಿವೃದ್ಧಿ ಪಡಿಸಬೇಕಿದೆ.
Related Articles
Advertisement
ಗ್ರಾಮೀಣ ಭಾಗದಲ್ಲಿ ಜನರ ವಿಕಾಸಕ್ಕೆ ಸಂಬಂಧಿಸಿದಂತೆ ಸಮಸ್ಯೆಯ ಪರಿಹಾರಕ್ಕೆ ತಂತ್ರಜ್ಞಾನ ರೂಪಿಸಬೇಕು. ಜನರ ಜೀವನ ಸರಳವಾಗಬೇಕು. ಕೃಷಿಕರು ಕಡಿಮೆ ವೆಚ್ಚದಲ್ಲಿ ಹೆಚ್ಚು ಆದಾಯ ಪಡೆಯಲು ಅವಶ್ಯವಿರುವ ಸಾಧನಗಳನ್ನು ಅಭಿವೃದ್ಧಿಪಡಿಸಬೇಕು ಮತ್ತು ಇದರ ಪ್ರಯೋಜನ ಪ್ರತಿ ಹಳ್ಳಿಗೂ ಸಿಗಬೇಕು ಎಂದು ಕರೆ ನೀಡಿದರು.
ಜಲ ಜೀವನ್: ಭಾರತ ಸರ್ಕಾರವು “ಜಲ ಜೀವನ್’ ಎಂಬ ದೊಡ್ಡ ಕಾರ್ಯಕ್ರಮ ರೂಪಿಸಿದ್ದು, ಪ್ರತಿ ಮನೆಗೂ ಕುಡಿಯುವ ನೀರು ಪೂರೈಕೆ ಮಾಡುವ ಯೋಜನೆ ಇದಾಗಿದೆ. ಇದಕ್ಕೆ ದೊಡ್ಡಮಟ್ಟದಲ್ಲಿ ತಂತ್ರಜ್ಞಾನದ ಅವಶ್ಯಕತೆಯಿದೆ ಎಂದರು. ನೀರಿನ ಸಂರಕ್ಷಣೆಯಲ್ಲಿ ಎಲ್ಲರೂ ತೊಡಗಿಕೊಳ್ಳಬೇಕು. ನೀರಿನ ನಿರ್ವಹಣೆ, ಪ್ರತಿ ಮನೆಯಿಂದ ಹೊರ ಬರುವ ನೀರನ್ನು ಮರು ಬಳಕೆ ಮಾಡುವ ನಿಟ್ಟಿನಲ್ಲಿ ಸರಳ ತಂತ್ರಜ್ಞಾನದ ಅವಶ್ಯಕತೆ ಇದ್ದು, ಇದನ್ನು ವಿಜ್ಞಾನಿಗಳು ಸಾಕಾರ ಮಾಡಬೇಕು ಎಂದು ಮನವಿ ಮಾಡಿದರು.
ತಂತ್ರಜ್ಞಾನದಲ್ಲಿ ಕರ್ನಾಟಕ ಮುಂದಿದೆ – ಬಿಎಸ್‌ವೈ: ತಂತ್ರಜ್ಞಾನದಲ್ಲಿ ಕರ್ನಾಟಕ ಮುಂದಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಣ್ಣಿಸಿ ದ್ದಾರೆ. ಭಾರತೀಯ ವಿಜ್ಞಾನ ಸಮ್ಮೇಳನ ಸಂಘ (ಐಎಸ್‌ಸಿಎ)ವು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಂಡಿರುವ 107ನೇ ಭಾರತೀಯ ವಿಜ್ಞಾನ ಸಮ್ಮೇಳನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕರ್ನಾಟಕವು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಉತ್ತಮ ಸಾಧನೆ ಮಾಡುತ್ತಿದೆ.
ಕೃಷಿಕರ ಜೀವನ ಮಟ್ಟ ಸುಧಾರಣೆಯಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ವಿದ್ಯುತ್, ಸಾರಿಗೆ ಸಂಪರ್ಕ, ಉತ್ತಮ ಆರೋಗ್ಯ ಹಾಗೂ ಇತರ ಮೂಲ ಸೌಕರ್ಯವನ್ನು ಆಧುನಿಕ ತಂತ್ರಜ್ಞಾನದ ಮೂಲಕ ಸಮರ್ಪಕವಾಗಿ ನೀಡಲು ಸಾಧ್ಯವಿದೆ. ಕೃಷಿಕರ ಆದಾಯ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ. ಇದಕ್ಕಾಗಿ ರಾಜ್ಯ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.
ಎಂಜಿನಿಯರ್‌ಗಳಿಗೆ ರಾಜಧಾನಿ ಬೆಂಗಳೂರು ಕನಸಿನ ನಗರ: ಕರ್ನಾಟಕದ ರಾಜಧಾನಿ ಬೆಂಗಳೂರು, ವಿಜ್ಞಾನ ಮತ್ತು ಸಂಶೋಧನೆಯಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಕಳೆದ ಬಾರಿ ಚಂದ್ರಯಾನ-2ರ ಕಾರ್ಯಕ್ರಮಕ್ಕೆ ಬೆಂಗಳೂರಿಗೆ ಬಂದಿದ್ದೆ. ಆಗ ಇಡೀ ದೇಶವೇ ವಿಜ್ಞಾನವನ್ನು ಸಂಭ್ರಮಿಸಿತ್ತು. ವಿಜ್ಞಾನಿಗಳ ಸಾಧನೆ ಇಂದಿಗೂ ಸ್ಮರಣೀಯವಾಗಿದೆ.
ಹೊಸ ವರ್ಷದಲ್ಲಿ ಮೊದಲ ವಿಜ್ಞಾನ ಕಾರ್ಯಕ್ರಮಕ್ಕಾಗಿ ಮತ್ತೇ ಬೆಂಗಳೂರಿಗೆ ಬಂದಿದ್ದೇನೆ. ಉದ್ಯಾನಗಳ ನಗರವಾದ ಬೆಂಗಳೂರು, ನವೊದ್ಯಮಿಗಳ ನಗರವಾಗಿ ಬೆಳೆಯುತ್ತಿದೆ. ದೇಶ ವಿದೇಶಗಳಿಂದ ಇಲ್ಲಿಗೆ ಬಂಡವಾಳ ಹೂಡಿಕೆದಾರರು ಬರುತ್ತಿದ್ದಾರೆ. ಸಂಶೋಧನೆ ಮತ್ತು ಅಭಿವೃದ್ಧಿಯ ಸುವ್ಯವಸ್ಥಿತ ಪರಿಸರವಲ್ಲದೆ, ವಿಜ್ಞಾನ, ಎಂಜಿನಿಯರ್‌ಗಳ ಕನಸಿಗೆ ಈ ನಗರ ಮುನ್ನುಡಿಯಾಗಿದೆ ಎಂದು ಮೋದಿ ಬಣ್ಣಿಸಿದರು.
“ಐ-ಸ್ಟೆಮ್’ ವೆಬ್‌ಸೈಟ್‌ಗೆ ಪ್ರಧಾನಿ ಮೋದಿ ಚಾಲನೆ: ಕೇಂದ್ರ ಸರ್ಕಾರದ ಪ್ರಧಾನ ವಿಜ್ಞಾನ ಸಲಹೆಗಾರರ ಕಚೇರಿಯಿಂದ ಸಿದ್ಧಪಡಿಸಿರುವ ಭಾರತೀಯ ವಿಜ್ಞಾನ ತಂತ್ರಜ್ಞಾನ ಎಂಜಿನಿಯರಿಂಗ್ ಸೌಲಭ್ಯದ ಮ್ಯಾಪ್ (ಐ-ಸ್ಟೆಮ್) ಒಳಗೊಂಡಿರುವ ವೆಬ್‌ಸೈಟ್‌ನ್ನು ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ 107ನೇ ಭಾರತೀಯ ವಿಜ್ಞಾನ ಸಮ್ಮೇಳ ನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಲೋಕಾರ್ಪಣೆ ಮಾಡಿದರು.
ವಿಜ್ಞಾನಕ್ಕೆ ಸಂಬಂಧಿಸಿದ ಹೊಸ ಸಂಶೋಧನೆಗಳಿಗೆ ಮೂಲಗಳನ್ನು ದೊರಕಿಸಿ ಕೊಡುವ ಪ್ರಮುಖ ಉದ್ದೇಶದಿಂದ ಈ ವೆಬ್‌ಸೈಟ್‌ನ್ನು ಲೋಕಾರ್ಪಣೆ ಮಾಡಲಾಗಿದೆ. ಸಂಶೋಧನೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದಂತೆ ಸಂಶೋಧನಾ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಸಂಶೋಧ ಕರಿಗೆ ಅತಿ ಸುಲಭವಾಗಿ ಇಲ್ಲಿ ಸಂಶೋಧನಾ ಕೇಂದ್ರ ದೊರೆಯಲಿದೆ ಎಂಬ ಮಾಹಿತಿಯನ್ನು ಇದು ನೀಡಲಿದೆ.
2030ರ ವೇಳೆಗೆ ವೈಜ್ಞಾನಿಕ ದೇಶವಾಗಿ ಭಾರತ ಅಭಿವೃದ್ಧಿ: ಭಾರತವು 2030ರ ವೇಳೆಗೆ ವಿಶ್ವದ 2 ಅಥವಾ 3ನೇ ವೈಜ್ಞಾನಿಕ ದೇಶವಾಗಿ ಅಭಿವೃದ್ಧಿ ಹೊಂದಲಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವ ಡಾ.ಹರ್ಷವರ್ಧನ್ ಭವಿಷ್ಯ ನುಡಿದಿದ್ದಾರೆ. ಭಾರತೀಯ ವಿಜ್ಞಾನ ಸಮ್ಮೇಳನ ಸಂಘ (ಐಎಸ್‌ಸಿಎ)ವು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಂಡಿರುವ 107ನೇ ಭಾರತೀಯ ವಿಜ್ಞಾನ ಸಮ್ಮೇಳನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಭಾರತವು 2030ರ ವೇಳೆಗೆ ವಿಶ್ವದ 2 ಅಥವಾ 3ನೇ ವೈಜ್ಞಾನಿಕ ದೇಶವಾಗಿ ಅಭಿವೃದ್ಧಿ ಹೊಂದಲಿದೆ. ವಿಜ್ಞಾನ ಮತ್ತು ತಂತ್ರಜ್ಞಾನದ ಅಪ್ಲಿಕೇಷನ್ ವಿಭಾಗದಲ್ಲಿ ಭಾರತವು ವಿಶ್ವದ ಮೂರನೇ ಸ್ಥಾನದಲ್ಲಿದೆ. ದೇಶದ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಹಲವು ಸವಾಲುಗಳಿವೆ. ಮೂಲ ಸಂಶೋಧನೆಯ ಗುಣಮಟ್ಟ ಸುಧಾರಣೆಯಾಗಬೇಕು. ತಾಂತ್ರಿಕವಾಗಿ ಪಾರದರ್ಶಕತೆ ತರಬೇಕು ಹಾಗೂ ಇದನ್ನು ಜನಸಾಮಾನ್ಯರಿಗೆ ಹತ್ತಿರವಾಗುವಂತೆ ಸಂಪರ್ಕ ಕಲ್ಪಿಸಬೇಕು ಎಂದರು.
ವೈಜ್ಞಾನಿಕ, ಸಾಮಾಜಿಕ ಜವಾಬ್ದಾರಿ ಇಂದಿನ ಅಗತ್ಯವಾಗಿದೆ. ದೇಶದ ಅಭಿವೃದ್ಧಿಗೆ ಸಂಬಂಧಿಸಿದಂತೆ ಎಲ್ಲರ ಕೊಡುಗೆ ಅಗತ್ಯವಿದೆ. ದೇಶದ ಭವಿಷ್ಯದ ಹಿತದೃಷ್ಟಿಯಿಂದ ಸೈಬರ್ ಫಿಸಿಕಲ್ ವ್ಯವಸ್ಥೆ, ಆಳಸಮುದ್ರ ತಂತ್ರಜ್ಞಾನ ಅಧ್ಯಯನ, ಇಂಧನ ಶೇಖರಣಾ ವ್ಯವಸ್ಥೆ, ಕೃತಕ ಬುದ್ದಿಮತ್ತೆ…ಹೀಗೆ ಎಲ್ಲ ವಿಷಯದಲ್ಲೂ ನಮ್ಮ ಭವಿಷ್ಯದ ಪೀಳಿಗೆಗೆ ಭದ್ರ ಬುನಾದಿ ಹಾಕಿಕೊಡಬೇಕಿದೆ ಎಂದು ಹೇಳಿದರು.