ನ್ಯೂಯಾರ್ಕ್: ಅಮೆರಿಕದಲ್ಲಿ ನಾಪತ್ತೆಯಾಗಿದ್ದ ಬೆಂಗಳೂರು ಮೂಲದ ವಿದ್ಯಾರ್ಥಿ ಆಲಾಪ್ ನರಸೀಪುರ(20) ನಿಗೂಢವಾಗಿ ಸಾವಿಗೀಡಾಗಿದ್ದು, ನ್ಯೂಯಾರ್ಕ್‌ನಲ್ಲಿ ಶನಿವಾರ ಅವರ ಮೃತದೇಹ ಪತ್ತೆಯಾಗಿದೆ.
ಇಲ್ಲಿನ ಕಾರ್ನೆಲ್ ವಿಶ್ವವಿದ್ಯಾಲಯದಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಮಾಡುತ್ತಿದ್ದ ಆಲಾಪ್ ಕಳೆದ ಬುಧವಾರದಿಂದ ಕಣ್ಮರೆಯಾಗಿದ್ದ. ಇಥಾಕಾ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ನಾಲ್ಕಾರು ದಿನಗಳಿಂದ ಜಂಟಿಯಾಗಿ ಶೋಧ ಕಾರ್ಯ ನಡೆಸಿದ್ದು, ಶನಿವಾರ ನ್ಯೂಯಾರ್ಕ್‌ನ ಫಾಲ್ ಕ್ರೆಕ್‌ನಲ್ಲಿ ಶವ ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಶವ ಪರಿಶೀಲನೆ ನಡೆಸಿರುವ ಕಾರ್ನೆಲ್ ವಿಶ್ವವಿದ್ಯಾಲಯವು ಆಲಾಪ್ ನರಸೀಪುರ ಅವರದ್ದೇ ಶವ ಎಂದು ಖಚಿತಪಡಿಸಿದೆ. ನ್ಯೂಯಾರ್ಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸಾವು ಹೇಗೆ ಸಂಭವಿಸಿತು ಎನ್ನುವ ಬಗ್ಗೆ ಇನ್ನಷ್ಟೇ ಗೊತ್ತಾಗಬೇಕಿದೆ.
ಮೇ 17ರಂದು ಕಾರ್ನೆಲ್ ಕ್ಯಾಂಪಸ್‌ನಲ್ಲಿ ಕಾಣಿಸಿಕೊಂಡ ಬಳಿಕ ಆಲಾಪ್ ನಾಪತ್ತೆಯಾಗಿದ್ದರು. ನೀಲಿ ಬಣ್ಣದ ಸಾಕ್ಸ್ ಮತ್ತು ಲೆದರ್ ಸ್ಯಾಂಡಲ್ಸ್ ಹಾಕಿದ್ದರು ಎಂದು ಹೇಳಲಾಗಿದೆ. ವಿಶ್ವವಿದ್ಯಾಲಯದ ಉಪಕುಲಪತಿ ರಿಯಾನ್ ಲಾಂಬರ್ಡಿ ವಿದ್ಯಾರ್ಥಿ ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ.
“ಆಲಾಪ್ ಮಹತ್ವಾಕಾಂಕ್ಷೆಯ ವಿದ್ಯಾರ್ಥಿಯಾಗಿದ್ದರು. ಮುಂಬರುವ ಡಿಸೆಂಬರ್‌ನಲ್ಲಿ ಪದವಿ ಪಡೆದುಕೊಳ್ಳುತ್ತಿದ್ದರು. ನಮ್ಮ ಕ್ಯಾಂಪಸ್‌ನಲ್ಲೇ ಮಾಸ್ಟರ್ ಆಫ್ ಎಂಜಿನಿಯರಿಂಗ್ ಶಿಕ್ಷಣ ಮುಂದುವರಿಸಿದ್ದರು. ಆಲಾಪ್‌ಗೆ ಫೋಟೋಗ್ರಫಿಯಲ್ಲಿ ವಿಶೇಷವಾದ ಆಸಕ್ತಿ ಇತ್ತು’ ಎಂದು ಹೇಳಿದ್ದಾರೆ.
ಆಲಾಪ್ ತಂದೆ ಜಯದತ್ತ ನರಸೀಪುರ ಅವರು ಬೆಂಗಳೂರಿನವರಾಗಿದ್ದು, ವಿಜಯಾ ಹೈಸ್ಕೂಲ್ ಮತ್ತು ಬಿ.ಎಂ. ಶ್ರೀನಿವಾಸಯ್ಯ ಕಾಲೇಜ್ ಆಫ್ ಎಂಜಿನಿಯರಿಂಗ್‌ನಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಸದ್ಯ ಅವರು ಇಂಟರ್‌ಮೌಂಟನ್ ಹೆಲ್ತ್‌ಕೇರ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.