Advertisement

ಸಮಸ್ಯೆಗೆ ಪರಿಹಾರ ಹುಡುಕಿ

03:30 PM Jun 23, 2017 | Team Udayavani |

ಕಲಬುರಗಿ: ಸಮಾಜ ಕಾರ್ಯ ವಿದ್ಯಾರ್ಥಿಗಳು ಕೇವಲ ಪಠ್ಯ ಅಧ್ಯಯನ ಮಾಡಿದರೆ ಸಾಲದು. ವರ್ತಮಾನದ ಸಾಮಾಜಿಕ ಸಮಸ್ಯೆಗಳನ್ನು ಪತ್ತೆ ಹಚ್ಚಿ ಅವುಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರಚನಾತ್ಮಕವಾಗಿ ಕೆಲಸ ಮಾಡಬೇಕು ಎಂದು ನಿವೃತ್ತ ಪ್ರಾಧ್ಯಾಪಕ ಅಂಬಾರಾವ ಉಪಳಾಂವಕರ ಕರೆ ನೀಡಿದರು. 

Advertisement

ನಗರದ ಇನಾಮದಾರ ಸಮಾಜಕಾರ್ಯ ಸ್ನಾತಕೋತ್ತರ ಮಹಾವಿದ್ಯಾಲಯದಲ್ಲಿ ಆಧುನಿಕ ಸಮಾಜಕಾರ್ಯದ ವೃತ್ತಿಪರ ತತ್ವಗಳು ಮತ್ತು ಸವಾಲುಗಳು ಕುರಿತು ಗುರುವಾರ ಆಯೋಜಿಸಲಾಗಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜಕಾರ್ಯ ಎಂದರೆ ನಮ್ಮಷ್ಟಕ್ಕೆ ನಾವು ಕೆಲಸ ಮಾಡಿಕೊಂಡು ಹೋಗುವುದಲ್ಲ.

ಬದಲಿಗೆ ಸಮಾಜದಲ್ಲಿನ ಒಬ್ಬ ವ್ಯಕ್ತಿ, ಗುಂಪು, ಸಮುದಾಯ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿರುವವರನ್ನು ಹೊರಗೆ ತರುವುದು ಅಗತ್ಯ ಎಂದು ಪ್ರತಿಪಾದಿಸಿದರು. ಸಮಾಜ ಕಾರ್ಯ ಎನ್ನುವುದು ಅತ್ಯಂತ ಪವಿತ್ರ ಕೆಲಸ. ಸದಾ ಕಾಲ ಸವಾಲು ಸ್ವೀಕರಿಸುವುದು ಮತ್ತು ಅವುಗಳನ್ನು ಎದುರಿಸುವ ಎದೆಗಾರಿಕೆ, ಜಾಣ್ಮೆ ಕಲಿಯಬೇಕು.

ಅದರಿಂದ ಸಮಾಜದಲ್ಲಿನ ಸ್ವಾಸ್ಥ ಕಾಪಾಡುವ ಕೆಲಸವು ನಿರಂತರವಾಗಿ ನಡೆಯುತ್ತದೆ ಎಂದು ಹೇಳಿದರು. ಜಿಲ್ಲಾ ಪತ್ರಕರ್ತ ಸಂಘದ ಕಾರ್ಯದರ್ಶಿ ಶಿವರಂಜನ್‌ ಸತ್ಯಂಪೇಟೆ ಮಾತನಾಡಿ, ಸಮಾಜಕಾರ್ಯ ಎನ್ನುವುದು ಪ್ರಯೋಗಾತ್ಮಕ ಆಗಿರಬೇಕು. ಕೇವಲ ಪುಸ್ತಕ ಓದುವುದರಿಂದ ಉತ್ತಮ ಸಮಾಜಕಾರ್ಯ ಮಾಡಿದ ಹಾಗೆ ಆಗುವುದಿಲ್ಲ.

ಅಣ್ಣಾ ಹಜಾರೆ, ಮಹಾತ್ಮಾ ಗಾಂಧೀಜಿ ಅವರೆಲ್ಲ ತಾವು ಸಮಾಜ ಕಾರ್ಯವನ್ನು ಮಾಡುವ ಮೂಲಕ ಅಪಾರ ಜೀವನ್ಮುಖೀ ಸಂದೇಶಗಳನ್ನು ಸಮಾಜಕ್ಕೆ ನೀಡಿದ್ದಾರೆ. ಅವರನ್ನು ಹಿಂಬಾಲಿಸಿಕೊಂಡು ಸಮಾಜಕ್ಕೆ ನೀವು ಏನನ್ನಾದರೂ ಮಾಡಿ ಎಂದು ಹೇಳಿದರು. ಸಮಾಜ ಸ್ವ-ಮಜಾ ಎನ್ನುವ ಅರ್ಥದಲ್ಲಿ ತಿಳಿಯಲಾಗುತ್ತಿದೆ.

Advertisement

ಗ್ರಾಮೀಣ ಪ್ರದೇಶದಲ್ಲಿ ಹಲವಾರು ಸಮಸ್ಯೆಗಳಿವೆ. ಅವುಗಳಿಗೆ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿ ಜನರೊಂದಿಗೆ ಸೇರಿಕೊಂಡು ಕೆಲಸ ಮಾಡಬೇಕು. ಬೇರೆ ಎಲ್ಲರ ಬಗ್ಗೆ ಚಿಂತಿಸುವ ನಿಮಗೆ ನೌಕರಿ ಭರವಸೆ ಇಲ್ಲ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಗುಲ್ಬರ್ಗ ವಿವಿ ಸಮಾಜಕಾರ್ಯ ಅಧ್ಯಯನ ವಿಭಾಗದ ಅತಿಥಿ ಉಪನ್ಯಾಸಕ ಡಾ| ಬನಶಂಕರಯ್ಯ ಮಸ್ಕಿಮಠ, ನೂತನ ಪದವಿ ಮಹಾವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಉದಯಕುಮಾರ ದೇಶಮುಖ ಮಾತನಾಡಿದರು.

ಇನಾಮದಾರ್‌ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ| ಕ್ಯೂ.ಎಂ. ಇನಾಮದಾರ ಅಧ್ಯಕ್ಷತೆ ವಹಿಸಿದ್ದರು. ಆನಂದ ಕೊಪ್ಪದ, ಗೋಪಾಲ ಕುಲಕರ್ಣಿ, ಚಂದ್ರಪ್ರಭಾ ಪಾಟೀಲ ಇದ್ದರು. ಸಿದ್ದರಾಮ ನಿರೂಪಿಸಿದರು. ಗಂಗೂಬಾಯಿ ಪ್ರಾರ್ಥಿಸಿದರು. ವಿದ್ಯಾಶ್ರೀ ಸ್ವಾಗತಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next