ಪಿರಿಯಾಪಟ್ಟಣ: ತಾಲೂಕಿನ ಬೆಟ್ಟದಪುರದಿಂದ ಕುಶಾಲನಗರ ಮಾರ್ಗದಲ್ಲಿ ತಾವರೆ ಕೆರೆಯ ಸಮೀಪ ಪುರಾತನ ಕಾಲದ 20 ಅಡಿ ಆಳದ ಸುರಂಗ ಪತ್ತೆಯಾಗಿದೆ. ಜೆಸಿಬಿಯಿಂದ ದೂರವಾಣಿ ಸಂಪರ್ಕದ ದುರಸ್ತಿ ಕಾರ್ಯ ಮಾಡುತ್ತಿರುವಾಗ ಸುರಂಗ ಪತ್ತೆಯಾಗಿದೆ. ಈ ವಿಚಾರವನ್ನು ಸ್ಥಳೀಯ ಪೊಲೀಸ್ ಠಾಣೆಗೆ ತಿಳಿಸಲಾಗಿದೆ.
ಸೋಮವಾರ ಬೆಳಿಗ್ಗೆ ಬೆಟ್ಟದಪುರ ಮತ್ತು ಕುಶಾಲನಗರ ರಸ್ತೆಯಲ್ಲಿ ದೂರವಾಣಿ ಸಂಪರ್ಕದ ಕೇಬಲ್ ಕೆಲಸಕ್ಕಾಗಿ ಜೆಸಿಬಿ ಮೂಲಕ ಕೆಲಸ ಮಾಡಲಾಗುತಿತ್ತು. ಈ ಸಂದರ್ಭದಲ್ಲಿ ಸುರಂಗ ಪತ್ತೆಯಾಗಿದೆ. ಈ ಪ್ರಾಚೀನ ಕಾಲದ ಸುರಂಗದಲ್ಲಿ ಏನಿವೆ ಎಂಬ ಕೂತಹಲದಿಂದ ಸುತ್ತಮುತ್ತಲ ಹಳ್ಳಿಯ ಜನರು ಸೇರಿದ್ದು, ಜನರಲ್ಲಿ ಕುತೂಹಲ ಮನೆ ಮಾಡಿತ್ತು.
ಈ ಸಂದರ್ಭದಲ್ಲಿ ಪಿರಿಯಾಪಟ್ಟಣ ಪ್ರಭಾರ ತಹಶೀಲ್ದಾರ್ ಪ್ರಕಾಶ್ ಮತ್ತು ಸರ್ಕಲ್ ಇನ್ಸ್‌ಪೆಕ್ಟರ್ ಪ್ರದೀಪ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ನಂತರ ಇದು ಪುರಾತತ್ವ ಇಲಾಖೆಗೆ ಬರುವುದರಿಂದ ಅವರಿಗೆ ಮಾಹಿತಿ ನೀಡಿದರು. ನಂತರ ಸ್ಥಳಕ್ಕೆ ಗವಿ ಸಿದ್ದಯ್ಯ ಮತ್ತು ಎನ್.ಎಲ್.ಗೌಡ ಸ್ಥಳಕ್ಕೆ ಆಗಮಿಸಿ ನಂತರ ಇವರು ಪತ್ರಿಕೆಯೊಂದಿಗೆ ಮಾತನಾಡಿ, ಇದು ಹಳೆ ಕಾಲದ ಸುರಂಗವಾಗಿದೆ. ಇಳಿದು ಪರಿಶೀಲಿಸಲು ಆಗ್ನಿಶಾಮಕ ಇಲಾಖೆಯವರು ಇಂತಹ ಸುರಂಗಗಳಿಗೆ ನಾವು ಇಳಿಯುವ ಅಧಿಕಾರ ಇಲ್ಲವೆಂದು ಹೇಳುತ್ತಿದ್ದಾರೆ.
ನಮ್ಮ ಇಲಾಖೆಯಲ್ಲಿ ಯಾವುದೇ ಪರಿಕರಗಳಿಲ್ಲದ ಕಾರಣ ಈ ಸುರಂಗವನ್ನು ಮುಚ್ಚಬೇಕೋ ಬೇಡವೋ ಎಂಬ ನಿರ್ಧಾರವನ್ನು ನಮ್ಮ ಹಿರಿಯ ಅಧಿಕಾರಿಗಳಿಗೆ ತಿಳಿಸಿ ಅವರಿಂದ ಉತ್ತರ ಬಂದ ನಂತರ ಈ ಸುರುಂಗ ಮಾರ್ಗವನ್ನು ಹೆಚ್ಚಿನ ತಜ್ಞರ ತಂಡದೊಂದಿಗೆ ಬಂದು ಪರಿಶೀಲಿಸುತ್ತೇವೆ ಎಂದು ತಿಳಿಸಿದ್ದಾರೆ.
ಸುರಂಗ ಮಾರ್ಗವನ್ನು ಕೆಲವರು ಟಿಪ್ಪು ಸುಲ್ತಾನ್ ಕಾಲದ ಸುರಂಗ ಮಾರ್ಗವೆನ್ನುತ್ತಾರೆ. ಆದರೆ ಟಿಪ್ಪು$ ಪಿರಿಯಾಪಟ್ಟಣ ತಾಲೂಕಿನ ಇತಿಹಾಸದಲ್ಲಿ ಎಂದೂ ಗೋಚರಿಸಿಲ್ಲ. ಆದರೆ ಬೆಟ್ಟದಪುರ ಮತ್ತು ಪಿರಿಯಾಪಟ್ಟಣವನ್ನು ಚಂಗಾಳ್ವರು ಮತ್ತು ಪಾಳೇಗಾರರು ಆಳಿದ ಬಗ್ಗೆ ಬೆಟ್ಟದಪುರ ಸುತ್ತಾಮುತ್ತಲ ಗ್ರಾಮಗಳಲ್ಲಿ ಇತಿಹಾಸ ಕಲ್ಲುಗಳು ಪತ್ತೆಯಾಗುತ್ತವೆ. ಇತ್ತೀಚಿನ ದಿನಗಳಲ್ಲಿ ಪಿರಿಯಾಪಟ್ಟಣ ತಾಲೂಕಿನ ಹಲವಾರು ಗ್ರಾಮಗಳು ಒಂದೊಂದು ಇತಿಹಾಸವನ್ನು ಹೊಂದಿರುವುದಕ್ಕೆ ಆ ಗ್ರಾಮಗಳಲ್ಲಿ ಇತಿಹಾಸ ಕಲ್ಲುಗಳೆ ಸಾಕ್ಷಿ.
ಈ ಸಂದರ್ಭದಲ್ಲಿ ಉಪತಹಶಿಲ್ದಾರ್ ಕುಬೇರ್ ಮತ್ತು ವಿ.ಎಗಳಾದ ಶ್ರೀಧರ್, ಹೇಮಂತ್, ಬೆಟ್ಟದಪುರ ಪೊಲೀಸ್ ಠಾಣೆಯ ಪಿಎಸ್‌ಐ ಜಯಸ್ವಾಮಿ, ಎಎಸ್‌ಐ ರುದ್ರೆಗೌಡ ಹಾಗೂ ನಟರಾಜು ಮತ್ತು ಸಿಬ್ಬಂದಿ ಮಧು, ಸ್ವಾಮಿ ಸ್ಥಳಕ್ಕೆ ಆಗಮಿಸಿದ್ದರು.