Advertisement
ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಯನ್ನು ಪರಿಣಾಮಕಾರಿಯಾಗಿ ಹೆಚ್ಚಿಸುವ ನಿಟ್ಟಿನಲ್ಲಿ ಈ ಸಾಲಿನ ಬಜೆಟ್ ಸಹಕಾರಿಯಾಗಲಿದೆ. ಮೂಲಸೌಕರ್ಯ ವಲಯಕ್ಕೆ ಹೆಚ್ಚಿನ ಹೂಡಿಕೆ ಮಾಡಲಾಗಿದ್ದು, ಬಹುತೇಕ ಹಳೆಯ ಯೋಜನೆಗಳನ್ನು ವಿಸ್ತರಿಸಲಾಗಿದೆ. ಜತೆಗೆ ನಗರ ಮೂಲಸೌಕರ್ಯ ಅಭಿವೃದ್ಧಿ ನಿಧಿ ಸ್ಥಾಪನೆಯಂತಹ ನೂತನ ಕ್ರಮಗಳಿಗೆ ಆದ್ಯತೆ ನೀಡಲಾಗಿದೆ. ಮೂಲಸೌಕರ್ಯ ಮತ್ತು ಉತ್ಪಾದನಾ ಸಾಮರ್ಥ್ಯದ ಮೇಲಿನ ಹೂಡಿಕೆಗಳು ಬೆಳವಣಿಗೆ ಮತ್ತು ಉದ್ಯೋಗದ ಮೇಲೆ ದೊಡ್ಡ ಗುಣಾತ್ಮಕ ಪರಿಣಾಮ ಬೀರುತ್ತದೆ.
Related Articles
ಹೊಸದಾಗಿ ಸ್ಥಾಪಿಸಲಾಗಿರುವ ಮೂಲಸೌಕರ್ಯ ಹಣಕಾಸು ಸಚಿವಾಲಯವು ಸಾರ್ವಜನಿಕ ಸಂಪನ್ಮೂಲಗಳ ಮೇಲೆ ಪ್ರಧಾನವಾಗಿ ಅವಲಂಬಿತವಾಗಿರುವ ರೈಲ್ವೆ, ರಸ್ತೆಗಳು, ನಗರ ಮೂಲಸೌಕರ್ಯ, ವಿದ್ಯುತ್ ಸೇರಿದಂತೆ ಮೂಲಸೌಕರ್ಯ ವಲಯದಲ್ಲಿ ಹೆಚ್ಚು ಸರ್ಕಾರಿ ಖಾಸಗಿ ಸಹಭಾಗಿತ್ವದ ಅಡಿ ಹೂಡಿಕೆಗೆ ಪ್ರೋತ್ಸಾಹ ನೀಡಲಿದೆ.
2022ರಿಂದ 2047ರ ವರೆಗಿನ “ಅಮೃತ್ ಕಾಲ’ಕ್ಕೆ ಸೂಕ್ತವಾದ ವರ್ಗೀಕರಣ ಮತ್ತು ಹಣಕಾಸು ಹೂಡಿಕೆಯನ್ನು ಶಿಫಾರಸು ಮಾಡಲು ಮೂಲಸೌಕರ್ಯಗಳ ಸಮನ್ವಯ ಮಾಸ್ಟರ್ ಪಟ್ಟಿಯನ್ನು ಪರಿಣಿತ ಸಮಿತಿಯು ಪರಿಶೀಲಿಸಲಿದೆ.
Advertisement
ಮುನ್ಸಿಪಲ್ ಬಾಂಡ್‌ಗಳು: ಆಸ್ತಿ ತೆರಿಗೆ ಆಡಳಿತ ಸುಧಾರಣೆ ಮತ್ತು ನಗರ ಮೂಲಸೌಕರ್ಯಗಳ ಮೇಲಿನ ರಿಂಗ್-ಫೆನ್ಸಿಂಗ್ ಬಳಕೆದಾರರ ಶುಲ್ಕಗಳ ಮೂಲಕ ಮುನ್ಸಿಪಲ್ ಬಾಂಡ್‌ಗಳಿಗೆ ತಮ್ಮ ಸಾಲ ಅರ್ಹತೆಯನ್ನು ಸುಧಾರಿಸಲು ನಗರಗಳನ್ನು ಪ್ರೋತ್ಸಾಹಿಸಲಾಗುತ್ತದೆ. ರಾಜ್ಯ ಸರ್ಕಾರಗಳಿಗೆ ಬಡ್ಡಿ ರಹಿತ ಸಾಲ:
ಮೂಲಸೌಕರ್ಯ ವಲಯದಲ್ಲಿ ಹೂಡಿಕೆಯನ್ನು ಉತ್ತೇಜಿಸಲು ಮತ್ತು ಪೂರಕ ನೀತಿ ಕ್ರಮಗಳನ್ನು ಪ್ರೋತ್ಸಾಹಿಸಲು ರಾಜ್ಯ ಸರ್ಕಾರಗಳಿಗೆ 50 ವರ್ಷಗಳ ಬಡ್ಡಿ ರಹಿತ ಸಾಲವನ್ನು ಇನ್ನೂ ಒಂದು ವರ್ಷದವರೆಗೆ ಮುಂದುವರಿಸಲು ನಿರ್ಧರಿಸಲಾಗಿದೆ. ಇದರಿಂದ ಬಂಡವಾಳ ವೆಚ್ಚವೂ 1.3 ಲಕ್ಷ ಕೋಟಿ ರೂ.ಗಳಷ್ಟು ವರ್ಧಿಸಿದೆ. ಜಿಎಸ್‌ಟಿ ಅನುಷ್ಠಾನದ ನಂತರ ರಾಜ್ಯಗಳ ಪಾಲನ್ನು ಕೇಂದ್ರ ನೀಡುತ್ತಿದೆ. ಇದರ ಜತೆಗೆ ಬಡ್ಡಿ ರಹಿತವಾಗಿ ಸಾಲವನ್ನು ಸಹ ರಾಜ್ಯಗಳಿಗೆ ನೀಡಲಾಗುತ್ತಿದೆ. ರೈಲ್ವೆಗಾಗಿ 2.40 ಲಕ್ಷ ಕೋಟಿ ರೂ. ಮೀಸಲು:
ರೈಲ್ವೆಗಾಗಿ ದಾಖಲೆಯ 2.40 ಲಕ್ಷ ಕೋಟಿ ರೂ. ಮೀಸಲಿಡಲಾಗಿದೆ. ಇದು ಇದುವರೆಗಿನ ಗರಿಷ್ಠ ಹೂಡಿಕೆಯಾಗಿದೆ. 2013-14ರ ಸಾಲಿಗೆ ಹೋಲಿಸಿದರೆ 9 ಪಟ್ಟು ಅಧಿಕವಾಗಿದೆ. ಪ್ರಯಾಣಿಕರ ನಿರೀಕ್ಷೆಗೆ ತಕ್ಕಂತೆ ರಾಜಧಾನಿ, ಶತಾಬ್ದಿ, ತುರಂತೊ, ಹಮ್‌ಸಫರ್ ಮತ್ತು ತೇಜಸ್‌ನಂತಹ ಪ್ರೀಮಿಯರ್ ರೈಲುಗಳ 1,000ಕ್ಕೂ ಹೆಚ್ಚು ಕೋಚ್‌ಗಳ ನವೀಕರಣ. ಪ್ರಯಾಣಿಕರ ಸೌಕರ್ಯ ಸುಧಾರಣೆ ನಿಟ್ಟಿನಲ್ಲಿ ಈ ಕೋಚ್‌ಗಳ ಒಳಭಾಗವನ್ನು ಆತ್ಯಾಧುನಿಕವಾಗಿ ನವೀಕರಿಸಿ ಹೊಸ ಲುಕ್ ನೀಡಲಾಗುತ್ತದೆ. ಜತೆಗೆ ಅತಿ ಹೆಚ್ಚು ವಂದೇ ಭಾರತ್ ರೈಲುಗಳು ಹಳಿಗೆ ಬರಲಿದೆ. ಈ ವರ್ಷ ಹಳಿಗಳ ನವೀಕರಣಕ್ಕೆ 17,296.84 ಕೋಟಿ ರೂ. ಮೀಸಲಿಡಲಾಗಿದೆ. ಹಾಗೆಯೇ, ದೇಶದ ಎಲ್ಲ ಮೆಟ್ರೋ ಯೋಜನೆಗಳನ್ನು ಸೇರಿಸಿ 19,518 ಕೋಟಿ ರೂ.ಗಳ ಅನುದಾನ ನೀಡಲಾಗಿದೆ. ಆರಂಭದಲ್ಲಿ ಕೇವಲ ದೆಹಲಿಗೆ ಮಾತ್ರ ಅನುದಾನ ನೀಡಲಾಗುತ್ತಿತ್ತು. 100 ಸಾರಿಗೆ ಮೂಲಸೌಕರ್ಯ ಯೋಜನೆ ಜಾರಿ:
ಬಂದರುಗಳು, ಕಲ್ಲಿದ್ದಲು, ಉಕ್ಕು, ರಸಗೊಬ್ಬರ ಮತ್ತು ಆಹಾರ ಧಾನ್ಯಗಳ ವಲಯಗಳಿಗೆ ಸಂಪರ್ಕಕ್ಕಾಗಿ 100 ಸಾರಿಗೆ ಮೂಲಸೌಕರ್ಯ ಯೋಜನೆಗಳನ್ನು ಗುರುತಿಸಿದ್ದು, ಆದ್ಯತೆ ಮೇಲೆ ಈ ಯೋಜನೆಗಳನ್ನು ಕೈಗೊಳ್ಳಲಾಗುತ್ತದೆ. ಇದಕ್ಕಾಗಿ 75,000 ಕೋಟಿ ರೂ. ಮೀಸಲಿಡಲಾಗಿದೆ. ಈ ಪೈಕಿ 15,000 ಕೋಟಿ ರೂ. ಖಾಸಗಿ ಹೂಡಿಕೆಯಾಗಿದೆ. ವಿಮಾನ ನಿಲ್ದಾಣಗಳ ಪುನರುಜ್ಜೀವನ:
ಪ್ರಾದೇಶಿಕ ವಾಯು ಸಂಪರ್ಕವನ್ನು ಸುಧಾರಿಸಲು 50 ಹೆಚ್ಚುವರಿ ವಿಮಾನ ನಿಲ್ದಾಣಗಳು, ಹೆಲಿಪೋರ್ಟ್‌ಗಳು, ವಾಟರ್ ಏರೋಡ್ರೋಮ್‌ಗಳು ಮತ್ತು ಅಡ್ವಾನ್x ಲ್ಯಾಂಡಿಂಗ್ ಗ್ರೌಂಡ್‌ಗಳನ್ನು ಪುನರುಜ್ಜೀವನಗೊಳಿಸಲಾಗುತ್ತದೆ. ಕಳೆದ ಐದು ವರ್ಷಗಳಿಂದ ಉಡಾನ್(ಉಡೇ ದೇಶ್ ಕಾ ಆಮ್ ನಾಗರಿಕ್) ಯೋಜನೆ ಅಡಿ ಪ್ರಾದೇಶಿಕ ವಾಯು ಸಂಪರ್ಕವನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ. 2014ರ ವೇಳೆಗೆ ದೇಶದಲ್ಲಿ ಒಟ್ಟು 74 ವಿಮಾನ ನಿಲ್ದಾಣಗಳಿದ್ದವು. ಪ್ರಸ್ತುತ ಭಾರತದಲ್ಲಿ 147 ವಿಮಾನ ನಿಲ್ದಾಣಗಳಿವೆ. ಸುಸ್ಥಿರ ನಗರಗಳ ನಿರ್ಮಾಣ:
ನಗರಗಳನ್ನು “ನಾಳಿನ ಸುಸ್ಥಿರ ನಗರಗಳಾಗಿ’ ಪರಿವರ್ತಿಸಲು ನಗರ ಯೋಜನೆ ಸುಧಾರಣೆ ಮತ್ತು ಕ್ರಮಗಳನ್ನು ಕೈಗೊಳ್ಳಲು ರಾಜ್ಯಗಳು ಮತ್ತು ನಗರಗಳಿಗೆ ಪ್ರೋತ್ಸಾಹ. ಇದು ಭೂ ಸಂಪನ್ಮೂಲಗಳ ಸಮರ್ಥ ಬಳಕೆ, ನಗರ ಮೂಲಸೌಕರ್ಯಕ್ಕೆ ಅಗತ್ಯ ಸಂಪನ್ಮೂಲಗಳು, ಸಾರಿಗೆ ಆಧಾರಿತ ಅಭಿವೃದ್ಧಿ, ಕೈಗೆಟುಕುವ ದರದಲ್ಲಿ ನಗರ ಭೂಮಿ ಮತ್ತು ಎಲ್ಲರಿಗೂ ಅವಕಾಶಗಳನ್ನು ಇದು ಒಳಗೊಂಡಿದೆ. ಈ ಹಿಂದೆ ಸ್ಮಾರ್ಟ್ ಸಿಟಿ ಯೋಜನೆ ಅಡಿ ದೇಶದ 100 ನಗರಗಳನ್ನು ಆಯ್ಕೆ ಮಾಡಲಾಗಿದ್ದು, ಇದರ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದೆ. ನಗರ ಮೂಲಸೌಕರ್ಯ ಅಭಿವೃದ್ಧಿ ನಿಧಿ ಸ್ಥಾಪನೆ:
ನಗರ ಮೂಲಸೌಕರ್ಯ ಅಭಿವೃದ್ಧಿ ನಿಧಿ(ಯುಐಡಿಎಫ್) ಸ್ಥಾಪನೆ. ಇದಕ್ಕಾಗಿ ವಾರ್ಷಿಕ 10,000 ಕೋಟಿ ರೂ. ಮೀಸಲಿಡಲಾಗುತ್ತದೆ. ರಾಷ್ಟ್ರೀಯ ಗೃಹ ಬ್ಯಾಂಕ್‌ನಿಂದ ಇದರ ನಿರ್ವಹಣೆ. ಟೈಯರ್ 1 ಮತ್ತು ಟೈಯರ್ 2 ನಗರಗಳಲ್ಲಿ ನಗರ ಮೂಲಸೌಕರ್ಯ ಅಭಿವೃದ್ಧಿಗೆ ಈ ನಿಧಿಯನ್ನು ಸಾರ್ವಜನಿಕ ಸಂಸ್ಥೆಗಳು ಬಳಸಿಕೊಳ್ಳಲಿವೆ. ಯುಐಡಿಎಫ್ ಬಳಕೆಗಾಗಿ ಸೂಕ್ತವಾದ ಬಳಕೆದಾರ ಶುಲ್ಕ ಅನುಷ್ಠಾನಗೊಳಿಸಲು 15ನೇ ಹಣಕಾಸು ಆಯೋಗ ಮತ್ತು ಪ್ರಸಕ್ತ ಯೋಜನೆಗಳಿಂದ ಸಂಪನ್ಮೂಲ ಕ್ರೋಢೀಕರಣಕ್ಕೆ ರಾಜ್ಯಗಳಿಗೆ ಪ್ರೋತ್ಸಾಹ. ಮ್ಯಾನ್‌ಹೋಲ್‌ಗಳಿಗೆ ವಿದಾಯ:
ಎಲ್ಲಾ ನಗರಗಳು ಮತ್ತು ಪಟ್ಟಣಗಳಲ್ಲಿ ಮ್ಯಾನ್‌ಹೋಲ್‌ಗಳಿಗೆ ವಿದಾಯ ಹೇಳಲಾಗುತ್ತದೆ. ಸೆಪ್ಟಿಕ್ ಟ್ಯಾಂಕ್‌ಗಳು ಮತ್ತು ಒಳಚರಂಡಿಗಳನ್ನು ಶೇ.100 ರಷ್ಟು ಮೆಕ್ಯಾನಿಕಲ್ ಡೆಸ್ಲಡ್ಜಿಂಗ್ ಅನ್ನು ಸಕ್ರಿಯಗೊಳಿಸಲಾಗುತ್ತದೆ. ಮ್ಯಾನ್‌ಹೋಲ್‌ನಿಂದ ಮೆಷಿನ್ ಹೋಲ್‌ಗಳಿಗೆ ಪರಿವರ್ತಿಸಲಾಗುತ್ತದೆ. ಒಣ ಮತ್ತು ಹಸಿ ಕಸದ ವೈಜ್ಞಾನಿಕ ನಿರ್ವಹಣೆಗೆ ಹೆಚ್ಚಿನ ಒತ್ತು. ಗೋಬರ್‌ಧನ್ ಯೋಜನೆ ಅಡಿ 500 ಹೊಸ “ಕಸದಿಂದ ರಸ’ ಘಟಕಗಳ ನಿರ್ಮಾಣ. ಈ ಪೈಕಿ ನಗರ ಪ್ರದೇಶಗಳಲ್ಲಿ 200 ಸಂಕುಚಿತ ಜೈವಿಕ ಘಟಕಗಳು ಹಾಗೂ 300 ಕ್ಲಸ್ಟರ್ ಆಧಾರಿತ ಘಟಕಗಳ ನಿರ್ಮಾಣ. ಇದಕ್ಕಾಗಿ 10,000 ಕೋಟಿ ರೂ. ಮೀಸಲು.