ಬೆಂಗಳೂರು: ಹಣಕಾಸಿನ ವಿಚಾರಕ್ಕೆ ಹರಳು ವ್ಯಾಪಾರಿಯನ್ನು ನಾಲ್ವರು ಹಲ್ಲೆ ನಡೆಸಿ ಹತ್ಯೆಗೈದಿರುವ ಘಟನೆ ಕೆ.ಆರ್.ಮಾರುಕಟ್ಟೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಆನೆಪಾಳ್ಯ ನಿವಾಸಿ ಸೈಯದ್ ಮನ್ಸೂರ್ ಅಹ್ಮದ್ (42) ಕೊಲೆಯಾದ ವ್ಯಾಪಾರಿ. ಕೃತ್ಯ ಎಸಗಿದ ಆರೋ ಪದ ಮೇಲೆ ಇಕ್ಬಾಲ್, ಹನೀಫ್ ಬಾಬಾ, ಶಂಕರ್ ಮಂಡಲ್ ಹಾಗೂ ವಿನಯ್‌ರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಸೈಯದ್ ಮನ್ಸೂರ್ ಅಹ್ಮದ್ ಆನೆಪಾಳ್ಯದಲ್ಲಿ ಪತ್ನಿ ಜತೆ ವಾಸವಾಗಿದ್ದು, ಅವಿನ್ಯೂ ರಸ್ತೆಯ ಅಂಚೆಪೇಟೆ ಬಿಬಿ ಸ್ಟ್ರೀಟ್‌ನಲ್ಲಿ ಹರಳು ವ್ಯಾಪಾರ ಮಾಡುತ್ತಿದ್ದರು. ರಾಜಸ್ಥಾನ ಮೂಲದ ಇಕ್ಬಾಲ್ ಜತೆಗೆ ಹರಳು ವ್ಯಾಪಾರ ನಡೆಸುತ್ತಿದ್ದರು. ಹೀಗಾಗಿ 20-30 ಸಾವಿರ ರೂ. ಅನ್ನು ಇಕ್ಬಾಲ್‌ಗೆ ಸೈಯದ್ ಕೊಡಬೇಕಾಗಿತ್ತು. ಆದರೆ, ನಿಗದಿತ ಸಮಯದಲ್ಲಿ ಕೊಡದಕ್ಕೆ ಇಕ್ಬಾಲ್ ಫೋನ್ ಮಾಡಿ ಕಿರುಕುಳ ನೀಡುತ್ತಿದ್ದರು.
ಈ ಮಧ್ಯೆ ಜೂನ್ 12ರಂದು ರಾತ್ರಿ 10 ಗಂಟೆ ಸುಮಾರಿಗೆ ಅಂಗಡಿ ಬಳಿ ಇಕ್ಬಾಲ್ ಹಾಗೂ ಆತನ ಸಹಚರರು ಅಂಗಡಿ ಬಳಿ ಬಂದು ಹಣಕಾಸಿನ ವಿಚಾರವಾಗಿ ಗಲಾಟೆ ಮಾಡಿದ್ದಾರೆ. ಈ ವೇಳೆ ನಾಲ್ವರು ಎದೆ, ಮುಖ, ಹೊಟ್ಟೆಗೆ ಬಲವಾಗಿ ಹೊಡೆದಿದ್ದಾರೆ. ಕೂಡಲೇ ಸ್ಥಳೀಯರು ಜಗಳ ಬಿಡಿಸಿ ಸೈಯದ್‌ನನ್ನು ಮನೆಗೆ ಕಳುಹಿಸಲಾಗಿತ್ತು. ತುಂಬಾ ಸುಸ್ತಾಗಿದ್ದ ಸೈಯದ್‌ಗೆ ಮರು ದಿನ ಜೂನ್ 14ರಂದು ಎದೆ ನೋವು ಕಾಣಿಸಿಕೊಂಡಿದ್ದು, ಪತ್ನಿ ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಮಾರ್ಗಮಧ್ಯೆ ಸೈಯದ್ ಮೃತಪಟ್ಟಿದ್ದಾರೆ.
ಇನ್ನು ಘಟನೆ ವಿಚಾರವನ್ನು ಸೈಯದ್ ಪತ್ನಿ ಬಳಿ ಹೇಳಿಕೊಂಡಿದ್ದರಿಂದ, ಮೃತ ಸೈಯದ್ ಸಹೋದರ ಸೈಯದ್ ಜಮ್ರದ್ ರಜಾ ಆರೋಪಿಗಳ ವಿರುದ್ಧ ಸಿಟಿ ಮಾರುಕಟ್ಟೆಯಲ್ಲಿ ಕೊಲೆ ಪ್ರಕರಣ ದಾಖಲಿಸಿದ್ದಾರೆ. ಆದರೆ, ಕೊಲೆಗೆ ಪೂರಕ ಸಾಕ್ಷ್ಯಗಳು ಇಲ್ಲ. ಗಲಾಟೆಯಾದ ಸ್ಥಳದಲ್ಲಿ ಹಲ್ಲೆ ನಡೆಸಿದ ಬಗ್ಗೆ ಸ್ಥಳೀಯರಾಗಲಿ, ಸಿಸಿ ಕ್ಯಾಮೆರಾದಲ್ಲಿ ದೃಶ್ಯಗಳು ಇಲ್ಲ. ಹೀಗಾಗಿ ಸದ್ಯ ನಾಲ್ವರನ್ನು ವಿಚಾರಣೆ ನಡೆಸಲಾಗಿದೆ. ಈ ವೇಳೆ ಆರೋಪಿಗಳು, ಕೇವಲ ಹಣ ವಾಪಸ್ ಕೊಡುವಂತೆ ಕೇಳಿದ್ದು, ವಾಗ್ವಾದ ನಡೆದಿದೆ. ಹಲ್ಲೆ ನಡೆಸಿಲ್ಲ ಎಂದಿದ್ದಾರೆ.
ಮತ್ತೊಂದೆಡೆ ಮರಣೋತ್ತರ ಪರೀಕ್ಷಾ ವರದಿಗೆ ಕಾಯುತ್ತಿದ್ದು, ಅದರ ಆಧಾರದ ಮೇಲೆ ಮುಂದಿನ ತನಿಖೆ ನಡೆಸಲಾಗುತ್ತದೆ ಎಂದು ಪೊಲೀಸರು ಹೇಳಿದರು. ಸಿಟಿ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.