Advertisement

ಲೋಕೋಪಯೋಗಿ ಇಲಾಖೆಗೆ ಆರ್ಥಿಕ ಸಂಕಷ್ಟ

11:01 AM Jan 09, 2020 | Lakshmi GovindaRaj |

ಬೆಂಗಳೂರು: ರಾಜ್ಯದಲ್ಲಿ ಪ್ರವಾಹದಿಂದ ರಸ್ತೆ, ಸೇತುವೆ, ಸರ್ಕಾರಿ ಕಟ್ಟಡಗಳ ಕುಸಿತದಿಂದ ಹತ್ತು ಸಾವಿರ ಕೋಟಿ ರೂ.ವರೆಗೆ ನಷ್ಟವುಂಟಾಗಿದ್ದು, ಕೇಂದ್ರ ಸರ್ಕಾರದ ವಿಶೇಷ ನೆರವಿನತ್ತ ಲೋಕೋಪಯೋಗಿ ಇಲಾಖೆ ಮುಖ ಮಾಡಿದೆ.

Advertisement

ಕೇಂದ್ರವು ನೆರೆ ಪರಿಹಾರಕ್ಕೆ ಬಿಡುಗಡೆ ಮಾಡಿರುವ ಮೊತ್ತದಲ್ಲಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮೂಲಸೌಕರ್ಯ ಕಲ್ಪಿಸುವುದು, ತಾತ್ಕಾಲಿಕ ಪರಿಹಾರ ನೀಡಲು ಮಾತ್ರ ಸಾಧ್ಯವಾಗಲಿದ್ದು ರಸ್ತೆ, ಸೇತುವೆ, ಸರ್ಕಾರಿ ಕಟ್ಟಡಗಳ ದುರಸ್ತಿ ಅಥವಾ ಹೊಸದಾಗಿ ನಿರ್ಮಾಣ ಮಾಡಲು ಆರ್ಥಿಕ ಸಂಕಷ್ಟ ಎದುರಾಗಿದೆ.

ಪ್ರವಾಹದಿಂದ ರಾಜ್ಯದಲ್ಲಿ 1,119 ಕಿ.ಮೀ. ಗ್ರಾಮೀಣ ರಸ್ತೆ, 14,991 ಕಿ.ಮೀ. ನಗರ ರಸ್ತೆ ಸೇರಿ ಒಟ್ಟು 21,818 ಕಿ.ಮೀ. ರಸ್ತೆ ಹಾಳಾಗಿದೆ. 11,063 ಸರ್ಕಾರಿ ಕಟ್ಟಡಗಳು, 150ಕ್ಕೂ ಹೆಚ್ಚು ಸೇತುವೆ ಹಾಳಾಗಿದ್ದು, ಇವುಗಳ ಪುನರ್‌ ನಿರ್ಮಾಣ ಹಾಗೂ ಅಗತ್ಯವಿರುವ ಕಡೆ ದುರಸ್ತಿಗೆ 10 ಸಾವಿರ ಕೋಟಿ ರೂ. ಮೊತ್ತ ಅಗತ್ಯವಿದೆ ಎಂದು ಇಲಾಖೆ ಕ್ರಿಯಾ ಯೋಜನೆ ಸಿದ್ಧಪಡಿಸಿದೆ.

ಕೇಂದ್ರ ಹೆದ್ದಾರಿ ಹಾಗೂ ಭೂ ಸಾರಿಗೆ ಸಚಿವಾಲಯದ ನಿಯೋಗವು ಇತ್ತೀಚೆಗೆ ಬೆಂಗಳೂರಿಗೆ ಬಂದಾಗಲೂ ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ಹಾನಿ ಹಾಗೂ ಹೊಸದಾಗಿ ರಸ್ತೆ ಹಾಗೂ ಸೇತುವೆಗಳ ನಿರ್ಮಾಣಕ್ಕೆ ಹೆಚ್ಚಿನ ನೆರವು ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಲೋಕೋಪಯೋಗಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ದೆಹಲಿಗೆ ಹೋಗಿದ್ದಾಗಲೂ ಸಚಿವ ನಿತಿನ್‌ ಗಡ್ಕರಿ ಅವರನ್ನು ಭೇಟಿ ಮನವಿ ಸಲ್ಲಿಸಿದ್ದಾರೆ.

ಒಂದೊಮ್ಮೆ ಕೇಂದ್ರ ಸರ್ಕಾರವು ಪ್ರವಾಹಕ್ಕಾಗಿ ವಿಶೇಷ ಅನುದಾನ ನೀಡದಿದ್ದರೆ ಮುಂದಿನ ರಾಜ್ಯ ಬಜೆಟ್‌ ಮೇಲೆ ಹೆಚ್ಚಿನ ಹೊರೆ ಬೀಳಲಿದ್ದು, ಹೆಚ್ಚುವರಿಯಾಗಿ ಹದಿನೈದು ಸಾವಿರ ಕೋಟಿ ರೂ. ಗಳಿಗೆ ಬೇಡಿಕೆ ಇಡಲಾಗಿದೆ ಎಂದು ಹೇಳಲಾಗಿದೆ.

Advertisement

2019-20 ನೇ ಸಾಲಿನ ಬಜೆಟ್‌ನಲ್ಲಿ ರಾಜ್ಯ ಅಭಿವೃದ್ಧಿ ಯೋಜನೆಯ ಹಂತ-4ರ ಘಟ್ಟ- 1 ರಲ್ಲಿ 3,676 ಕಿ.ಮೀ. ಉದ್ದದ ರಸ್ತೆಗಳನ್ನು 4500 ಕೋಟಿ ರೂ. ವೆಚ್ಚದಲ್ಲಿ ಹಾಗೂ ಘಟ್ಟ-2ರಲ್ಲಿ 2,663 ಕಿ.ಮೀ. ಉದ್ದದ ರಸ್ತೆಗಳನ್ನು 3,500 ಕೋಟಿ ರೂ.ಗಳಲ್ಲಿ, ಘಟ್ಟ-3ರಲ್ಲಿ 1,601 ಕಿ.ಮೀ ರಸ್ತೆಯಲ್ಲಿ 2000 ಕೋಟಿ ರೂ.ಗಳಲ್ಲಿ ಒಟ್ಟು 7,490 ಕಿ.ಮೀ 10,000 ಕೋಟಿ ರೂ.ಗಳಲ್ಲಿ ಅಭಿವೃದ್ಧಿಪಡಿಸುವುದಾಗಿ ತಿಳಿಸಲಾಗಿತ್ತು. 5,690 ಕೋಟಿ ರೂ. ಮೊತ್ತದಲ್ಲಿ ರಸ್ತೆ ಹಾಗೂ ಸೇತುವೆಗಳ ಸುಧಾರಣೆ ಮತ್ತು ನವೀಕರಣ ಯೋಜನೆ ಕೈಗೆತ್ತಿಕೊಳ್ಳುವುದಾಗಿಯೂ ತಿಳಿಸಲಾಗಿತ್ತು.

ಆದರೆ, ಹಿಂದಿನ ಸಮ್ಮಿಶ್ರ ಸರ್ಕಾರದಲ್ಲಿ ಲೋಕೋಪ ಯೋಗಿ ಇಲಾಖೆಗೆ ನಿಗದಿಮಾಡಿದ್ದ ಮೊತ್ತದಲ್ಲಿ 800 ಕೋಟಿ ರೂ. ಹೊರತುಪಡಿಸಿ ಎಲ್ಲ ಮೊತ್ತ ಬೇರೆ ಬೇರೆ ಯೋಜನೆಗಳಿಗೆ ವಿನಿಯೋಗಿಸಿ ಖಾಲಿ ಮಾಡಲಾಗಿತ್ತು. ಹೀಗಾಗಿ, ಪ್ರವಾಹದ ವೇಳೆ ರಸ್ತೆ . ಸೇತುವೆ ದುರಸ್ತಿಗೂ ಹಣಕ್ಕಾಗಿ ಪರದಾಡುವಂತಾಯಿತು. ರಾಜ್ಯ ಸರ್ಕಾರ ಪ್ರವಾಹ ಪರಿಹಾರಕ್ಕೆ 1,394.31 ಕೋಟಿ ರೂ. ಬಿಡುಗಡೆ ಮಾಡಿತ್ತಾದರೂ ಅದರಲ್ಲಿ ರಸ್ತೆ ಅಭಿವೃದ್ಧಿಗೆ ಸಿಕ್ಕಿದ್ದು ಕಡಿಮೆಯೇ. ಹೀಗಾಗಿ, ಕೇಂದ್ರ ಸರ್ಕಾರದ ವಿಶೇಷ ಪ್ಯಾಕೇಜ್‌ ಅಥವಾ ಅನುದಾನಕ್ಕಾಗಿ ಇಲಾಖೆ ಕಾಯುವಂತಾಗಿದೆ.

ಈ ಮಧ್ಯೆ, ರಾಜ್ಯದಲ್ಲಿ 1,217 ಕಿ.ಮೀ ಹೆದ್ದಾರಿ ನಿರ್ಮಾಣದ 52 ಕಾಮಗಾರಿಗಳು ಪ್ರಗತಿ ಹಂತ ದಲ್ಲಿವೆ. 2019-20 ನೇ ಸಾಲಿನಲ್ಲಿ 375 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ನಿರ್ಮಿಸುವ ಗುರಿ ಹೊಂದಿದ್ದು, ಅದರಲ್ಲಿ 116 ಕಿ.ಮೀ. ಪೂರ್ಣಗೊಳಿಸಲಾಗಿದೆ. 285 ಕೋಟಿ ರೂ. ವೆಚ್ಚದ 4 ಕಾಮಗಾರಿಗಳ ಪ್ರಸ್ತಾವನೆ ಯನ್ನು ಕೇಂದ್ರ ಭೂ ಸಾರಿಗೆ ಸಚಿವಾಲಯಕ್ಕೆ ಸಲ್ಲಿಸಲಾ ಗಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದಲ್ಲಿ ಪ್ರವಾಹದಿಂದ 7,500 ಕೋಟಿ ರೂ. ನಷ್ಟದ ಪ್ರಾಥಮಿಕ ಅಂದಾಜು ಮಾಡ ಲಾಗಿತ್ತು. ನಂತರ ನಷ್ಟದ ಅಂದಾಜು ಮತ್ತಷ್ಟು ಹೆಚ್ಚಾಗಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ತಾತ್ಕಾಲಿಕವಾಗಿ ಸಂಚಾರಕ್ಕೆ ಅನುಕೂಲ ವಾಗುವಂತೆ ದುರಸ್ತಿ ಮಾಡಲಾಗಿದೆ. ಅಲ್ಲದೆ, ಶಾಶ್ವತವಾಗಿ ರಸ್ತೆ ಅಭಿವೃದ್ಧಿ ಪಡಿಸಲು ಕ್ರಮಕೈಗೊಳ್ಳಲಾಗುತ್ತಿದೆ, ಕೇಂದ್ರದಿಂದ ನೆರವು ಬರುವ ವಿಶ್ವಾಸವಿದೆ.
-ಗೋವಿಂದ ಕಾರಜೋಳ, ಡಿಸಿಎಂ, ಲೋಕೋಪಯೋಗಿ ಸಚಿವರು

* ಎಸ್‌. ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next