Advertisement

ಆಯವ್ಯಯ ಅಳೆದು ತೂಗಿದ ಆರ್ಥಿಕ ತಜ್ಞರು

12:00 PM Feb 03, 2018 | |

ಬೆಂಗಳೂರು: ದೇಶದಲ್ಲಿ ಸಾರ್ವಜನಿಕರು- ಸರ್ಕಾರಿ ಅಧಿಕಾರಿ, ನೌಕರರ ನಡುವಿನ ಹಂತದಲ್ಲಿ ಭ್ರಷ್ಟಾಚಾರ ತಗ್ಗಿದ್ದರೂ ಟೆಂಡರ್‌, ನೀತಿ ನಿರೂಪಣೆ ಹಂತದಲ್ಲಿ ಕಡಿವಾಣ ಬಿದ್ದಿಲ್ಲ. ಕೃಷಿ ಅಭಿವೃದ್ಧಿಗೆ “ಲ್ಯಾಂಡ್‌ ಪೂಲಿಂಗ್‌’ಕ್ಕೆ ಗಮನ ನೀಡಬೇಕು. ಉನ್ನತ ಶಿಕ್ಷಣದ
ಕಡೆಗಣಿಸಲಾಗಿದೆ ಇವು ಕೇಂದ್ರ ಆಯವ್ಯಯ ಕುರಿತಂತೆ ತಜ್ಞರು ವ್ಯಕ್ತಪಡಿಸಿದ ಅಭಿಪ್ರಾಯಗಳು.

Advertisement

ಇನ್ಸ್‌ಟಿಟ್ಯೂಟ್‌ ಆಫ್ ಚಾರ್ಟೆಡ್‌ ಅಕೌಂಟೆಂಟ್ಸ್‌ ಆಫ್ ಇಂಡಿಯಾ ಸಂಸ್ಥೆಯ ಎಸ್‌ಐಆರ್‌ಸಿ ಬೆಂಗಳೂರು ಶಾಖೆಯು ನಗರದ ಕ್ರೈಸ್ಟ್‌ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ “ಕೇಂದ್ರ ಸರ್ಕಾರದ ಬಜೆಟ್‌- 2018ರ ವಿಶ್ಲೇಷಣೆ’ ಜಾಗೃತಿ ಕಾರ್ಯಕ್ರಮದಲ್ಲಿ ತಜ್ಞರು ಆಯ್ದ ಕ್ಷೇತ್ರಗಳಿಗೆ ನೀಡಿರುವ ಆದ್ಯತೆ, ನಿರ್ಲಕ್ಷ್ಯ, ಗಮನ ಹರಿಸಬೇಕಾದ ಅಂಶಗಳ ಬಗ್ಗೆ ವಿಸ್ತೃತವಾಗಿ ಚರ್ಚಿಸಿದರು.

ಕೇಂದ್ರ ಕೈಗೊಂಡಿರುವ ಕ್ರಮಗಳಿಂದ ಭ್ರಷ್ಟಾಚಾರ ತಗ್ಗಿದೆಯೇ ಎಂಬ ಬಗ್ಗೆ ಮಾತನಾಡಿದ ಹಿರಿಯ ಲೆಕ್ಕ ಪರಿಶೋಧಕ ಕೆ.ಎಸ್‌.ರವಿಶಂಕರ್‌, ಸಾರ್ವಜನಿಕರು- ಸರ್ಕಾರಿ ಅಧಿಕಾರಿ, ನೌಕರರ ಹಂತದಲ್ಲಿ ಭ್ರಷ್ಟಾಚಾರ ತಗ್ಗಿದೆ. ಆದರೆ ಟೆಂಡರ್‌ ಪ್ರಕ್ರಿಯೆ, ನೀತಿ ನಿರೂಪಣೆ ಹಂತದಲ್ಲಿ ಭ್ರಷ್ಟಾಚಾರ ನಿಯಂತ್ರಣಕ್ಕೆ ಬಂದಿಲ್ಲ ಎಂದರು. ಇದನ್ನು ಒಪ್ಪದ ತಜ್ಞ ಎನ್‌.ಜಿ.ಎನ್‌.ಪುರಾಣಿಕ್‌,
ಇ-ಟೆಂಡರ್‌ ಇತರೆ ವ್ಯವಸ್ಥೆಯಿಂದ ಟೆಂಡರ್‌ ಹಂತದಲ್ಲಿನ ಭ್ರಷ್ಟಾಚಾರ ತಗ್ಗಿದೆ. ಆದರೆ ನೀತಿ ನಿರೂಪಣೆ ಹಂತದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕಿದೆ ಎಂದರು.

ಸ್ಥಳೀಯ ಸಂಸ್ಥೆಗಳಲ್ಲಿ ಭಾರಿ ಭ್ರಷ್ಟಾಚಾರ: ನಗರ ತಜ್ಞ ಆರ್‌.ಕೆ.ಮಿಶ್ರಾ, ಪಡಿತರ, ಉದ್ಯೋಗ ಖಾತರಿ ಯೋಜನೆ ಸೇರಿದಂತೆ ಇತರೆ ಯೋಜನೆಗಳಲ್ಲಿ ಆಧಾರ್‌ ಮಾಹಿತಿ ಆಧರಿಸಿ ಫ‌ಲಾನುಭವಿಯ ಬ್ಯಾಂಕ್‌ ಖಾತೆಗೆ ನೇರವಾಗಿ ಸಬ್ಸಿಡಿ, ಅನುದಾನ ವಿತರಣೆ ವ್ಯವಸ್ಥೆಯಿಂದ ಭ್ರಷ್ಟಾಚಾರ ಸಾಕಷ್ಟು ನಿಯಂತ್ರಣಕ್ಕೆ ಬಂದಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಭ್ರಷ್ಟಾಚಾರ ಮೇರೆ ಮೀರಿದೆ ಎಂದು ಹೇಳಿದರು. ಇದಕ್ಕೆ ವ್ಯತಿರಿಕ್ತ ಅಭಿಪ್ರಾಯ ವ್ಯಕ್ತಪಡಿಸಿದ ತಜ್ಞ ಪುಲಕ್‌ ಘೋಷ್‌, ಸುಧಾರಿತ ವ್ಯವಸ್ಥೆಗಳಿದ್ದರೂ ಪ್ರಭಾವಿಗಳು ಫ‌ಲಾನುಭವಿಗಳನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಂಡು ವಾಮಮಾರ್ಗದಲ್ಲಿ ವಂಚಿಸುವುದು ನಡೆದೇ ಇದೆ ಎಂದು ತಿಳಿಸಿದರು.

“ಲ್ಯಾಂಡ್‌ ಪೂಲಿಂಗ್‌’ ಅಗತ್ಯ: ಗ್ರಾಮೀಣಾಭಿವೃದ್ಧಿ- ಕೃಷಿ ಕುರಿತು ಮಾತನಾಡಿದ ಆರ್‌. ಕೆ.ಮಿಶ್ರಾ, ದೇಶದ ರೈತರ ತಲಾ ಭೂಮಿ ಪ್ರಮಾಣ 0.78 ಇದೆ. ಇಷ್ಟು ಪುಟ್ಟ ಭೂಮಿಯಲ್ಲಿ ಶ್ರಮ ವಹಿಸಿ ದುಡಿದರೆ ಆ ಕುಟುಂಬಕ್ಕೆ ವರ್ಷಕ್ಕಾಗುವಷ್ಟು ಆಹಾರ ಬೆಳೆ ಬೆಳೆಯಬಹುದು. ಹಾಗಾಗಿ ಭೂಮಿಗಳನ್ನು ಒಗ್ಗೂಡಿಸಿ (ಲ್ಯಾಂಡ್‌ ಪೂಲಿಂಗ್‌) ಬೇಸಾಯಕ್ಕೆ ಮುಂದಾದರೆ ಉತ್ಪಾದಕತೆ ಹೆಚ್ಚಳಕ್ಕೆ ಸಹಕಾರಿಯಾಗ ಲಿದೆ. ಆದರೆ ಕೇಂದ್ರ ಸರ್ಕಾರ ಇತ್ತ ಗಮನ ನೀಡದಿ ರುವುದು ಅಚ್ಚರಿ ತಂದಿದೆ ಎಂದು ತಿಳಿಸಿದರು.

Advertisement

ಗೊಂದಲ: ರವಿಶಂಕರ್‌ ಮಾತನಾಡಿ, ಒಂದೆಡೆ ಕೇಂದ್ರ ಸರ್ಕಾರ ನಗರೀಕರಣಕ್ಕೆ ಒತ್ತು ನೀಡುವುದಾಗಿ ಹೇಳಿದರೆ, ಮತ್ತೂಂದೆಡೆ ಗ್ರಾಮೀಣಾಭಿವೃದ್ಧಿಗೆ ಆದ್ಯತೆ ನೀಡುವುದಾಗಿ ಸಮರ್ಥನೆ ನೀಡುತ್ತದೆ. ಕೇಂದ್ರದ ನಿಲುವಿನಲ್ಲೇ ಗೊಂದಲವಿದೆ ಎಂದರು.

ಪುಲಕ್‌ ಘೋಷ್‌, “ಕೃಷಿ ಬೆಳೆಯ ಬೆಲೆ ಏರಿಕೆಯಾದಾಗ ಸರ್ಕಾರ ಮಧ್ಯ ಪ್ರವೇಶಿಸಿ ಆಮದು ಮಾಡಿಕೊಂಡು ಪರಿಸ್ಥಿತಿ ನಿಭಾಯಿಸುತ್ತದೆ. ಆದರೆ ಬೆಲೆ ಇಳಿಕೆಯಾದಾಗ ಸ್ಪಂದಿಸದಿರುವುದು ಸರಿಯಲ್ಲ. ಹೆಚ್ಚು ಇಳುವರಿ ಪಡೆಯಲು ವೈಜ್ಞಾನಿಕ ತಂತ್ರಜ್ಞಾನ
ಬಳಕೆಗೆ ಆದ್ಯತೆ ನೀಡಬೇಕಿತ್ತು ಎಂದು ಹೇಳಿದರು. 

ಮಣಿಪಾಲ್‌ ಗ್ಲೋಬಲ್‌ ಎಜುಕೇಷನ್‌ ಸರ್ವಿ ಸಸ್‌ ಪ್ರೈವೇಟ್‌ ಲಿಮಿಟೆಡ್‌ ಅಧ್ಯಕ್ಷ ಟಿ.ವಿ.ಮೋಹನ್‌ ದಾಸ್‌ ಪೈ, ತೆರಿಗೆ ಸಲಹೆಗಾರ ಎಚ್‌.ಪದಂಚಂದ್‌ ಖೀಂಚ ಸಂವಾದದ ನಿರ್ವಹಣೆ ಮಾಡಿದರು.

ಇನ್ನಷ್ಟು ಅಭಿವೃದ್ಧಿ ಕೆಲಸಗಳು ಆಗಬೇಕಿದೆ
ಆರೋಗ್ಯ ಕ್ಷೇತ್ರಕ್ಕೆ ಒತ್ತು ನೀಡಿರುವುದಕ್ಕೆ ತಜ್ಞರು ಮುಕ್ತವಾಗಿ ಮೆಚ್ಚುಗೆ ವ್ಯಕ್ತಪಡಿಸಿದರು. ಆದರೆ ಉನ್ನತ ಶಿಕ್ಷಣ ಕ್ಷೇತ್ರವನ್ನು ಕಡೆಗಣಿಸಿರುವುದಕ್ಕೆ ಅಸಮಾಧಾನ ವ್ಯಕ್ತವಾಯಿತು. ಶಿಕ್ಷಕರನ್ನು ಕಲಿಕೆ ಹೊರತುಪಡಿಸಿ ಬಿಸಿಯೂಟ ತಯಾರಿ ಇತರೆ ಜವಾಬ್ದಾರಿಗಳಿಂದ ದೂರವಿಡಬೇಕು. ಅಗತ್ಯ ತರಬೇತಿ ನೀಡಿ ಮಕ್ಕಳ ಕಲಿಕೆಗಷ್ಟೇ ನಿಯೋಜಿಸಿದರೆ ಬದಲಾವಣೆ ತರಬಹುದು ಎಂದು ಆರ್‌.ಕೆ.ಮಿಶ್ರಾ ಹೇಳಿದರು. ಹೊಸ ಉದ್ಯೋಗ ಸೃಷ್ಟಿಗಿಂತ ಹುದ್ದೆಗೆ ಅಗತ್ಯವಾದ ಕೌಶಲ್ಯಯುಕ್ತ ಮಾನವ ಸಂಪನ್ಮೂಲ ಸೃಷ್ಟಿಸುವುದು ಮುಖ್ಯ. ಆ ನಿಟ್ಟಿನಲ್ಲಿ ಇನ್ನಷ್ಟು ಕೆಲಸ ಆಗಬೇಕಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next