ಬೆಂಗಳೂರು:ಎಂಟಿಬಿ ಅನಂತ ಉನ್ನತಿ ಎಜುಕೇಷನ್ ಟ್ರಸ್ಟ್ ನಿಂದ ಕುರುಬ ಸಮಾಜದ 24 ವೈದ್ಯಕೀಯ ವಿದ್ಯಾರ್ಥಿಗಳಿಗೆ ತಲಾ 60ಸಾವಿರ ರೂಪಾಯಿ ಆರ್ಥಿಕ ನೆರವು ನೀಡಿದ ಪೌರಾಡಳಿತ, ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಎಂಟಿಬಿ ನಾಗರಾಜು, ಮುಂದಿನ ಶೈಕ್ಷಣಿಕ ವರ್ಷದಿಂದ 50 ವೈದ್ಯಕೀಯ ವಿದ್ಯಾರ್ಥಿ ಗಳಿಗೆ ಆರ್ಥಿಕ ನೆರವು ನೀಡುವುದರ ಜೊತೆಗೆ ನೀಟ್ ಪರೀಕ್ಷೆಗೆ ಅಗತ್ಯವಾದ ತರಬೇತಿಗೆ ನೆರವು ನೀಡುವುದಾಗಿ ತಿಳಿಸಿದರು.
ಕಾಳಿದಾಸ ಹೆಲ್ತ್ ಅಂಡ್ ಎಜುಕೇಷನ್ ಟ್ರಸ್ಟ್ ಬೆಂಗಳೂರಿನಲ್ಲಿ ಇಂದು ಆಯೋಜಿಸಿದ್ದ ಕುರುಬ ಸಮಾಜದ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣಾ ಸಮಾರಂಭದಲ್ಲಿ ಸಚಿವರು ಪಾಲ್ಗೊಂಡು ಮಾತನಾಡಿದರು.
ಅನೇಕ ವಿದ್ಯಾರ್ಥಿಗಳು ಪ್ರತಿಭಾವಂತರಾಗಿದ್ದರೂ ಆರ್ಥಿಕ ತೊಂದರೆಯಿಂದ ಉನ್ನತ ಶಿಕ್ಷಣ ಪಡೆಯಲಾಗುತ್ತಿಲ್ಲ.ಹಾಗಾಗಿ,ಎಂಟಿಬಿ ಅನಂತ ಉನ್ನತಿ ಎಜುಕೇಷನ್ ಟ್ರಸ್ಟ್ ನಿಂದ ಈ ಬಾರಿ 24 ವಿದ್ಯಾರ್ಥಿಗಳಿಗೆ ತಲಾ 60 ಸಾವಿರ ರೂಪಾಯಿ ಆರ್ಥಿಕ ನೆರವು ನೀಡಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ತಲಾ 50 ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವುದಾಗಿ ಸಚಿವ ಎಂಟಿಬಿ ನಾಗರಾಜು ಪ್ರಕಟಿಸಿದರು.
ಕುರುಬ ಸಮಾಜದ ಹೆಚ್ಚು ಮಂದಿ ವೈದ್ಯಕೀಯ ಶಿಕ್ಷಣ ಪಡೆಯುವಂತಾಗಬೇಕು.ಅದಕ್ಕಾಗಿ ನೀಟ್ ಪರೀಕ್ಷೆಗಾಗಿ ತರಬೇತಿ ಕೇಂದ್ರ ಆರಂಭಿಸಬೇಕು.ಅದಕ್ಕೆ ಅಗತ್ಯವಾದ ನೆರವು ನೀಡುವೆ ಎಂದು ಸಚಿವರು ಭರವಸೆ ನೀಡಿ, ಜೀವನದಲ್ಲಿ ಗುರಿ ಇರಬೇಕು.ಜೊತೆಗೆ, ಅದೃಷ್ಟವೂ ಜೊತೆಗೂಡಿದರೆ ಅದ್ಬುತಗಳನ್ನು ಸಾಧಿಸಬಹುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸರ್ಕಾರಿ ಕೋಟಾದಲ್ಲಿ ವೈದ್ಯಕೀಯ ಸೀಟು ಪಡೆದ 160 ವಿದ್ಯಾರ್ಥಿಗಳನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಮಾಜಿ ಸಚಿವ ಎಚ್.ಎಂ.ರೇವಣ್ಣ,ಮಾಜಿ ಶಾಸಕ ಡಾ.ಹುಲಿ ನಾಯ್ಕ್,ಟ್ರಸ್ಟ್ ನ ಸಂಸ್ಥಾಪಕ ಟ್ಟಸ್ಟಿ ಡಾ.ವಿಜಯಲಕ್ಷೀ ಪರಮೇಶ್ ಭಾಗವಹಿಸಿದ್ದರು.