Advertisement

ಎಚ್‌ಐವಿ ಸೋಂಕಿತ ಮಕ್ಕಳಿಗೆ ಆರ್ಥಿಕ ನೆರವು

12:48 AM Dec 25, 2019 | Team Udayavani |

ಬೆಂಗಳೂರು: ನಗರದ ಬಿಬಿಎಂಪಿಯ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಎಚ್‌ಐವಿ ಸೋಂಕಿತ ಮಕ್ಕಳಿಗೆ ಆರ್ಥಿಕ ನೆರವು ನೀಡಲು ಪಾಲಿಕೆ ಮುಂದಾಗಿದೆ. ಇದೇ ಮೊದಲ ಬಾರಿಗೆ ಪಾಲಿಕೆ ಅಧಿಕಾರಿಗಳು ಇಂತಹ ಯೋಜನೆ ರೂಪಿಸಿದ್ದಾರೆ. ಬಿಬಿಎಂಪಿಯ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಎಚ್‌ಐವಿ ಸೋಂಕಿತ ಮಕ್ಕಳಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ 2018-19ನೇ ಸಾಲಿನ ಪಾಲಿಕೆಯ ಬಜೆಟ್‌ನಲ್ಲಿ 25ಲಕ್ಷ ರೂ. ಮೀಸಲಿಡಲಾಗಿತ್ತು. ಇದನ್ನು 2019-20ನೇ ಸಾಲಿನ ಬಜೆಟ್‌ನಲ್ಲಿ ಪರಿಷ್ಕರಿಸಿ ಮುಂದುವರಿಸಲಾಗುತ್ತಿದೆ.

Advertisement

ಬಜೆಟ್‌ನಲ್ಲಿ ಮೀಸಲಿರಿಸಲಾಗಿದ್ದ ಅನುದಾನವನ್ನು ಎಚ್‌ಐವಿ ಸೋಂಕಿತ ಮಕ್ಕಳು ಹಾಗೂ ಅವರ ಪೋಷಕರಿಗೆ ಬಸ್‌ಪಾಸ್‌ ನೀಡಲು ಈ ಮೊದಲು ಬಿಬಿಎಂಪಿಯ ಅಧಿಕಾರಿಗಳು ಯೋಜನೆ ರೂಪಿಸಿಕೊಂಡಿದ್ದರು. ಆದರೆ, ಈ ಯೋಜನೆಯಡಿ ನೀಡುವ ಪಾಸ್‌ ಬಳಸುವುದರಿಂದ ಮಕ್ಕಳಿಗೆ ಮುಜುಗರವಾಗಬಾರದು ಎನ್ನುವ ಉದ್ದೇಶದಿಂದ ಹಾಗೂ ಮಾನವೀಯ ದೃಷ್ಟಿಯಿಂದ ಮಕ್ಕಳ ಖಾತೆಗೆ ಹಣ ಜಮೆ ಮಾಡಲು ಪಾಲಿಕೆಯ ಅಧಿಕಾರಿಗಳು ಮುಂದಾಗಿದ್ದಾರೆ.

ಯೋಜನೆ ವಿಳಂಬಕ್ಕೆ ಮಾಹಿತಿ ಸಂಗ್ರಹವೂ ಕಾರಣ: ಉದ್ದೇಶಿತ ಯೋಜನೆಯ ಅನುಷ್ಠಾನಕ್ಕೆ ತಡವಾಗು ವುದರ ಹಿಂದೆ ಮಾಹಿತಿ ಸಂಗ್ರಹಕ್ಕೆ ಹೆಚ್ಚು ಕಾಲಾವಕಾಶ ಬೇಕಾಗಿದ್ದೂ ಕಾರಣ ಎಂದು ಬಿಬಿಎಂಪಿಯ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ. ಅರ್ಹ ಮಕ್ಕಳನ್ನು ಗುರುತಿಸಿ ಅವರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಬಿಬಿಎಂಪಿಯ ಅಧಿಕಾರಿಗಳು ಕರ್ನಾಟಕ ರಾಜ್ಯ ಏಡ್ಸ್‌ ಪ್ರಿವೆನ್‌ಷನ್‌ ಸಂಸ್ಥೆಯ ನೆರವು ಪಡೆದುಕೊಳ್ಳಲಾಗಿದೆ.

ಬಿಬಿಎಂಪಿಯ ಶಾಲಾ-ಕಾಲೇಜುಗಳಲ್ಲಿ 535 ಮಕ್ಕಳು ಎಚ್‌ಐವಿ ಸೋಂಕಿತರಿದ್ದಾರೆ ಎಂದು ಏಡ್ಸ್‌ ಪ್ರಿವೆನ್‌ಷನ್‌ ಸಂಸ್ಥೆಯ ಅಧಿಕಾರಿಗಳು ಬಿಬಿಎಂಪಿಗೆ ಮಾಹಿತಿ ನೀಡಿದ್ದು, ಈ ಮಕ್ಕಳಿಗೆ ವಾರ್ಷಿಕವಾಗಿ ತಲಾ 2,600 ರೂ. ನೀಡಲು ಸಿದ್ಧತೆ ನಡೆಸಿ ಕೊಳ್ಳಲಾಗುತ್ತಿದೆ. ಅಂಕಿ-ಅಂಶ ಸಿಗುವುದು ತಡವಾದ ಹಿನ್ನೆಲೆಯಲ್ಲಿ ಯೋಜನೆ ಅನುಷ್ಠಾನ ವಿಳಂಬ ವಾಗಿದೆ. ಅಲ್ಲದೆ, ಶೈಕ್ಷಣಿಕ ವರ್ಷ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಹಣ ಜಮೆ ಮಾಡಲು ನಿರ್ಧರಿಸಲಾಗಿದೆ.

ಪೌಷ್ಟಿಕಾಂಶ ನೀಡಲು ಬೇಡಿಕೆ: ಬಿಬಿಎಂಪಿಯ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಹಾಗೂ ಎಚ್‌ಐವಿ ಸೇರಿದಂತೆ ಗಂಭೀರವಾದ ಕಾಯಿಲೆಗಳಿಂದ ಬಳಲುತ್ತಿರುವ ಮಕ್ಕಳಿಗೆ ಪೌಷ್ಟಿಕಾಂಶ ಆಹಾರ ನೀಡಬೇಕು ಎನ್ನುವ ಬೇಡಿಕೆಗಳೂ ಕೇಳಿಬಂದಿವೆ. ಆರ್ಥಿಕವಾಗಿ ಶಕ್ತರಲ್ಲದ ಮಕ್ಕಳೇ ಪಾಲಿಕೆಯ ಶಾಲಾ- ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಅವರಿಗೆ ಪೌಷ್ಟಿಕಾಂಶದ ಆಹಾರ ನೀಡಿದರೆ ಸಹಾಯವಾಗಲಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.

Advertisement

ಹೆಣ್ಣು ಮಕ್ಕಳ ಆರೋಗ್ಯಕ್ಕೂ ಆದ್ಯತೆ: ಬಿಬಿಎಂಪಿ ಶಾಲಾ-ಕಾಲೇಜುಗಳಲ್ಲಿ ಬಡ, ಮಧ್ಯಮ ವರ್ಗದ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಓದುತ್ತಿದ್ದಾರೆ. ಬಿಬಿಎಂ ಪಿಯ ಶಾಲಾ- ಕಾಲೇಜುಗಳಲ್ಲಿ 11,134 ಹೆಣ್ಣು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಅವರ ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಬಿಬಿಎಂಪಿ ಮತ್ತಷ್ಟು ಯೋಜನೆಗಳನ್ನು ರೂಪಿಸುವ ಅವಶ್ಯಕತೆಯಿದೆ.

ನ್ಯಾಪ್ಕಿನ್‌ ದಹನ ಯಂತ್ರ ಅಳವಡಿಕೆಯಲ್ಲಿ ನಿರ್ಲಕ್ಷ್ಯ: ಹೆಣ್ಣು ಮಕ್ಕಳ ಶುಚಿತ್ವ ಮತ್ತು ಆರೋಗ್ಯ ಕಾಪಾಡುವ ಉದ್ದೇಶದಿಂದ ಪಾಲಿಕೆಯ ಶಾಲೆ, ಕಾಲೇಜುಗಳಲ್ಲಿ ಸ್ಯಾನಿಟರಿ ನ್ಯಾಪ್ಕಿನ್‌ ಇನ್ಸಿನೆರೇಟರ್‌(ನ್ಯಾಪ್ಕಿನ್‌ ದಹನ) ಯಂತ್ರ ಅಳವಡಿಸಲು ಬಿಬಿಎಂಪಿ ಮುಂದಾಗಿತ್ತು. ಇದಕ್ಕಾಗಿ ಪಾಲಿಕೆ 2019-20ನೇ ಸಾಲಿನ ಬಜೆಟ್‌ನಲ್ಲಿ 50 ಲಕ್ಷ ರೂ. ಅನುದಾನವನ್ನೂ ಮೀಸಲಿರಿಸಿತ್ತು. ಆದರೆ,ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಯೋಜನೆ ನನೆಗುದಿಗೆ ಬಿದ್ದಿದೆ.

ಈಗಾಗಲೇ ಅಳವಡಿಸಿರುವ ಯಂತ್ರ ಗಳು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡ ಳಿಯ ಮಾರ್ಗಸೂಚಿಯಂತೆ ಬದಲಾವಣೆ ಮಾಡಿಲ್ಲ. ಈಗ ಅಳವಡಿಸಲಾಗಿರುವ ಯಂತ್ರದಿಂದ ಡಯಾಕ್ಸಿನ್‌, ಕಾರ್ಬನ್‌ ಮೋನಾಕ್ಸೈಡ್‌, ನೈಟ್ರೋಜನ್‌ ಮತ್ತು ಸಲ್ಫರ್‌ ಡಯಾಕ್ಸೈಡ್‌ ರಾಸಾಯನಿಕಗಳು ಬಿಡುಗಡೆಯಾಗುತ್ತವೆ. ಇದು ಕ್ಯಾನ್ಸರ್‌ನಂತಹ ಗಂಭೀರ ರೋಗಕ್ಕೆ ಕಾರಣವಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸುತ್ತಲೇ ಇದ್ದಾರಾದರೂ, ಬಿಬಿಎಂಪಿಯ ಅಧಿಕಾರಿಗಳು ಇದಕ್ಕೆ ಪರಿಹಾರ ಕಂಡುಕೊಳ್ಳುವಲ್ಲಿ ವಿಫ‌ಲರಾಗಿದ್ದಾರೆ.

ಉಳಿಕೆ ಹಣದಲ್ಲಿ ವಿಶೇಷ ಯೋಜನೆ: ವಿಶೇಷ ಮಕ್ಕಳಿಗೆ ಮೀಸಲಿರಿಸಿದ್ದ 25 ಲಕ್ಷ ರೂ.ಗಳಲ್ಲಿ 535 ಮಕ್ಕಳಿಗೆ ತಲಾ 2,600 ರೂ. ನಂತೆ ಆರ್ಥಿಕ ನೆರವು ನೀಡಿದರೆ, 13.19 ಲಕ್ಷರೂ.ಆಗಲಿದೆ. ಮೀಸಲಿರಿಸಿದ ಹಣದಲ್ಲಿ 11.9 ಲಕ್ಷರೂ.ಉಳಿಯಲಿದೆ. ಇನ್ನೂ ಬಿಬಿಎಂಪಿಯ ಶಾಲೆಗಳಲ್ಲಿ ಎಚ್‌ಐವಿ ಸೋಂಕಿತ ಮಕ್ಕಳು ಇರುವ ಸಾಧ್ಯತೆಯಿದ್ದು, ಅವರನ್ನು ಗುರುತಿಸಿ ಉಳಿದ ಹಣವನ್ನು ಅವರಿಗೆ ನೀಡಲಾಗುವುದು. ಇಲ್ಲವೇ ಈಗ ಗುರುತಿಸಲಾಗಿರುವ ಮಕ್ಕಳಿಗೇ ವಿಶೇಷ ಯೋಜನೆ ರೂಪಿಸಿಕೊಳ್ಳಲಾಗುವುದು ಎಂದು ಬಿಬಿಎಂಪಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಿಬಿಎಂಪಿಯ ಶಾಲಾ ವಿವರ
ವಿಭಾಗ ಕಟ್ಟಡ ಮಕ್ಕಳ ಸಂಖ್ಯೆ
ನರ್ಸರಿ 91 4681
ಪ್ರೈಮರಿ ಶಾಲೆ 15 71
ಹೈಸ್ಕೂಲ್‌ 32 5405
ಪಿ.ಯು 15 4398
ಪ್ರಥಮ ದರ್ಜಿ ಕಾಲೇಜು 4 1104
ಪಿಜಿ 2 71
ಒಟ್ಟು 159 17,730

ವಿಶೇಷ ಮಕ್ಕಳಿಗೆ ಆರ್ಥಿಕವಾಗಿ ನೆರವು ನೀಡುವ ಉದ್ದೇಶದಿಂದ ಯೋಜನೆ ರೂಪಿಸಿಕೊಳ್ಳಲಾಗಿದೆ. ಬಿಬಿಎಂಪಿಯ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳ ಶಿಕ್ಷಣ ಮತ್ತು ಸುರಕ್ಷತೆಯ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಯೋಜನೆ ರೂಪಿಸಿಕೊಳ್ಳಲಾಗುವುದು.
-ನಾಗೇಂದ್ರ ನಾಯ್ಕ್, ಬಿಬಿಎಂಪಿ ಸಹಾಯಕ ಆಯುಕ್ತ (ಶಿಕ್ಷಣ)

* ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next