ಚನ್ನರಾಯಪಟ್ಟಣ: ಬಡ್ಡಿ ನೀಡುವುದು ಬೇಡ ಕೇವಲ ಅಸಲು ನೀಡಿ ಸಾಕು, ಅದು ಒಂದು ವಾರದಲ್ಲಿ ಸಾಲದ ಹಣ ಪೂರ್ತಿ ನೀಡಬೇಕು ಇದುವರೆಗೆ ನೀವು ನೀಡಬೇಕಿರುವ ಬಡ್ಡಿ ಸಂಪೂರ್ಣ ಮನ್ನಾ ಮಾಡುತ್ತೇವೆ ಎಂದು ಬಡ್ಡಿ ದಂಧೆ ಕೋರರು ಸಾಲ ವಸೂಲಿಗೆ ಮುಂದಾಗುತ್ತಿದ್ದಾರೆ.
ರಾಜ್ಯದಲ್ಲಿ ಮೈತ್ರಿ ಸರ್ಕಾರದ ಕಡೇ ದಿನ ಮುಖ್ಯ ಮಂತ್ರಿ ಕುಮಾರಸ್ವಾಮಿ ಋಣಮುಕ್ತ ಕಾಯ್ದೆ ಜಾರಿಗೆ ತಂದರು. ಕೊನೆ ದಿವಸ ಕಾಯ್ದೆ ಜಾರಿಯಾಗಿದ್ದರಿಂದ ಕಾನೂನು ಆಗುವುದು ಅನುಮಾನವಿತ್ತು. ಹಾಗಾಗಿ ಬಡ್ಡಿ ದಂಧೆ ಮಾಡುವವರು ಅಷ್ಟಾಗಿ ಭಯ ಪಟ್ಟಿರಲಿಲ್ಲ. ಆದರೆ ಋಣಮುಕ್ತ ಕಾಯ್ದೆ ಕಾನೂನು ಜಾರಿಯಾಗ ಒಂದೆರಡು ದಿವಸದಲ್ಲಿ ಖಾಸಗಿ ಫೈನಾನ್ಸ್‌ಗಳು ನಿದ್ದೆ ಕೆಡಿಸಿದ್ದು ಸಾಲದ ಅಸಲು ಪಡೆಯಲು ಮುಂದಾಗುತ್ತಿವೆ.
ಬೀಗ್ರ ಮುದ್ರೆ ಗ್ಯಾರಂಟಿ: ಇನ್ನು ಆಭರಣ ಗಿರವಿ ಅಂಗಡಿ ಮಾಲೀಕರು ತಮ್ಮ ಹಣ ಕೈಬಿಟ್ಟು ಹೋಗುವುದಿಲ್ಲ ಸಾಲಗಾರನಿಗೆ ಒಡವೆ ಬೇಕೆಂದರೆ ಪಡೆದ ಸಾಲೆ ತೀರಿಸಿ ಆಭರಣ ಪಡೆಯುತ್ತಾನೆ ಎನ್ನುತ್ತಿದ್ದಾರೆ. ಆದರೂ ಅವರಲ್ಲಿ ಕೆಲವರಿಗೆ ಆತಂಕ ಮನೆ ಮಾಡಿದೆ. ಸಾಲಗಾರರು ಎಲ್ಲಿ ಉಪವಿಭಾಗಾಧಿಕಾರಿಗಳಿಗೆ ಮಾಹಿತಿ ನೀಡಿ ಅಂಗಡಿಗೆ ಬೀಗ ಮುದ್ರೆ ಹಾಕಿಸುತ್ತಾರೆ. ಹೀಗಾಗಿ ತರಾತುರಿಯಲ್ಲಿ ಅವರೆಲ್ಲರೂ ಸಾಲ ವಸೂಲಿಗೆ ಮುಂದಾಗುತ್ತಿದ್ದಾರೆ.
ಸಾಲಗಾರನ ಜೀವ ಹಿಂಡುತ್ತಿದ್ದಾರೆ: ಒಂದು ವೇಳೆ ಸರ್ಕಾರ ಸಾಲಗಾರರ ಹಣ ಪಾವತಿಸಿದರೆ ಅದರಲ್ಲಿ ಆದಾಯ ತೆರಿಗೆ ಮತ್ತಿತರ ತೆರಿಗೆಯನ್ನು ಮುರಿದುಕೊಳ್ಳುತ್ತಾರೆ. ಪೂರ್ತಿ ಹಣ ಕೈಗೆ ಸಿಗುವುದಿಲ್ಲ ಎಂಬ ಅರಿವಿದೆ. ಇಷ್ಟಾದರೆ ಪರವಾಗಿಲ್ಲ ಈ ಹಿಂದೆ ಮಾಡಿದ ವ್ಯವಹಾರಕ್ಕೆ ತೆರಿಗೆ ನೀಡಿಲ್ಲ ಎಂದು ತೆರಿಗೆ ಇಲಾಖೆ ಅಧಿಕಾರಿಗಳು ತಮ್ಮ ಹಿಂದೆ ಬಿದ್ದರೆ ತಮ್ಮ ಹೆಸರಿನಲ್ಲಿ ಇರುವ ಆಸ್ತಿ ಪಾಸ್ತಿಗೂ ಕುತ್ತು ಬರಬಹುದು ಎಂದ ಭಯದಿಂದ ಸಾಲಗಾರರು ಕೇವಲ ಸಾಲದ ಹಣ ನೀಡಿ ಎಂದು ಸಾಲಗಾರರ ಜೀವ ಹಿಂಡುತ್ತಿರುವ ಪ್ರಕರಣ ತಾಲೂಕಿನಲ್ಲಿ ಹೆಚ್ಚುತ್ತಿವೆ.
ಹಲವು ಫೈನಾನ್ಸ್ ಬಾಗಿಲು ಮುಚ್ಚುವ ಸಾಧ್ಯತೆ: ಕಾಯ್ದೆ ಅನುಸಾರ ಶೇ.16ಕ್ಕಿಂತ ಹೆಚ್ಚಿನ ಬಡ್ಡಿದರದಲ್ಲಿ ಸಾಲ ನೀಡುವಂತಿಲ್ಲ. ಇದಲ್ಲದೇ ಸಾಲ ನೀಡಲು ಪರವಾನಗಿ ಪಡೆದು ಕೊಂಡಿರಬೇಕು. ಇಂತಹ ನಿಯಮಗಳನ್ನು ಪಾಲಿಸಿ ಕೊಂಡಿರುವ ಖಾಸಗಿ ಪೈನಾನ್ಸಿಗಳಿಗೆ ಮಾತ್ರ ಸಾಲ ಮನ್ನಾದ ಲಾಭ ದೊರೆಯಲಿದೆ. ಉಳಿದವರ ಹಣ ತಿರುಪತಿ ಹುಂಡಿ ಸೇರುವುದು ಗ್ಯಾರಂಟಿ. ಇಷ್ಟೇ ಅಲ್ಲ ಪ್ರಕರಣ ಹೊರಬಂದರೆ ಶಿಕ್ಷೆ ತಪ್ಪಿದಲ್ಲ. ಇದರಿಂದ ಅನಧಿಕೃತ ಲೇವಾದೇವಿದಾರರು ತಮ್ಮ ಸಾಲವನ್ನು ವಸೂಲಿ ಮಾಡಿಕೊಂಡು ಫೈನಾನ್ಸ್ ಬಾಗಿಲು ಮುಚ್ಚುವ ಅವಸರದಲ್ಲಿ ಇದ್ದಾರೆ.
ಐಟಿ ಇಲಾಖೆ ಭಯ: ಪ್ರತಿಯೊಂದು ಪೈಸೆಗೂ ತೆರಿಗೆ ಕೇಳುವ ಐಟಿ ಇಲಾಖೆ ಭಯದಿಂದ ಬಹುತೇಕ ಖಾಸಗಿ ಫೈನಾನ್ಸಿಯರ್‌ಗಳು ಋಣಮುಕ್ತ ಕಾಯ್ದೆಯ ಪರಿಹಾರಕ್ಕೆ ಕಾಯದೇ ಸಾಲಗಾರರ ಬಳಿಯೇ ಸಾಧ್ಯವಾದಷ್ಟು ಹಣ ವಸೂಲಿ ಮಾಡಲು ಮುಂದಾಗುತ್ತಿದ್ದಾರೆ. ಆದರೆ ಕೆಲ ಸಾಲಗಾರರು ಸಕಾರಾತ್ಮಕವಾಗಿ ಬಡ್ಡಿದಾರರೊಂದಿಗೆ ಸ್ಪಂದಿಸುತ್ತಿದ್ದರೂ ಕೆಲವರು ಬಡ್ಡಿದಂಧೆಕೋರರಿಗೆ ತಕ್ಕ ಪಾಠ ಕಲಿಸಿಯೇ ತೀರುತ್ತೇನೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
ಲೆಕ್ಕಾಚಾರ ಹೇಗೆ: ಫೈನಾನ್ಸ್‌ನಿಂದ ಒಂದು ಲಕ್ಷ ರೂ. ನಂತರ 10 ಮಂದಿಗೆ ಸಾಲ ನೀಡಿದರೆ ಒಂದು 10 ಲಕ್ಷ ರೂ. ವ್ಯವಹಾರ ನಡೆಯುತ್ತದೆ. ಋಣ ಮುಕ್ತ ಕಾಯ್ದೆಯಡಿ ಇದರ ಒಟ್ಟು ಲೆಕ್ಕವನ್ನು ಸರ್ಕಾರ ಪಡೆದರೆ ಅಂದಾಜು ಎರಡು ಲಕ್ಷ ರೂ. ತೆರಿಗೆ ಕಟ್ಟಬೇಕು. ಇಷ್ಟು ಹಣ ಕಳೆದು ಕೇವಲ ಎಂಟು ಲಕ್ಷ ರೂ. ಮಾತ್ರವೇ ಫೈನಾನ್ಸ್‌ಗೆ ಸಿಗಲಿದೆ. ಹೀಗಾಗಿ ಸಾಲಗಾರರಿಂದಲೇ ಹಣ ವಸೂಲಿ ಮಾಡಿ ಹಲವು ರಗಳೆಯಿಂದ ಪಾರಾಗಲು ಮಾಸ್ಟರ್ ಪ್ಲಾನ್ ಮಾಡುತ್ತಿದ್ದಾರೆ.
● ಶಾಮಸುಂದರ್ ಕೆ.ಅಣ್ಣೇನಹಳ್ಳಿ