ಹೊಸದಿಲ್ಲಿ : ಸ್ವಿಸ್ ಬ್ಯಾಂಕ್‌ಗಳಲ್ಲಿ ಭಾರತೀಯರು ಇಡುವ ಹಣ 2017ರಲ್ಲಿ ಶೇ.50ರಷ್ಟು ಹೆಚ್ಚಿದೆ ಎಂಬ ವಿಷಯ ಬಹಿರಂಗವಾದುದನ್ನು ಅನುಸರಿಸಿ ಕೇಂದ್ರ ಹಣಕಾಸು ಸಚಿವ ಪಿಯೂಷ್ ಗೋಯಲ್ ಅವರು “ಸ್ವಿಸ್ ಖಾತೆಗಳಲ್ಲಿ ಭಾರತೀಯರು ಇಟ್ಟಿರುವ ಹಣವೆಲ್ಲ ಕಾಳಧನ ಎಂದು ಭಾವಿಸುವುದು ತಪ್ಪು” ಎಂದು ಹೇಳಿದ್ದಾರೆ.
ಮುಂದಿನ ವರ್ಷದೊಳಗೆ ಭಾರತೀಯರ ಸ್ವಿಸ್ ಬ್ಯಾಂಕ್ ಖಾತೆಗಳ ವಿವರಗಳೆಲ್ಲವೂ ಸರಕಾರಕ್ಕೆ ಸಿಗಲಿದೆ ಎಂದ ಅವರು ಕಾನೂನು ಬಾಹಿರವಾಗಿ ಸ್ವಿಸ್ ಬ್ಯಾಂಕ್ ಖಾತೆಗಳಲ್ಲಿ ಭಾರತೀಯರ ಹಣ ಇರುವುದು ಪತ್ತೆಯಾದಲ್ಲಿ ಕಠಿನ ಕ್ರಮ ತೆಗೆದುಕೊಳ್ಳಲಾಗುವುದು ಎಂಬ ಎಚ್ಚರಿಕೆಯನ್ನು ನೀಡಿದರು.
ಭಾರತ ಮತ್ತು ಸ್ವಿಟ್ಸರ್ಲಂಡ್ ನಡುವಿನ ಒಪ್ಪಂದದ ಪ್ರಕಾರ 2018ರ ಜನವರಿ 1ರಿಂದ ಡಿಸೆಂಬರ್ 31ರ ವರೆಗಿನ ಅವಧಿಯ ಭಾರತೀಯರ ಸ್ವಿಸ್ ಬ್ಯಾಂಕ್ ಖಾತೆಯ ವಿವರಗಳು ಸರಕಾರಕ್ಕೆ ಮುಂದಿನ ವರ್ಷ ಸಿಗಲಿದೆ ಎಂದು ಹೇಳಿದರು.
2017ರಲ್ಲಿ ಸ್ವಿಸ್ ಬ್ಯಾಂಕ್ ಖಾತೆಗಳಲ್ಲಿನ ಭಾರತೀಯರ ಹಣವು ಶೇ.50ರಷ್ಟು ಹೆಚ್ಚಿ 7,000 ಕೋಟಿ ರೂ. ತಲುಪಿರುವುದು ವರದಿಯಾಗಿರುವ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳಿಗೆ ಈಗ ಭಾರತೀಯರ ವಿದೇಶಿ ಕಪ್ಪು ಹಣದ ಬಗ್ಗೆ ಧ್ವನಿ ಏರಿಸುವ ಅವಕಾಶ ಒದಗಿದಂತಾಗಿದೆ.
ಕಳೆದ ಮೂರು ವರ್ಷಗಳಲ್ಲಿ ಸ್ವಿಸ್ ಬ್ಯಾಂಕ್ ಖಾತೆಗಳಲ್ಲಿನ ಭಾರತೀಯರ ಹಣದ ಪ್ರಮಾಣ ಕಡಿಮೆಯಾಗುತ್ತಾ ಬಂದಿತ್ತು.