ಫ್ರಾಂಕ್‌ಫರ್ಟ್: ಒಂದೆಡೆ ಕೋವಿಡ್ 19 ವೈರಸ್ ಮಹಾಮಾರಿ ಸೋಂಕಿತರನ್ನು ಆಪೋಶನ ತೆಗೆದುಕೊಳ್ಳುತ್ತಿದ್ದರೆ, ಇನ್ನೊಂದೆಡೆ ಕೋವಿಡ್ 19 ವಿಶ್ವಾದ್ಯಂತ ಉಂಟುಮಾಡಿರುವ ತಲ್ಲಣ ಬೇರೆಯದ್ದೇ ರೀತಿಯದ್ದಾಗಿದೆ. ಎಲ್ಲಾ ರಾಷ್ಟ್ರಗಳ ಆರ್ಥಿಕತೆ ನೆಲಕಚ್ಚಿದೆ. ಜನರು ನಿರಿದ್ಯೋಗಿಗಳಾಗಿದ್ದಾರೆ. ಉತ್ಪಾದನೆ ಹಳ್ಳಹಿಡಿದಿದೆ.
ಇತ್ತ ಕೋವಿಡ್ 19 ವೈರಸ್ ಕೊಟ್ಟಿರುವ ಹೊಡೆತಕ್ಕೆ ಕಂಗೆಟ್ಟಿರುವ ಜರ್ಮನಿಯ ಕಥೆಯೂ ಬೇರೆಯಾಗಿಲ್ಲ. ಇಲ್ಲಿನ ಹೆಸ್ಸೆ ಪ್ರಾಂತ್ಯದ ಹಣಕಾಸು ರಾಜ್ಯ ಸಚಿವ ಥಾಮಸ್ ಶೆಫರ್ ಅವರು ಈ ವೈರಸ್ ತಂದೊಡ್ಡಿರುವ ಆರ್ಥಿಕ ಕುಸಿತವನ್ನು ಹೇಗೆ ನಿಭಾಯಿಸುವುದು ಎಂಬ ಚಿಂತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸೋಂಕು ವಿಶ್ವದಾದ್ಯಂತ ಹರಡುತ್ತಿದ್ದು, ಅದನ್ನು ತಡೆಯಲು ಜಗತ್ತಿನ ಬಹುತೇಕ ರಾಷ್ಟ್ರಗಳು ಲಾಕ್ ಡೌನ್ ಘೋಷಿಸಿಕೊಂಡಿವೆ. ಜರ್ಮನಿಯಲ್ಲೂ ಲಾಕ್ ಡೌನ್ ಜಾರಿಯಲ್ಲಿದ್ದು, ದೇಶದ ವಿತ್ತೀಯ ಬೇಳವಣಿಗೆಗೆ ಇದು ಅಪಾಯಕಾರಿಯಾಗಿ ಪರಿಣಮಿಸಿದೆ. ಇದನ್ನು ಪರಿಹರಿಸುವ ಮಾರ್ಗ ಕಾಣದೇ ಥಾಮಸ್ ಅವರು ನೊಂದು ಆತ್ಮಹತ್ಯೆಗೆ ಶರಣಾಗಿರಬಹುದು ಎಂಬ ಪ್ರಾಥಮಿಕ ಮಾಹಿತಿ ಇದೀಗ ಲಭ್ಯವಾಗಿದೆ.
ಈ ದುಃಖಕರ ವಿಷಯವನ್ನು ಪ್ರಧಾನಿ ವೋಲ್ಕರ್ ಬೌಫಿಯರ್ ತಿಳಿಸಿದ್ದಾರೆ. ’54 ವರ್ಷದ ಥಾಮಸ್ ಶೆಫರ್ ರೈಲ್ವೆ ಹಳಿ ಬಳಿ ಶನಿವಾರ ಶವವಾಗಿ ಪತ್ತೆಯಾಗಿದ್ದಾರೆ. ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ವೈಸ್ಬಾಡೆನ್ ಪ್ರಾಸಿಕ್ಯೂಷನ್ ಹೇಳಿದೆ.
10 ವರ್ಷಗಳ ಕಾಲ ಹಣಕಾಸು ಮುಖ್ಯಸ್ಥರಾಗಿದ್ದ ಥಾಮಸ್ ಶೆಫರ್, ಸಾಂಕ್ರಾಮಿಕ ರೋಗದ ಆರ್ಥಿಕ ಪರಿಣಾಮವನ್ನು ಎದುರಿಸಲು ಕಂಪನಿಗಳು ಮತ್ತು ಕಾರ್ಮಿಕರಿಗೆ ಸಹಾಯ ಮಾಡಲು ಹಗಲು ರಾತ್ರಿ ಕೆಲಸ ಮಾಡುತ್ತಿದ್ದರು. ದೇಶದ ಭವಿಷ್ಯದ ಕುರಿತು ಅವರು ತೀವ್ರವಾಗಿ ಚಿಂತಿತರಾಗಿದ್ದರು. ಈ ಕಷ್ಟದ ಸಮಯದಲ್ಲಿ ನಮಗೆ ಅವರಂತಹ ಒಳ್ಳೆಯ ವಿತ್ತ ಸಚಿವರ ಅವಶ್ಯಕತೆ ಇತ್ತು ಎಂದು ಪ್ರಧಾನಿ ಬೌಫಿಯರ್ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ. ಹೆಸ್ಸೆಯ ಪ್ರಧಾನಿ ಬೌಫಿಯರ್ ಅವರ ಉತ್ತರಾಧಿಕಾರಿಯಾಗಿ ಥಾಮಸ್ ಶೆಫರ್ ಅವರು ನೇಮಕಗೊಳ್ಳುವುದು ಬಹುತೇಕ ಖಚಿತವಾಗಿತ್ತು.