Advertisement
ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಬಿಡುಗಡೆ ಮಾಡಿದ ಇತ್ತೀಚೆಗಿನ ಜಾಗತಿಕ ಆರ್ಥಿಕತೆಯ ವಿಸ್ತೃತ ವರದಿಯ ಪ್ರಕಾರ ವಿಶ್ವದ ಆರ್ಥಿಕತೆಯು ದಶಕದಲ್ಲಿಯೇ ಅತೀ ಕಡಿಮೆ ಬೆಳವಣಿಗೆಯನ್ನು ಕಾಣಲಿದೆಯೆಂಬ ಮುನ್ಸೂಚನೆಯನ್ನು ನೀಡಿದೆ. ಆದರೆ ಬೇರೆಲ್ಲ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದ ಹಣಕಾಸು ಸ್ಥಿತಿ ಉತ್ತಮ ರೀತಿಯಲ್ಲಿದೆ. ಜಾಗತಿಕ ಆರ್ಥಿಕತೆಯು ಚೇತರಿಕೆಯ ಹಾದಿಯಲ್ಲಿದ್ದರೂ ಕುಂಟುತ್ತಾ ಸಾಗುತ್ತಿದೆ ಎಂದು ಎಚ್ಚರಿಸಿದೆಯಲ್ಲದೆ ಮುಂದುವರಿದ ರಾಷ್ಟ್ರಗಳಲ್ಲಿನ ಬೆಳವಣಿಗೆಯ ನಿಧಾನಗತಿ ಸ್ಪಷ್ಟವಾಗಿರುವುದನ್ನು ಐಎಂಎಫ್ ವಿಶ್ಲೇಷಿಸಿದೆ. ಮುಂದುವರಿದ ಆರ್ಥಿಕತೆಗಳ ಶೇ. 2.6 ರ ನಿಧಾನಗತಿಯ ಬೆಳವಣಿಗೆಯು ಈ ವರ್ಷಕ್ಕೆ ಶೇ.1.5 ಕ್ಕೆ ಕುಸಿಯಲಿದ್ದು 2024 ರಲ್ಲಿ ಶೇ.1.4 ರಷ್ಟು ಇರಲಿದೆಯೆಂದು ವಿಶ್ಲೇಷಿಸಿದೆ. ಇದೆಲ್ಲದರ ನಡುವೆಯೂ ಭಾರತವು ವಿಶ್ವದ ಅನ್ಯ ದೇಶಗಳಿಗಿಂತ ಹೆಚ್ಚಿನ ಬೆಳವಣಿಗೆಯೊಂದಿಗೆ ಅಗ್ರಸ್ಥಾನದಲ್ಲಿದೆಯಲ್ಲದೆ 2024ರ ಆರ್ಥಿಕ ವರ್ಷದಲ್ಲಿಯೂ ವೇಗವಾಗಿ ಬೆಳೆಯುತ್ತಿದ್ದು ವಿಶ್ವದಲ್ಲಿಯೇ ಮುಂಚೂಣಿಯಲ್ಲಿದೆ ಮತ್ತು ಆರ್ಥಿಕತೆಯು ಶೇ. 6.3 ರಷ್ಟು ಆಗಲಿದೆ ಎಂದು ಐಎಂಎಫ್ ಹೇಳಿದೆ. ಅದಲ್ಲದೆ ವಿಶ್ವದ ಆರ್ಥಿಕತೆಯಲ್ಲಿ ಶೇ. 7.3ರ ಪಾಲನ್ನು ಹೊಂದಿರುವ ಭಾರತವು ಉದಯೋನ್ಮುಖ ಮತ್ತು ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಳಲ್ಲಿ ಶೇ. 12.5ರ ಪಾಲನ್ನು ಹೊಂದಿದೆ ಮತ್ತು ವಿಶ್ವದ ಒಟ್ಟಾರೆ ರಫ್ತಿನಲ್ಲಿ ಶೇ.2.5 ರಷ್ಟು ಭಾರತದಿಂದಾಗುತ್ತಿದೆ.
Related Articles
Advertisement
ಇಸ್ರೇಲ್ ಮತ್ತು ಹಮಾಮ್ ಉಗ್ರರ ನಡುವಿನ ಯುದ್ಧ ಹೀಗೆಯೇ ಮುಂದುವರಿದರೆ ಭಾರತದ ಮಾರುಕಟ್ಟೆಯ ಮೇಲೆ ಇನ್ನಷ್ಟು ವ್ಯತಿರಿಕ್ತ ಪರಿಣಾಮ ಬೀರಿ, ವಿದೇಶೀ ಬಂಡವಾಳ ಹೂಡಿಕೆಯ ಒಳ ಹರಿವಿಗೆ ಗಣನೀಯ ಪ್ರಮಾಣದಲ್ಲಿ ಅಡ್ಡಿಯಾಗುತ್ತದೆ. ಜಾಗತಿಕ ಮಾರುಕಟ್ಟೆಯಲ್ಲಿ ಯಾವುದಾದರೊಂದು ಉತ್ಪನ್ನದ ವಿಷಯದಲ್ಲಿ ಸಮಸ್ಯೆಯಾಯಿತು ಎಂದಾದರೆ ಸರಣಿ ಪ್ರತಿಕ್ರಿಯೆಯಂತೆ ಅದು ಮಿಕ್ಕ ಮಗ್ಗಲುಗಳಿಗೂ ಚಾಚಿಕೊಳ್ಳುವುದು ಸರ್ವೆ ಸಾಮಾನ್ಯ ಬೆಳವಣಿಗೆ. ಅದರಲ್ಲೂ ವಾಣಿಜ್ಯ ಚಟುವಟಿಕೆ ಮತ್ತು ಸಾಗಾಣಿಕೆ ವಲಯದ ಜೀವನಾಡಿಯೇ ಆಗಿರುವ ಕಚ್ಚಾತೈಲ ಬೆಲೆ ಹೆಚ್ಚಿದರಂತೂ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಗಗನಕ್ಕೇರುತ್ತದೆ. ಇದರಿಂದಾಗಿ ದಿನಬಳಕೆಯ ವಸ್ತುಗಳು ಮತ್ತು ಬಹುತೇಕ ಎಲ್ಲ ಉತ್ಪನ್ನಗಳ ಬೆಲೆಯಲ್ಲೂ ಹೆಚ್ಚಳವಾಗುತ್ತದೆ. ಕಚ್ಚಾ ತೈಲದ ಬೆಲೆಯೇರಿಕೆಯು ಜಾಗತಿಕವಾಗಿ ಹಣದುಬ್ಬರಕ್ಕೆ ಕಾರಣವಾಗುವುದರಿಂದ ಮಧ್ಯಪ್ರಾಚ್ಯ ವಲಯದಲ್ಲಿ ಗಣನೀಯ ಪ್ರಮಾಣದಲ್ಲಿ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿರುವ ಭಾರತ, ಚೀನ, ಅಮೆರಿಕದಂತಹ ದೇಶಗಳಲ್ಲಿ ಆಮದು ಹಣದುಬ್ಬರವೂ ಅನಿವಾರ್ಯವಾಗುತ್ತದೆ. ಒಂದೊಮ್ಮೆ ಯಾದವೀ ಕಲಹವು ಭಾವನಾತ್ಮಕ ಕಾರಣಗಳಿಂದ ಸಮಾನ ಮನಸ್ಕ ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ಇದರ ಕಬಂಧ ಬಾಹುಗಳು ಚಾಚಿದರೆ ಜಗತ್ತಿನ ಮಿಕ್ಕ ರಾಷ್ಟ್ರಗಳಿಗೂ ಸಂಕಷ್ಟ ನಿರ್ವಿವಾದ. ಜಗತ್ತಿನ ಮೂರನೇ ಒಂದರಷ್ಟು ತೈಲ ಪೂರೈಕೆ ಈ ಭಾಗದಿಂದ ನಡೆಯುತ್ತದೆ. ಒಂದೊಮ್ಮೆ ತೈಲೋತ್ಪನ್ನ ರಾಷ್ಟ್ರ ಇರಾನ್ ಮತ್ತಿತರ ರಾಷ್ಟ್ರಗಳಿಗೆ ಯುದ್ಧ ವ್ಯಾಪಿಸಿದರೆ ಇಡೀ ಜಾಗತಿಕ ಆರ್ಥಿಕತೆಯ ಮೇಲೆ ಕರಿಛಾಯೆ ಮೂಡಲಿದೆ ಮತ್ತು ಜಾಗತಿಕವಾಗಿ ಹಣದುಬ್ಬರ ತಾರಕಕ್ಕೇರಲಿದೆ.
ಇಸ್ರೇಲ್ ಮತ್ತು ಹಮಾಸ್ ಉಗ್ರರ ಸಂಘರ್ಷವು ಮಧ್ಯಪ್ರಾಚ್ಯ ವಲಯದ ಮಿಕ್ಕ ದೇಶಗಳಿಗೂ ವ್ಯಾಪಿಸಿದಲ್ಲಿ ಷೇರು ಪೇಟೆಗಳ ಮೇಲೆ ಇನ್ನಷ್ಟು ನಕಾರಾತ್ಮಕ ಪರಿಣಾಮ ಬೀರಿ ಚಟುವಟಿಕೆಗಳಲ್ಲಿ ಅನಪೇಕ್ಷಿತ ಬೆಳವಣಿಗೆಯಾಗಬಹುದು. ಭಾರತದ ಮಾಹಿತಿ ತಂತ್ರಜ್ಞಾನ ಕಂಪೆನಿಗಳು ಈಗಾಗಲೇ ತಮ್ಮ ವರಮಾನದ ಮುನ್ನೋಟವನ್ನು ತಗ್ಗಿಸಿರುವುದು ಈ ನಿಟ್ಟಿನಲ್ಲಿ ಸಾಕಷ್ಟು ಸೂಚ್ಯರ್ಥವನ್ನು ನೀಡುತ್ತದೆ. ಎಲ್ಲ ಆಗುಹೋಗುಗಳ ನಡುವೆ ಜಾಗತಿಕವಾಗಿ ಗುರಿಗಿಂತ ಹೆಚ್ಚಿನ ಮಟ್ಟದ ಹಣದುಬ್ಬರ, ಬಿಗಿಯಾದ ಸಾಲದ ಪರಿಸ್ಥಿತಿಗಳು, ನಿರುದ್ಯೋಗ, ಇಸ್ರೇಲ್-ಹಮಾಸ್ ಸಂಘರ್ಷದಿಂದ ಜಾಗತಿಕ ಪೂರೈಕೆ ಸರಪಳಿ ಮೇಲೆ ಬೀಳಲಿರುವ ಪರಿಣಾಮ, ಭೌಗೋಳಿಕ, ರಾಜಕೀಯ ಆಘಾತಗಳು, ಹವಾಮಾನ ವೈಪರೀತ್ಯ ಮತ್ತಿತರ ಮಹತ್ತರ ಸವಾಲುಗಳು ಇಡೀ ಜಗತ್ತನ್ನು ಕಾಡುತ್ತಿವೆ. ಇವೆಲ್ಲವನ್ನೂ ಮೆಟ್ಟಿನಿಲ್ಲಲು ಭಾರತ ಸಹಿತ ವಿಶ್ವ ರಾಷ್ಟ್ರಗಳು ಸಫಲವಾದಲ್ಲಿ ಆರ್ಥಿಕತೆ ಮತ್ತಷ್ಟು ಪ್ರಗತಿಯನ್ನು ಕಾಣಲು ಸಾಧ್ಯ.
ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ