ಕಲಬುರಗಿ: ಕಳೆದ ಎರಡು ವಾರದಿಂದ ಮುನಿಸಿಕೊಂಡಿದ್ದ ಮುಂಗಾರು ಮಳೆ ಆರಂಭಗೊಂಡಿದೆ. ಜೂನ್ 7 ರಂದೇ ಆರಂಭವಾಗಬೇಕಾಗಿದ್ದ ಮುಂಗಾರು ಎರಡು ವಾರ ತಡವಾಗಿತ್ತು. ಇದರಿಂದಾಗಿ ಜಿಲ್ಲೆಯಲ್ಲಿ ಬರಗಾಲದ ಛಾಯೆ ಮೂಡಿತ್ತು.
ವಾಣಿಜ್ಯ ಬೆಳೆಗಳಾದ ಕಬ್ಬು, ಬಾಳೆ ತೋಟಗಾರಿಕೆ ಬೆಳೆಗಳಾದ ಟಮೊಟೊ, ಬದನೆಕಾಯಿ, ಮೆಣಸಿನಕಾಯಿ ಸೇರಿದಂತೆ ಇತರೆ ಎಲ್ಲ ಕಾಯಿಪಲ್ಲೆ ಬೆಲೆ ಮುಗಿಲು ಮುಟ್ಟಿತ್ತು. ಮಾರುಕಟ್ಟೆಯಲ್ಲಿ ಬೆಲೆ ಕೂಡ ಹೆಚ್ಚಾಗಿತ್ತು. ಇದರಿಂದಾಗಿ ರೈತಾಪಿ ಸೇರಿದಂತೆ ಸಾಮಾನ್ಯ ವರ್ಗದ ಜನರು ಕೂಡ ತಲ್ಲಣಗೊಂಡಿದ್ದರು.
ಆದರೆ, ಶನಿವಾರ ಸಂಜೆಯಿಂದಲೇ ಮುಂಗಾರಿನ ಆರಂಭದ ಲಕ್ಷಣಗಳು ಕಂಡುಬಂದಿದ್ದವು. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಶನಿವಾರ ಮಳೆಯಾಗಿರಲಿಲ್ಲ.
ಆದರೆ ಜಿಲ್ಲೆಯ ಸೇಡಂ ಚಿಂಚೋಳಿ, ಚಿತ್ತಾಪುರ ತಾಲೂಕಿನಲ್ಲಿ ಅಲ್ಲಲ್ಲಿ ಸಾಧಾರಣ ಮಳೆಯಾಗಿತ್ತು. ಆಳಂದ್ ಮತ್ತು ಅಫಜಲಪುರದಲ್ಲೂ ಮಳೆ ಮುಖ ತೋರಿಸಿತ್ತು. ಆದರೆ, ಭಾನುವಾರ ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣ ರೈತಾಪಿ ವರ್ಗವು ಸೇರಿದಂತೆ ಸಾಮಾನ್ಯ ಜನರಲ್ಲಿ ಕುರುಕು ಮೂಡಿಸಿತು. ಇದರಿಂದಾಗಿ ಮಧ್ಯಾನ ಮಳೆ ಆರಂಭವಾಗಿದೆ. ಕಳೆದ ಹಲವಾರು ವಾರಗಳಿಂದ ಕಾದು ಕೆಂಡದಂತಾಗಿದ್ದ ಕಲಬುರ್ಗಿ ಈಗ ತಂಪು ವಾತಾವರಣ ಮೂಡಿದೆ.
ಕಲಬುರಗಿ ಸೇರಿದಂತೆ ಜಿಲ್ಲೆಯ ಹಲವು ಕಡೆಗಳಲ್ಲಿ ಸಾಧಾರಣ ಗುಡುಗು ಸಹಿತ ಮಳೆಯಾಗುತ್ತಿದೆ.