ಧಾರವಾಡ: ಕಳೆದ ಒಂದು ವಾರದಿಂದ ಕವಲಗೇರಿ ಗ್ರಾಮದ ವ್ಯಾಪ್ತಿಯಲ್ಲಿಯೇ ತೀವ್ರ ಹಾವಳಿ ಎಬ್ಬಿಸಿದ್ದ ಚಿರತೆ ಕೊನೆಗೂ ಬೋನಿಗೆ ಬಿದ್ದಿದೆ.
ಅರಣ್ಯ ಇಲಾಖೆ ಸಿಬ್ಬಂದಿ ಸತತ ಕಾರ್ಯಾಚರಣೆಗೆ ರವಿವಾರ ಬೆಳಗಿನ ಜಾವ ಕವಲಗೆರೆಯ ಶಿವಪ್ಪ ಉಪ್ಪಾರ ಎಂಬುವವರ ಕಬ್ಬಿನ ಗದ್ದೆಯಲ್ಲಿ ಚಿರತೆಯನ್ನು ಬೋನಿಗೆ ಹಾಕುವಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಮೊದಲು ಕವಲಗೆರೆಯಲ್ಲಿ ಕಾಣಿಸಿಕೊಂಡ ಚಿರತೆ ನಂತರ ಗೋವನಕೊಪ್ಪ ಗ್ರಾಮಕ್ಕೆ ಬಂದಿತು. ಕೊನೆಗೆ ಚಿರತೆ ಮತ್ತೆ ಕವಲಗೆರೆ ಗ್ರಾಮದ ಹೊಲಗಳಲ್ಲಿ ಓಡಾಟ ಮಾಡಿದ್ದರ ಹೆಜ್ಜೆ ಗುರುತು ಪತ್ತೆಯಾಗಿತ್ತು. ಇದರಿಂದ ಸುತ್ತಲಿನ ಗ್ರಾಮಸ್ಥರು ಮತ್ತು ಹೊಲಗಳಲ್ಲಿ ಕೆಲಸ ಮಾಡುವ ರೈತರು ತೀವ್ರ ಆತಂಕ ಎದುರಿಸುವಂತಾಗಿತ್ತು.
ಇದನ್ನೂ ಓದಿ:ನಟರಾಜ ವಿಗ್ರಹ ಸೇರಿದಂತೆ 157 ಪುರಾತನ ಕಲಾಕೃತಿಗಳನ್ನು ಭಾರತಕ್ಕೆ ಹಸ್ತಾಂತರಿಸಿದ ಅಮೆರಿಕ
ಚಿರತೆ ಓಡಾಡಿದ ಗ್ರಾಮಗಳಿಗೆ ಡಿಸಿ ನಿತೇಶ ಪಾಟೀಲ ಕೂಡ ಭೇಟಿ ನೀಡಿ ಕಾರ್ಯಾಚರಣೆ ವೀಕ್ಷಿಸಿ, ತುರ್ತು ಕ್ರಮಕ್ಕೆ ಸೂಚಿಸಿದ್ದರು. ಗುರುವಾರ ಬೆಳಿಗ್ಗೆಯಿಂದಲೇ ಮತ್ತೆ ಕಾರ್ಯಾಚರಣೆಗೆ ಇಳಿದ ಸಿಬ್ಬಂದಿಗಳ ತಂಡವು, ಡ್ರೋಣ್ ಮೂಲಕ ಚಿರತೆಯ ಪತ್ತೆ ಮುಂದಾಗಿತು. ಡ್ರೋಣ್ ಕ್ಯಾಮರಾದಲ್ಲಿಯೂ ಚಿರತೆಯ ಸುಳಿವು ಸಿಕ್ಕಿರಲಿಲ್ಲ. ಆದರೆ ಕೆಲವೆಡೆ ಚಿರತೆಯ ಹೆಜ್ಜೆ ಗುರುತು ಸಿಕ್ಕಿದ್ದು, ಚಿರತೆಯ ಓಡಾಟದ ಮಾಹಿತಿ ಸಿಕ್ಕಿತ್ತು. ಇದಲ್ಲದೇ ಚಿರತೆಯ ಮಲ (ಲದ್ದಿ) ಸಿಕ್ಕಿದ್ದು, ಅದರ ಮಾದರಿಯನ್ನೂ ಅರಣ್ಯ ಇಲಾಖೆ ಪಡೆದುಕೊಂಡು ಅದರ ಪರೀಕ್ಷೆಗಾಗಿ ಹೈದರಾಬಾದ್ ಗೆ ಕಳುಹಿಸಲಾಗಿತ್ತು.
ಹುಬ್ಬಳ್ಳಿಯಲ್ಲಿ ಬುಧವಾರ ಹಾಗೂ ಧಾರವಾಡದ ಕವಲಗೇರಿಯ ಕಬ್ಬಿನ ಗದ್ದೆಯಲ್ಲೂ ಗುರುವಾರ ಚಿರತೆಯ ಮಲದ (ಲದ್ದಿ) ಮಾದರಿ ಸಿಕ್ಕಿತ್ತು. ಇದೂ ಒಂದೇ ಚಿರತೆಯದ್ದಾ ಅಥವಾ ಬೇರೆ ಬೇರೆ ಚಿರತೆಯದ್ದಾ ಎಂಬುದರ ಬಗ್ಗೆ ಖಾತ್ರಿಪಡಿಸಿಕೊಳ್ಳಲು ಮಲದ ಮಾದರಿಯನ್ನು ಹೈದರಾಬಾದ್ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಧಾರವಾಡದ ಚಿರತೆ ಸಿಕ್ಕಿತು ಇದೀಗ ಮಲದ ಮಾದರಿ ವರದಿ ಬರುವವರೆಗೆ ಹುಬ್ಬಳ್ಳಿ ಕಾರ್ಯಾಚರಣೆ ಮುನ್ನಡೆಸುವುದಾಗಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್ ಕ್ಷೀರಸಾಗರ್ ಸ್ಪಷ್ಟಪಡಿಸಿದ್ದಾರೆ.