Advertisement

ಕೊನೆಗೂ ನಡೆದ ಕೆಂಪೇಗೌಡ ಜಯಂತಿ

11:22 AM Aug 17, 2018 | Team Udayavani |

ಬೆಂಗಳೂರು: ಹಲವು ಬಾರಿ ಮುಂದೂಡಲ್ಪಟ್ಟ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಕೊನೆಗೂ ಸಂಭ್ರಮದಿಂದ ಆಚರಿಸಲಾಯಿತು. ಆದರೂ, ಸಂಜೆ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ವಿಧಿವಶರಾದ ಹಿನ್ನೆಲೆಯಲ್ಲಿ ಸಂತಾಪ ಸೂಚಿಸಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮೊಟಕುಗೊಳಿಸಲಾಯಿತು.

Advertisement

ಪಾಲಿಕೆಯ ಕೇಂದ್ರ ಕಚೇರಿ ಮುಂಭಾಗದಲ್ಲಿರುವ ನಾಡಪ್ರಭು ಕೆಂಪೇಗೌಡ ಹಾಗೂ ಅವರ ಸೊಸೆ ಲಕ್ಷ್ಮೀದೇವಿ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡುವ ಮೂಲಕ ಜಯಂತಿಗೆ ಮೇಯರ್‌ ಆರ್‌.ಸಂಪತ್‌ರಾಜ್‌ ಚಾಲನೆ ನೀಡಿದರೆ, ಲಾಲ್‌ಬಾಗ್‌ನ ಗಡಿಗೋಪುರದ ಬಳಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಜ್ಯೋತಿಯಾತ್ರೆಗೆ ಚಾಲನೆ ನೀಡಿದರು.

ಅದರಂತೆ ಕೆಂಪೇಗೌಡರು ಹಲಸೂರು ಕೆರೆ, ಕೆಂಪಾಂಬುದಿ ಕೆರೆ, ಮೇಖೀ ವೃತ್ತ, ಲಾಲ್‌ಬಾಗ್‌ ಬಳಿ ನಿರ್ಮಿಸಿರುವ ಗಡಿಗೋಪುರಗಳು ಹಾಗೂ ಮಾಗಡಿ ಬಳಿಯ ಕೆಂಪೇಗೌಡರ ಸಮಾಧಿ ಸ್ಥಳದಿಂದ ಡೊಳ್ಳು ಕುಣಿತ, ವೀರಗಾಸೆ, ಕೀಲು ಕುದುರೆ, ಗಾರುಡಿ ಗೊಂಬೆ, ಮಹಿಳಾ ವೀರಗಾಸೆ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳ ಮೂಲಕ ಬಿಬಿಎಂಪಿ ತಲುಪಿದ ಜ್ಯೋತಿಗಳನ್ನು ಮೇಯರ್‌ ಸ್ವೀಕರಿಸಿ ಗೌರವ ಸಲ್ಲಿಸಿದರು.

ಇದಕ್ಕೂ ಮೊದಲು ಸದಾಶಿವನಗರದ ರಮಣಶ್ರೀ ಉದ್ಯಾನದಲ್ಲಿ ನಿರ್ಮಿಸಲಾಗಿರುವ ದೇಶದ ಅತಿದೊಡ್ಡ ಕೆಂಪೇಗೌಡರ ಪ್ರತಿಮೆಯನ್ನು ಡಾ.ಜಿ.ಪರಮೇಶ್ವರ್‌ ಅನಾವರಣಗೊಳಿಸಿದರು. ಅಶ್ವಾರೂಢ ಕೆಂಪೇಗೌಡರ ಪ್ರತಿಮೆ ನಿಲ್ಲಿಸಲು ಕೋಟೆ ಮಾದರಿಯ ಬೃಹತ್‌ ವೇದಿಕೆ ನಿರ್ಮಿಸಿದ್ದು, ನೆಲದಿಂದ 30ಅಡಿ ಎತ್ತರ ಹಾಗೂ 16 ಅಡಿ ಅಗಲದ ಕಲ್ಲಿನ ಕೋಟೆಯ ಮಾದರಿ ನಿರ್ಮಿಸಲಾಗಿದೆ. 

ನಂತರ ಮಧ್ಯಾಹ್ನ ಪಾಲಿಕೆ ಆವರಣದ ಡಾ.ರಾಜ್‌ ಕುಮಾರ್‌ ಗಾಜಿನ ಮನೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 145 ಉತ್ತಮ ಅಧಿಕಾರಿಗಳು ಹಾಗೂ ನೌಕರರಿಗೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಪ್ರಶಸ್ತಿ ನೀಡಿ ಗೌರವಿಸಿದರು.

Advertisement

ಬಳಿಕ ಮಾತನಾಡಿ, ಕೆಂಪೇಗೌಡರು ಬೆಂಗಳೂರು ಮುಂದಿನ ದಿನಗಳಲ್ಲಿ ಹೇಗಿರಬೇಕು ಎಂಬ ದೂರದೃಷ್ಟಿಯನ್ನು ಹೊಂದಿದ್ದರು. ಆ ಕಾರಣಕ್ಕಾಗಿಯೇ ಅವರು ನಗರದ ನಾಲ್ಕು ದಿಕ್ಕುಗಳಲ್ಲಿ ಗಡಿಗೋಪುರಗಳನ್ನು ನಿರ್ಮಿಸಿದ್ದರು ಎಂದರು. 

ಮೇಯರ್‌ ಆರ್‌.ಸಂಪತ್‌ರಾಜ್‌, ಆಡಳಿತ ಪಕ್ಷ ನಾಯಕ ಎಂ.ಶಿವರಾಜು, ಬಿಬಿಎಂಪಿ ಆಯುಕ್ತಎನ್‌.ಮಂಜುನಾಥ ಪ್ರಸಾದ್‌, ಮಾಜಿ ಮೇಯರ್‌ ಸತ್ಯನಾರಾಯಣ, ಆಡಳಿತ ಮತ್ತು ಸಿಬ್ಬಂದಿ ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮೀನಾರಾಯಣ್‌, ಜೆಡಿಎಸ್‌ ನಾಯಕಿ ನೇತ್ರನಾರಾಯಣ್‌, ಕೌನ್ಸಿಲ್‌ ಕಾರ್ಯದರ್ಶಿ ಕೆ.ಆರ್‌.ಪಲ್ಲವಿ ಸೇರಿದಂತೆ ಪ್ರಮುಖರು ಹಾಜರಿದ್ದರು.

ಪಾಲಿಕೆಯಲ್ಲಿ ವಾಜಪೇಯಿಗೆ ನಮನ
ಬೆಂಗಳೂರು:
ಬಿಬಿಎಂಪಿ ವತಿಯಿಂದ ಗುರುವಾರ ಆಯೋಜಿಸಿದ್ದ ಕೆಂಪೇಗೌಡ ದಿನಾಚರಣೆ ಸಂದರ್ಭದಲ್ಲೇ ಮಾಜಿ ಪ್ರಧಾನಿ ವಾಜಪೇಯಿ ಅವರು ಮೃತಪಟ್ಟಿರುವ ವಿಷಯ ತಿಳಿದ ಕೂಡಲೇ ಕಾರ್ಯಕ್ರಮ ಮೊಟಕುಗೊಳಿಸಲಾಯಿತು.

ನಂತರ ಕಾರ್ಯಕ್ರಮದ ವೇದಿಕೆಯಲ್ಲೇ ವಾಜಪೇಯಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಅವರ ಆತ್ಮಕ್ಕೆ ಶಾಂತಿ ಕೋರಲಾಯಿತು.   ಈ ಸಂದರ್ಭದಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಅಟಲ್‌ ಬಿಹಾರಿ ವಾಜಪೇಯಿ ಅವರು ದೇಶ ಕಂಡ ಅಪ್ರತಿಮ ಹಾಗೂ ಆದರ್ಶ ರಾಜಕಾರಣಿಯಾಗಿದ್ದು, ನೆರೆಯ ಪಾಕಿಸ್ತಾನದ ಜತೆಗೂ ಸಹೋದರತ್ವದಿಂದ ಇರಬೇಕೆಂದು ಪ್ರತಿಪಾದಿಸಿದ್ದರು ಎಂದು ಸ್ಮರಿಸಿದರು. 

 ಮೇಯರ್‌ ಸಂಪತ್‌ರಾಜ್‌, ಶಾಸಕ ಎಸ್‌.ಟಿ.ಸೋಮಶೇಖರ್‌, ಆಡಳಿತ ಪಕ್ಷ ನಾಯಕ ಎಂ.ಶಿವರಾಜು, ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ, ಪಾಲಿಕೆ ಸದಸ್ಯರಾದ ಕೇಶವಮೂರ್ತಿ, ಲಕ್ಷ್ಮೀನಾರಾಯಣ ಸೇರಿದಂತೆ ಪ್ರಮುಖರು ನಮನ ಸಲ್ಲಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next