Advertisement

ಕೊನೆಗೂ ಇಂದಿರಾ ಕ್ಯಾಂಟೀನ್‌ಗೆ ಚಾಲನೆ

12:28 PM Dec 08, 2018 | |

ವಿಜಯಪುರ: ವಿಜಯಪುರ ಮಹಾನಗರದ ಜನರಿಗೆ ಕೊನೆಗೂ ಅಗ್ಗದ ದರದಲ್ಲಿ ಬಡವರಿಗೆ ಊಟ-ಉಪಾಹಾರ ನೀಡುವ ಇಂದಿರಾ ಕ್ಯಾಂಟೀನ್‌ಗೆ ಶುಕ್ರವಾರ ಮಹಾನಗರ ಪಾಲಿಕೆ ಆವರಣದಲ್ಲಿ ಚಾಲನೆ ದೊರೆತಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ. ಮನಗೂಳಿ ಅವರು ಮಹಾನಗರ ಪಾಲಿಕೆ ಬಳಿ ನಿರ್ಮಿಸಲಾಗಿರುವ ಇಂದಿರಾ ಕ್ಯಾಂಟೀನ್‌ಗೆ ಚಾಲನೆ ನೀಡಿದರು.

Advertisement

ಇಂದಿರಾ ಕ್ಯಾಂಟೀನ್‌ಗೆ ಚಾಲನೆ ನೀಡಿದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ. ಮನಗೂಳಿ, ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಡಾ| ದೇವಾನಂದ ಚವ್ಹಾಣ, ಮೇಯರ್‌ ಶ್ರೀದೇವಿ ಲೋಗಾಂವಿ, ಉಪ ಮೇಯರ್‌ ಗೋಪಾಲ ಘಟಕಾಂಬಳೆ, ಆಯುಕ್ತ ಔದ್ರಾಮ ಅವರು ಇಂದಿರಾ ಕ್ಯಾಂಟೀನ್‌ ಉದ್ಘಾಟನೆ ಮೊದಲ ದಿನದ ಮೊದಲ ಉಪಾಹಾರ ಸೇವಿಸಿದರು. ಇಡ್ಲಿ-ಸಾಂಬಾರ್‌, ಕೇಸರಿ ಬಾತ್‌ ಸವಿದ ಜನಪ್ರತನಿಧಿಗಳು ಉಪಾಹಾರ ಸೇವಿಸಿ ಗುಣಮಟ್ಟದ ಕುರಿತು ಸಂತೃಪ್ತಿ ವ್ಯಕ್ತಪಡಿಸಿದರು.

ನಗರದಲ್ಲಿ ಸೊಲ್ಲಾಪುರ ರಸ್ತೆ ಕೈಗಾರಿಕಾ ತರಬೇತಿ ಕೇಂದ್ರದ ಆವರಣ, ಎಪಿಎಂಸಿ ಆವರಣ, ಕೆಎಸ್‌ಆರ್‌ಟಿಸಿ ಡಿಪೋ ಹತ್ತಿರ ಆವರಣದಲ್ಲಿ ಇಂದಿರಾ ಕ್ಯಾಂಟೀನ್‌ ತೆರೆಯಲಾಗಿದೆ. ಈ ಎಲ್ಲ ಕ್ಯಾಂಟೀನ್‌ ಗಳಲ್ಲಿ ಇನ್ನು 5 ರೂ.ಗೆ ಉಪಾಹಾರ, 10 ರೂ.ಗೆ ಮಧ್ಯಾಹ್ನ ಹಾಗೂ ರಾತ್ರಿ ಊಟ ನೀಡುವ ವ್ಯವಸ್ಥೆಗೆ ಇದೆ. ಪ್ರತಿ ಕ್ಯಾಂಟೀನ್‌ನಲ್ಲಿ ತಲಾ 500 ಜನರಿಗೆ ಊಟ-ಉಪಾಹಾರದ ವ್ಯವಸ್ಥೆ ಇರಲಿದೆ. 

ಕಲ್ಕೂರ ರೆಫ್ರೀಜ್‌ರೇಷನ್‌ ಮತ್ತು ಕಿಚನ್‌ ಇ ಪ್ರಕ್ಯೂರ್‌ವೆುಂಟ್‌ ಪ್ರೈ ಲಿಮಿಟೆಡ್‌ ಹಾಗೂ ಕುಮಾರ ಇ-ಪ್ರಕ್ಯೂರ್‌ವೆುಂಟ್‌ ಇಂಡಿಯಾ ಪ್ರೈ ಲಿಮಿಟೆಡ್‌ ಕಂಪನಿಗಳು ಇಂದಿರಾ ಕ್ಯಾಂಟೀನ್‌ನಲ್ಲಿ ಬೃಹತ್‌ ಪ್ರೇಷರ್‌ ಕುಕ್ಕರ್‌, ಸ್ಟೀಮರ್‌, ಮಿಕ್ಸರ್‌ ಸೇರಿದಂತೆ ಪೂರಕವಾದ ಯಂತ್ರಗಳನ್ನು ಅಳವಡಿಸಿವೆ. ನಗರದಲ್ಲಿನ ಇಂದಿರಾ ಕ್ಯಾಂಟೀನ್‌ನ ಪ್ರತಿ ಕಟ್ಟಡಕ್ಕೆ 28 ಲಕ್ಷ ರೂ. ಹಾಗೂ ಅಡುಗೆ ಕೋಣೆ ನಿರ್ಮಾಣಕ್ಕೆ 48 ಲಕ್ಷ ರೂ. ವೆಚ್ಚ ಮಾಡಲಾಗಿದೆ.

ಆಹಾರ ಪೂರೈಕೆಗೆ ಪ್ರತಿ ವರ್ಷ 22,26,500 ರೂ. ವೆಚ್ಚದ ಅಂದಾಜಿದೆ. ಇದರಲ್ಲಿ ಶೇ. 30ರಷ್ಟು ಕಾರ್ಮಿಕ ಇಲಾಖೆ ಹಾಗೂ ಉಳಿದ ಮೊತ್ತವನ್ನು ಮಹಾನಗರ ಪಾಲಿಕೆ ಅನುದಾನ ಅಥವಾ ಎಸ್‌ ಎಫ್‌ಸಿ ಅನುದಾನದಡಿ ಒದಗಿಸುವ ಚಿಂತನೆ ನಡೆದಿದೆ ಎಂದು ಪಾಲಿಕೆ ಆಯುಕ್ತ ಡಾ| ಔದ್ರಾಮ
ತಾಂತ್ರಿಕ ವಿವರಣೆ ನೀಡಿದರು. 

Advertisement

ಊಟ-ಉಪಾಹಾರದ ಮೆನು: ವಾರದ ಏಳು ದಿನವೂ ಒಂದೊಂದು ಉಪಾಹಾರ ಹಾಗೂ ವೈವಿಧ್ಯಮ ಊಟದ ಮೆನು ಇರಲಿದೆ. ಉಪಾಹಾರಕ್ಕೆ ಸೋಮವಾರ ಪುಳಿಯೋಗರೆ, ಮಂಗಳವಾರ ಖಾರಾಬಾತ್‌, ಬುಧವಾರ ಪೊಂಗಲ್‌, ಗುರುವಾರ ಕಿಚಡಿ, ಶುಕ್ರವಾರ ಚಿತ್ರಾನ್ನ, ಶನಿವಾರ ವಾಂಗಿಬಾತ್‌, ರವಿವಾರ ಕೇಸರಿಬಾತ್‌ ಇರಲಿದೆ. ಅದರಂತೆ ಮಧ್ಯಾಹ್ನ ಹಾಗೂ ರಾತ್ರಿ ಅನ್ನ, ತರಕಾರಿ, ಸಾಂಬಾರ್‌, ಮೊಸರನ್ನ ವಾರದ ಏಳು ದಿನಗಳು ಲಭ್ಯವಾಗುತ್ತಿದ್ದು, ಇದರೊಂದಿಗೆ ಆಯಾ ವಾರಕ್ಕೆ ನಿಗದಿಗೊಳಿಸಲಾಗಿರುವ ಮೆನುವಿನಂತೆ ಬೇರೆ ಬೇರೆ ಉಪಾಹಾರ ನೀಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next