Advertisement

ಕೊನೆಗೂ ಗಿಡಗಳ ನಿರ್ವಹಣೆಗೆ ಮುಂದಾದ ಪಾಲಿಕೆ

11:14 AM Jun 07, 2018 | Team Udayavani |

ಮಹಾನಗರ : ನಗರದ ಅನೇಕ ಕಡೆಗಳಲ್ಲಿನ ರಸ್ತೆ ವಿಭಾಜಕಗಳಲ್ಲಿ ನಗರ ಪಾಲಿಕೆ ವತಿಯಿಂದ ಸಾವಿರಾರು ಗಿಡ ನೆಟ್ಟಿದ್ದು, ಇದರ ನಿರ್ವಹಣೆಗೆ ಪಾಲಿಕೆ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಿದೆ ಎಂದು ತನ್ನ ದಾಖಲೆಗಳ ಮೂಲಕ ತೋರಿಸುತ್ತಿದೆ. ಆದರೆ, ಆ ಗಿಡಗಳಿಂದು ಸರಿಯಾದ ನಿರ್ವಹಣೆಯಿಲ್ಲದೆ ಸೊರಗುತ್ತಿವೆ. ಈ ಬಗ್ಗೆ ಪರಿಸರ ದಿನಾಚರಣೆಯ ದಿನ ‘ಪಾಲಿಕೆ ನಿರ್ಲಕ್ಷ್ಯದಿಂದ ನಿರ್ವಹಣೆಯಿಲ್ಲದೆ ಸೊರಗುತ್ತಿರುವ ಗಿಡಗಳು’ ಎಂಬ ಶೀರ್ಷಿಕೆಯಲ್ಲಿ ಜೂ. 5ರಂದು ‘ಸುದಿನ’ ವಿಶೇಷ ವರದಿ ಪ್ರಕಟಿಸಿತ್ತು. ಮಹಾನಗರ ಪಾಲಿಕೆ ಇದೀಗ ಎಚ್ಚೆತ್ತುಕೊಂಡಿದೆ.

Advertisement

ಇದೀಗ ಪಾಲಿಕೆಯು ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದಿಂದ ಕುಂಟಿಕಾನ ದೇರೆಬೈಲು ಡಿವೈಡರ್‌ ವರೆಗೆ ನೆಟ್ಟಂತಹ ಗಿಡಗಳ ನಿರ್ವಹಣೆಯಲ್ಲಿ ತೊಡಗಿದೆ. ಈ ಗಿಡಗಳು ಸುಮಾರು 2 ಮೀ. ಗಿಂತಲೂ ಎತ್ತರಕ್ಕೆ ಬೆಳೆದ ಕಾರಣ ರಾತ್ರಿ ಸಮಯದಲ್ಲಿ ವಾಹನ ಸವಾರರಿಗೆ ಎದುರಿನಿಂದ ಬರುತ್ತಿರುವ ವಾಹನಗಳು ಕಾಣಿಸುತ್ತಿರಲಿಲ್ಲ. ಇದರಿಂದಾಗಿ ವಾಹನ ಸವಾರರು ಕಷ್ಟಪಡುತ್ತಿದ್ದರು. ಅಷ್ಟೇ ಅಲ್ಲದೆ, ಈ ಗಿಡಗಳ ಸುತ್ತಮುತ್ತ ಹುಲ್ಲುಗಳಿಂದ ಕೂಡಿದ್ದು, ಪಾದಚಾರಿಗಳು ಕೂಡ ಕಷ್ಟ ಅನುಭವಿಸುತ್ತಿದ್ದರು. ಇದೀಗ ಗಿಡಗಳು 1 ಮೀ. ಎತ್ತರದಷ್ಟಿರಬೇಕು ಎಂದು ಪಾಲಿಕೆ ಈಗಾಗಲೇ ನಿಗದಿ ಮಾಡಿದೆ.

ಈ ಭಾಗದ ಎಲ್ಲ ಗಿಡಗಳ ಎಲೆ ಗಳನ್ನು ಸವರಿದ್ದು, ಮುಂದಿನ ದಿನಗಳಲ್ಲಿ ಗೊಬ್ಬರ ಹಾಕಲಾಗುವುದು ಎಂದು ಪಾಲಿಕೆ
ಅಧಿಕಾರಿಗಳು ಸುದಿನಕ್ಕೆ ತಿಳಿಸಿದ್ದಾರೆ.

ಅಸಮರ್ಪಕ ನಿರ್ವಹಣೆ
ಪಾಲಿಕೆ ವತಿಯಿಂದ ನಗರದ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದಿಂದ ಕುಂಟಿಕಾನ ದೇರೆಬೈಲು ಡಿವೈಡರ್‌, ಸರ್ಕ್ನೂಟ್‌ ಹೌಸ್‌ನಿಂದ ಕೆಪಿಟಿ ಮರಕಡ ಡಿವೈಡರ್‌ವರೆಗೆ, ಕ್ಲಾಕ್‌ಟವರ್‌ನಿಂದ ರಾವ್‌ ಆ್ಯಂಡ್‌ ರಾವ್‌ ಸರ್ಕಲ್‌ ವೃತ್ತ, ಎ.ಬಿ. ಶೆಟ್ಟಿ ವೃತ್ತದಿಂದ ಪಾಂಡೇಶ್ವರ, ಲೇಡಿಹಿಲ್‌ ಸರ್ಕಲ್‌ ರಸ್ತೆಯಿಂದ ಕೊಟ್ಟಾರ ಜಂಕ್ಷನ್‌ ರಸ್ತೆ ವಿಭಾಜಕಗಳಲ್ಲಿ ಒಟ್ಟಾರೆ ಮೂರು ವರ್ಷಗಳಲ್ಲಿ 14,421 ಗಿಡಗಳನ್ನು ನೆಟ್ಟಿದೆ. ಗಿಡಗಳನ್ನು ನೆಡಲು ಒಟ್ಟು 3,19,255 ರೂ. ಮತ್ತು ಗಿಡಗಳ ನಿರ್ವಹಣೆಗೆ 5,70,475 ರೂ. ವ್ಯಯಿಸಿದೆ. ಒಟ್ಟಾರೆಯಾಗಿ ಒಂದು ಗಿಡ ನೆಡಲು ಸುಮಾರು 22 ರೂ. ಮತ್ತು ಒಂದು ಗಿಡದ ನಿರ್ವಹಣೆಗೆ ಸುಮಾರು 39 ರೂ. ಖರ್ಚು ಮಾಡುತ್ತಿದೆ. ಇಷ್ಟಾದರೂ, ಗಿಡಗಳ ನಿರ್ವಹಣೆ ಮಾತ್ರ ಸಮರ್ಪಕವಾಗಿ ನಡೆಯುತ್ತಿರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next