ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ದರ್ಶನ್ ಅಭಿನಯದ ಬಹುನಿರೀಕ್ಷಿತ “ತಾರಕ್’ ಚಿತ್ರವು ನಿನ್ನೆ ಗುರುವಾರ (ಸೆಪ್ಟೆಂಬರ್ 21) ಬಿಡುಗಡೆಯಾಗಬೇಕಿತ್ತು. ಆದರೆ, ತಾಂತ್ರಿಕ ಕಾರಣಗಳಿಂದ ಟ್ರೇಲರ್ ಬಿಡುಗಡೆ ಮುಂದಕ್ಕೆ ಹೋಗಿತ್ತು. ಇದರಿಂದ ಟ್ರೇಲರ್‌ಗಾಗಿ ಕಾದಿದ್ದ ಪ್ರೇಕ್ಷಕರಿಗೆ ಸಾಕಷ್ಟು ನಿರಾಶೆಯಾಗಿದ್ದರು.
ಈಗ ಟ್ರೇಲರ್ ಬಿಡುಗಡೆಯಾಗಿದ್ದು, ಬಿಡುಗಡೆಯಾದ ಎರಡೇ ಗಂಟೆಯಲ್ಲಿ 90 ಸಾವಿರಕ್ಕೂ ಹೆಚ್ಚು ಹಿಟ್ಸ್ ಸಿಕ್ಕಿದೆ. ಈ ಮೂಲಕ ಅಭಿಮಾನಿಗಳು “ತಾರಕ್’ ಟ್ರೇಲರ್ ಅನ್ನು ಮೆಚ್ಚಿಕೊಂಡಿದ್ದಾರೆ. ಚಿತ್ರದ ಟ್ರೇಲರ್‌ನಲ್ಲೇ ಇದೊಂದು ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾವಾಗಿದ್ದು, ಆ್ಯಕ್ಷನ್ ಪ್ರಿಯರಿಗೆ ಬೇಕಾದ ಆ್ಯಕ್ಷನ್ ಕೂಡಾ ಇದೆ.
“ನಮ್ಮ ತಂದೆ ಯಾವತ್ತೂ ಹೇಳ್ತಾ ಇದ್ರು, ಈ ಪ್ರೀತಿ ಮತ್ತು ಫ್ಯಾಮಿಲಿ ಮಧ್ಯೆ ಯಾವತ್ತೂ ಸಿಕ್ಕಿ ಹಾಕೋಬಾರ್ಧು ಅಂತ’, “ನೋ ಡಿಸ್ಕಶನ್, ಓನ್ಲಿ ಆ್ಯಕ್ಷನ್’ ಸೇರಿದಂತೆ ದರ್ಶನ್ ಅಭಿಮಾನಿಗಳು ಇಷ್ಟಪಡುವ ಸಂಭಾಷಣೆಗಳು ಈ ಟ್ರೇಲರ್‌ನಲ್ಲಿವೆ. “ತಾರಕ್’ ಚಿತ್ರವನ್ನು “ಮಿಲನ’ ಪ್ರಕಾಶ್ ನಿರ್ದೇಶಿಸಿದ್ದಾರೆ. ಇನ್ನು “ಮೊನಾಲಿಸಾ’ ಮತ್ತು “ಮಿಲನ’ ಚಿತ್ರಗಳನ್ನು ನಿರ್ಮಿಸಿದ್ದ ದುಷ್ಯಂತ್, ಈ ಚಿತ್ರವನ್ನು ನಿರ್ಮಿಸಿದ್ದಾರೆ.
65 ದಿನಗಳ ಕಾಲ ಬೆಂಗಳೂರು, ಮಲೇಷ್ಯಾ, ಯೂರೋಪ್‌ನಲ್ಲಿ ಚಿತ್ರದ ಚಿತ್ರೀಕರಣವಾಗಿದೆ. ಆ ಪೈಕಿ 23 ದಿನಗಳ ಕಾಲ ಯುರೋಪ್‌ನಲ್ಲಿ ಶೂಟಿಂಗ್ ಮಾಡಲಾಗಿದೆ. ಮೂರೂವರೆ ಸಾವಿರ ಕಿಲೋಮೀಟರ್‌ನ ಸುತ್ತಾಡಿ, ಹಾಡು, ಫೈಟು ಹಾಗೂ ಕೆಲವು ಪ್ರಮುಖ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಈ ಚಿತ್ರದಲ್ಲಿ ದರ್ಶನ್‌ಗೆ ಸಾನ್ವಿ ಶ್ರೀವಾತ್ಸವ್ ಮತ್ತು ಶ್ರುತಿ ಹರಿಹರನ್ ನಾಯಕಿಯರಾಗಿ ನಟಿಸಿದ್ದು, ಮಿಕ್ಕಂತೆ ದೇವರಾಜ್ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತ ನೀಡಿದ್ದು, ಎ.ವಿ. ಕೃಷ್ಣಕುಮಾರ್ ಅವರ ಛಾಯಾಗ್ರಹಣವಿದೆ. ಚಿತ್ರಕ್ಕೆ ಜಯಂತ್ ಕಾಯ್ಕಿಣಿಯವರು ಹಾಡು ಬರೆದಿದ್ದು, ಇದೇ ಮೊದಲ ಬಾರಿಗೆ ದರ್ಶನ್ ಅವರ ಚಿತ್ರವೊಂದಕ್ಕೆ ಅವರು ಸಾಹಿತ್ಯ ರಚಿಸಿರುವುದು ವಿಶೇಷ. ಇನ್ನು ಚಿತ್ರವು ಇದೇ ತಿಂಗಳ 29ರಂದು ಸಂತೋಷ್ ಮತ್ತು ರಾಜ್ಯಾದ್ಯಂತ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.