ಬೆಂಗಳೂರು: ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 17ರಲ್ಲಿ ಪುರುಷರಿಗಿಂತ ಮಹಿಳಾ ಮತದಾರರೇ ಹೆಚ್ಚಿದ್ದಾರೆ. ಜತೆಗೆ ಪುರುಷ ಮತ್ತು ಮಹಿಳಾ ಮತದಾರರ ನಡುವಿನ ಲಿಂಗಾನುಪಾತ ಕಡಿಮೆ ಆಗುತ್ತಿದ್ದು, ಸಾವಿರ ಪುರುಷರಿಗೆ ಮಹಿಳೆಯರ ಸಂಖ್ಯೆ 997ಕ್ಕೆ ಏರಿಕೆಯಾಗಿದೆ. ಈ ವರ್ಷದ ಜನವರಿ ಒಂದಕ್ಕೆ ಅನ್ವಯ ಆಗುವಂತೆ ರಾಜ್ಯದಲ್ಲಿ ಒಟ್ಟು 5.37 ಕೋಟಿ ಮತದಾರರಿದ್ದು, ಈ ಪೈಕಿ 2.69 ಕೋಟಿ ಪುರುಷ ಮತ್ತು 2.68 ಕೋಟಿ ಮಹಿಳಾ ಮತದಾರರಿದ್ದಾರೆ. 4,920 ತೃತೀಯ ಲಿಂಗಿ ಮತದಾರರಿದ್ದಾರೆ.
ಸೋಮವಾರ ರಾಜ್ಯ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಅಂತಿಮ ಮತದಾರರ ಪಟ್ಟಿ-2024 ಅನ್ನು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಬಿಡುಗಡೆ ಮಾಡಿದ್ದಾರೆ.
ಉಡುಪಿ -ಚಿಕ್ಕಮಗಳೂರು, ತುಮಕೂರು, ದಾವಣಗೆರೆ, ಕೋಲಾರ, ಹಾಸನ, ಶಿವಮೊಗ್ಗ, ಚಾಮರಾಜನಗರ, ಮಂಡ್ಯ, ಬಾಗಲಕೋಟೆ, ದಕ್ಷಿಣ ಕನ್ನಡ, ಕೊಪ್ಪಳ, ಚಿತ್ರದುರ್ಗ, ಬಳ್ಳಾರಿ, ಬೆಳಗಾವಿ. ಚಿಕ್ಕಬಳ್ಳಾಪುರ, ರಾಯಚೂರು, ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿದೆ. ವಿಧಾನಸಭಾ ಕ್ಷೇತ್ರಗಳಿಗೆ ಪರಿಗಣಿಸಿದಾಗ ವಿಧಾನಸಭೆಯಲ್ಲಿ ಬಹುಮತದ ಸಂಖ್ಯೆಯಾಗಿರುವ 113 ಕ್ಷೇತ್ರಗಳಲ್ಲಿ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿದೆ.
ಶತಾಯುಷಿಗಳು
ರಾಜ್ಯದಲ್ಲಿ 17,937 ಶತಾಯುಷಿ, 80 ವರ್ಷ ದಾಟಿದ 12.71 ಲಕ್ಷ ಮತದಾರರಿದ್ದಾರೆ. ಕರಡು ಪಟ್ಟಿಗೆ ಹೋಲಿಸಿದರೆ ಹಿರಿಯ ನಾಗರಿಕ ಮತದಾರರ ಸಂಖ್ಯೆ ಕುಸಿದಿದೆ. 5.62 ಲಕ್ಷ ಅಂಗವಿಕಲ, 46,501 ಸೇವಾ ಮತದಾರರು, 3,164 ಸಾಗರೋತ್ತರ ಮತದಾರರಿದ್ದಾರೆ. ಅಂತಿಮ ಪಟ್ಟಿಯಲ್ಲಿ 10.34 ಲಕ್ಷ ಯುವ ಮತದಾರರು ಸೇರ್ಪಡೆಯಾಗಿದ್ದಾರೆ.
ಪರಿಷ್ಕರಣೆಗೆ ಇನ್ನೂ ಅವಕಾಶವಿದೆ. ಅರ್ಹ ಮತದಾರರ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲದಿದ್ದರೆ, ಅವರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಲು ಅವಕಾಶ ನೀಡಲಾಗಿದೆ. ಅರ್ಹ ಮತದಾರರು ಅರ್ಜಿಗಳನ್ನು ತಮ್ಮ ಮೊಬೈಲ್‌ನಲ್ಲಿ ವೋಟರ್ ಹೆಲ್ಪ್ಲೈನ್ ಅಪ್ಲಿಕೇಶನ್ ಅಥವಾ
https://voterportal.eci.gov.in/ ಪೋರ್ಟಲ್ ಮೂಲಕ ಸಲ್ಲಿಸಬಹುದು. ಎಪ್ರಿಲ್ 1, ಜುಲೈ 1 ಮತ್ತು ಅಕ್ಟೋಬರ್ 1ರಂತೆ ಅರ್ಹತೆ ಹೊಂದುವ ಮತದಾರರು ಮುಂಚಿತವಾಗಿ ತಮ್ಮ ಅರ್ಜಿ ಸಲ್ಲಿಸಬಹುದು. ಅದೇ ಪ್ರಕಟಿತ ಮತದಾರರ ಪಟ್ಟಿಯಲ್ಲಿ ನಮೂದು ಮಾರ್ಪಾಡು ಅಥವಾ ತಿದ್ದುಪಡಿಗಳಿಗೆ ಮೇಲೆ ತಿಳಿಸಿರುವ ಅಪ್ಲಿಕೇಶನ್ ಅಥವಾ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು. ಶೇ. 90ಕ್ಕಿಂತ ಹೆಚ್ಚು ಮತದಾರರ ಅರ್ಜಿ ಆನ್‌ಲೈನ್ ಮೂಲಕವೇ ಸಲ್ಲಿಸುತ್ತಿದ್ದಾರೆ ಎಂದು ಮೀನಾ ಅವರು ತಿಳಿಸಿದ್ದಾರೆ.
ಉಡುಪಿಯಲ್ಲಿ ಕನಿಷ್ಠ ಮತದಾರರು
ರಾಜ್ಯದಲ್ಲಿ ಗರಿಷ್ಠ ಮತದಾರರು ಬೆಂಗಳೂರು ಉತ್ತರ ಲೋಕಸಭಾ (31.30 ಲಕ್ಷ) ಕ್ಷೇತ್ರದಲ್ಲಿ ಹಾಗೂ ಕನಿಷ್ಠ ಸಂಖ್ಯೆಯ ಮತದಾರರು ಉಡುಪಿ ಚಿಕ್ಕಮಗಳೂರು ಲೋಕಸಭಾ (15.62 ಲಕ್ಷ) ಕ್ಷೇತ್ರದಲ್ಲಿದ್ದಾರೆ. ದಕ್ಷಿಣ ಕನ್ನಡದಲ್ಲಿ 17,88,405 ಮತದಾರರಿದ್ದಾರೆ.