Advertisement

ಸೈನೈಡ್‌ ಮೋಹನ್‌ ವಿರುದ್ಧ ಇಂದು ಅಂತಿಮ ತೀರ್ಪು ಸಾಧ್ಯತೆ

07:00 AM Oct 12, 2017 | |

ಬೆಂಗಳೂರು: “ಅನಿತಾ ಬರಮಾರ್‌ ಎಂಬ ಮಹಿಳೆಗೆ ಸೈನೈಡ್‌ ನೀಡಿ ಆರೋಪಿ ಮೋಹನ್‌ ಕೊಲೆಗೈದಿರುವುದಕ್ಕೆ ಪ್ರಾಸಿಕ್ಯೂಶನ್‌ ಸಲ್ಲಿಸಿರುವ ಸಾಕ್ಷ್ಯಗಳು ಪೂರಕವಾಗಿರುವುದು ಕಂಡು ಬರುತ್ತಿದೆ’ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದ್ದು, ಗುರುವಾರ ಅಂತಿಮ ತೀರ್ಪು ನೀಡುವ ಸಾಧ್ಯತೆ ಇದೆ.

Advertisement

ಆರೋಪಿ ಮೋಹನ್‌ಗೆ ದಕ್ಷಿಣ ಕನ್ನಡ ಜಿಲ್ಲಾ ಸೆಷನ್ಸ್‌ ಕೋರ್ಟ್‌ ವಿಧಿಸಿದ್ದ ಮರಣದಂಡನೆ ಶಿಕ್ಷೆಯನ್ನು ಖಾಯಂಗೊಳಿಸುವಂತೆ ಕೋರಿ ಹೈಕೋರ್ಟ್‌ ರಿಜಿಸ್ಟ್ರಾರ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ನ್ಯಾಯಮೂರ್ತಿ ರವಿಮಳೀಮs… ಹಾಗೂ ನ್ಯಾ.ಜಾನ್‌ ಮೈಕೆಲ್‌ ಕುನ್ಹಾ ಅವರಿದ್ದ ವಿಭಾಗೀಯ ಪೀಠ, ಗುರುವಾರ‌ ತೀರ್ಪು ನೀಡಲಿದೆ.

ಆರೋಪಿ ಮೋಹನ್‌ ವಿರುದ್ಧ ಕೃತ್ಯ ಎಸಗಿರುವುದಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಶನ್‌ ಸಲ್ಲಿಸಿರುವ ಸಾಕ್ಷ್ಯಾಧಾರಗಳಾಗಿ ಸಲ್ಲಿಸಿರುವ  ಘಟನೆ ಚಿತ್ರಣ, ಸಾಕ್ಷ್ಯಾ ಹೇಳಿಕೆಗಳು, ಆರೋಪಿಯ ಸಹಿ, ಆತನ ಎರಡನೇ ಪತ್ನಿ ಮನೆಯಲ್ಲಿ ದೊರೆತ ಸೈನೈಡ್‌ ಇನ್ನಿತರೆ ಅಂಶಗಳನ್ನು ಗಮನಿಸಿದಾಗ, ಆರೋಪಿ ಮಹಿಳೆಯನ್ನು ಕೊಲೆಗೈದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಈ ಕುರಿತು ಪೂರ್ಣ ತೀರ್ಪನ್ನು ನ್ಯಾಯಪೀಠ ಗುರುವಾರ ನೀಡುವ ಸಾಧ್ಯತೆಯಿದೆ.

ಮಹಿಳೆ ಹತ್ಯೆಗೆ ಬಲವಾದ ಸಾಕ್ಷ್ಯ: ಸರ್ಕಾರಿ ಅಭಿಯೋಜಕರು ಹಾಗೂ ಆರೋಪಿ ಸೈನೈಡ್‌ ಮೋಹನ್‌ ಮಂಡಿಸಿದ ವಾದ-ಪ್ರತಿವಾದ ಆಲಿಸಿ ಕೆಲ ಅಂಶಗಳನ್ನು ಪಟ್ಟಿಮಾಡಿರುವ ನ್ಯಾಯಪೀಠ, ಬುಧವಾರ ನೀಡಿದ ತೀರ್ಪಿನಲ್ಲಿ ಪ್ರಾಸಿಕ್ಯೂಶನ್‌ ಸಲ್ಲಿಸಿರುವ ಸಾಕ್ಷ್ಯಗಳ ಅನ್ವಯ ಆರೋಪಿ ಅನಿತಾ ಎಂಬಾಕೆಯ ಜೊತೆ ಮೈಸೂರಿನ ಪಿ.ಸಿ ರಸ್ತೆಯ ಲಾಡ್ಜ್ನಲ್ಲಿ ಒಟ್ಟಿಗೆ ತೆರಳಿರುವುದು. ಆಗ ಮಾಡಿರುವ ಸಹಿ ಹಾಗೂ ಮಹಿಳೆಯನ್ನು ಕೊಲೆಗೈದ ಬಳಿಕ ತಾನೊಬ್ಬನೇ ಲಾಡ್ಜ್ಗೆ ತೆರಳಿ ವಾಪಾಸ್‌ ಬಂದಿದ್ದಾನೆ. ಜೊತೆಗೆ ಮಹಿಳೆಯ ಶವ ಲಾಡ್ಜ್ಗೆ ಕೇವಲ 100 ಅಡಿ ದೂರದಲ್ಲಿರುವ  ಶೌಚಾಲಯದಲ್ಲಿ ಪತ್ತೆಯಾಗಿದೆ. ಕೆಲವೇ ನಿಮಿಷಗಳ ಅಂತರದಲ್ಲಿ ನಡೆದಿರುವ ಈ ಕೃತ್ಯವನ್ನ ಆರೋಪಿ ಎಸಗಿದ್ದಾನೆ ಎಂಬುದಕ್ಕೆ ಬಲವಾದ ಇಂಬು ನೀಡಲಿವೆ.

ಜೊತೆಗೆ ಜೂನ್‌ 19,2009 ರಂದು ದೇವಾಲಯಕ್ಕೆ ತೆರಳಿದ್ದ ಆರೋಪಿ ಅಲ್ಲಿನ ಅರ್ಚಕರಾದ ಈಶ್ವರಭಟ್ಟ ಎಂಬುವವರ ಬಳಿ “ಸ್ತ್ರೀ ಹತ್ಯಾ ದೋಷ’ ಪರಿಹಾರಕ್ಕೆ ಏನು ಮಾಡಬೇಕು ಎಂಬುದರ ಬಗ್ಗೆ ಮಾಹಿತಿ ಕೇಳಿದ್ದಾನೆ. ಈ ಬಗ್ಗೆ ಅರ್ಚಕರು ತನಿಖಾಧಿಕಾರಿಯ ಮುಂದೆ ಹೇಳಿಕೆ ನೀಡಿದ್ದಾರೆ. ಹೀಗಾಗಿ ಆರೋಪಿಯು ಮಹಿಳೆಯನ್ನು ಕೊಲೆಗೈದಿದ್ದೇನೆ ಎಂಬ ಪಾಪಪ್ರಜ್ಞೆಯಿಂದಲೇ ದೇವಾಲಯಕ್ಕೆ ತೆರಳಿದ್ದಾನೆ ಎಂಬುದು ಕಂಡು ಬರುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

Advertisement

2ನೇ ಪತ್ನಿ  ಮನೆಯಲ್ಲಿ  10 ಸೈನೈಡ್‌
2009ರ ಅ.10ರಂದು ಆರೋಪಿಯನ್ನು ಬಂಧಿಸಿದ ಬಳಿಕ ಪೊಲೀಸರು, ಆತನ ಎರಡನೇ ಪತ್ನಿ ಮನೆಗೆ ತೆರಳಿದಾಗ ಅಲ್ಲಿ 10 ಸೈನೈಡ್‌ ದೊರೆತಿವೆ ಎಂದು ಪ್ರಾಸಿಕ್ಯೂಶನ್‌ ತಿಳಿಸಿದೆ. ಆದರೆ, ಆರೋಪಿ  ತನ್ನ ಪತ್ನಿ ಮನೆಯಿಂದ ಪೊಲೀಸರೇ ಚಿನ್ನಾಭರಣ ದೋಚಿಕೊಂಡು ಹೋಗಿದ್ದಾರೆ ಎಂದು ವಾದಿಸುತ್ತಾನೆ. ಈ ಅಂಶ ನಿಜವಾಗಿದ್ದರೆ, ಪತ್ನಿ ಏಕೆ ಅವನನ್ನು ಬಿಡಿಸಿಕೊಂಡು ಹೋಗಲು ಬರಲಿಲ್ಲ ಎಂಬ ಅನುಮಾನ  ಮೂಡುತ್ತದೆ.

ಇದಲ್ಲದೆ ಅಕ್ರಮವಾಗಿ ಮಹಮದ್‌ ಎಂಬಾತ ಮೋಹನ್‌ಗೆ  ಸೈನೈಡ್‌ ಮಾರಾಟ ಮಾಡಿರುವುದಾಗಿ ಹೇಳಿಕೆ ದಾಖಲಾಗಿದೆ. ಇದಲ್ಲದೆ ಅನಿತಾರ ಬಳಿಯಿದ್ದ ಒಡವೆಗಳನ್ನು ಕದ್ದಿದ್ದ ಆರೋಪಿ  ಮುತ್ತೂಟ್‌ ಫೈನಾನ್ಸ್‌ನಲ್ಲಿ ಅಡವಿಟ್ಟಿದ್ದಾನೆ. ಈ ಬಗ್ಗೆ ಅಲ್ಲಿನ ಮ್ಯಾನೇಜರ್‌ ಕೂಡ ಸಾಕ್ಷಿ  ನುಡಿದಿದ್ದಾರೆ.  ಜೊತೆಗೆ ಆ ಚಿನ್ನಾಭರಣಗಳು ಅನಿತಾಗೆ ಸೇರಿದ್ದು ಎಂದು ಆಕೆಯ ಸಹೋದರ ಹೇಳಿಕೆ ನೀಡಿದ್ದಾರೆ. ಈ ಎಲ್ಲಾ ಅಂಶಗಳು ಆರೋಪಿಯು ಮಹಿಳೆಯನ್ನು ನಂಬಿಸಿ, ಸೈನೈಡ್‌ ನೀಡಿ ಕೊಲೆಗೈದು ಚಿನ್ನಾಭರಣ ದೋಚಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ನ್ಯಾಯಪೀಠ ತಿಳಿಸಿದೆ.

ಪೊಲೀಸರ ವಿರುದ್ಧದ ಕಿರುಕುಳ ನಿರಾಧಾರ: ಆರೋಪಿ ಮೋಹನ್‌ಕುಮಾರ್‌, ಪೊಲೀಸರು ನನಗೆ ಥರ್ಡ್‌ಗ್ರೇಡ್‌ ಟ್ರೀಟ್‌ಮೆಂಟ್‌ ನೀಡಿದ್ದಾರೆ. ಹಲ್ಲೆ ನಡೆಸಿ, ಬೆದರಿಸಿ ಹೇಳಿಕೆ ಪಡೆದುಕೊಂಡಿದ್ದಾರೆ ಎಂದು ವಾದಿಸುತ್ತಾನೆ. ಆದರೆ, ಸಾಕಷ್ಟು ಕಾನೂನು ತಿಳಿವಳಿಕೆ ಹೊಂದಿರುವ ಆರೋಪಿ, ಈ ಹೇಳಿಕೆಗಳನ್ನು ಮ್ಯಾಜಿಸ್ಟ್ರೇಟ್‌ ಕೋರ್ಟ್‌ಗಳಲ್ಲಿ ಉಲ್ಲೇಖೀಸಿಲ್ಲ. ಮಾನವ ಹಕ್ಕುಗಳ ಬಗ್ಗೆಯೂ ಎಲ್ಲಿಯೂ ದೂರು ದಾಖಲಿಸಿಲ್ಲ. ಹೀಗಾಗಿ ಆತನ ವಾದ ಒಪ್ಪಲಾಗದು ಎಂದು ನ್ಯಾಯಪೀಠ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next