Advertisement

ಕುಂಭಮೇಳ ಸಿದ್ಧತೆಗೆ ಅಂತಿಮ ಸ್ಪರ್ಶ

07:27 AM Feb 16, 2019 | Team Udayavani |

ತಿ.ನರಸೀಪುರ: ದಕ್ಷಿಣ ಭಾರತದ 11ನೇ ಕುಂಭಮೇಳ ಕ್ಷಣಗಣನೆ ಆರಂಭಗೊಂಡಿದ್ದು, ಅಂತಿಮ ಸಿದ್ಧತೆಗಳು ಮುಕ್ತಾಯ ಹಂತದಲ್ಲಿವೆ. ಈಗಾಗಲೇ ಭಾರತೀಯ ಸೇನೆಯ ಯೋಧರು ಭಕ್ತರ ಅನುಕೂಲಕ್ಕಾಗಿ ಕಪಿಲ ನದಿಗೆ ಅಡ್ಡಲಾಗಿ ತೇಲುವ ಸೇತುವೆ ನಿರ್ಮಿಸಿದ್ದು, ಆಕರ್ಷಣೀಯವಾಗಿದೆ.

Advertisement

ಕುಂಭಮೇಳದಲ್ಲಿ ಭಕ್ತರಿಗೆ ನದಿಯ ದ್ವೀಪದ ಮಧ್ಯಕ್ಕೆ ತೆರಳಲು ಅನುಕೂಲವಾಗುವಂತೆ ಭಾರತೀಯ ಸೇನೆ ತೇಲುವ ಸೇತುವೆ ನಿರ್ಮಾಣ ಮಾಡಿದೆ. 140 ಸೈನಿಕರು ಕೇವಲ ಮೂರು ದಿನಗಳಲ್ಲಿ ಹಗಲು ರಾತ್ರಿ ಕೆಲಸ ಮಾಡಿ 160 ಮೀಟರ್‌ ಉದ್ದ ಮತ್ತು 3 ಮೀಟರ್‌ ಅಗಲದ ತೇಲುವ ಸೇತುವೆ ನಿರ್ಮಿಸಿದ್ದಾರೆ.

ಸೇತುವೆಯು ಗುಂಜಾ ನರಸಿಂಹಸ್ವಾಮಿ ದೇಗುಲದಿಂದ ನಂದಿಯ ಮಧ್ಯದಲ್ಲಿ ನಿರ್ಮಾಣವಾಗಿರುವ ಸಭಾ ಮಂಟಪ, ಯಾಗ ಮಂಟಪ ವೇದಿಕೆಗೆ ಸಂಪರ್ಕ ಕಲ್ಪಿಸುತ್ತದೆ. ಸೇತುವೆಯಿಂದ ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸುವ ಭಕ್ತರು ಅಗಸೆöàಶ್ವರ ಸ್ವಾಮಿ ದೇಗುಲ ಹಾಗೂ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಹೋಗಲು ನೆರವಾಗುತ್ತದೆ.

ಮೇಜರ್‌ ಜನರಲ್‌ ಭೇಟಿ: ಭಾರತೀಯ ಸೇನೆಯ ಮೇಜರ್‌ ಜನರಲ್‌ ಕೆ.ಜೆ.ಬಾಬು ತ್ರಿವೇಣಿ ಸಂಗಮಕ್ಕೆ ಭೇಟಿ ನೀಡಿ ಸೇನೆಯ ಯೋಧರು ನಿರ್ಮಿಸಿರುವ ತೇಲುವ ಸೇತುವೆಯನ್ನು ಪರಿಶೀಲಿಸಿದರು. ಜಿಲ್ಲಾಧಿಕಾರಿ ಅಭಿರಾಮ್‌ ಶಂಕರ್‌ ಯೋಧರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ತ್ರಿವೇಣಿ ಸಂಗಮದ ಮಧ್ಯ ಭಾಗದಲ್ಲಿ ವೃತ್ತಾಕಾರವಾಗಿ ನಿರ್ಮಾಣವಾಗುತ್ತಿರುವ ಧಾರ್ಮಿಕ ವೇದಿಕೆಯ ಕಾಮಗಾರಿಗೆ ಅಂತಿಮ ರೂಪ ನೀಡಲಾಗುತ್ತಿದೆ. ಪಿಟೀಲು ಚೌಡಯ್ಯ ವೃತ್ತದಿಂದ ಅಗಸ್ತೆÂàಶ್ವರ ದೇವಾಲಯದವರೆಗಿನ ಮಣ್ಣಿನ ರಸ್ತೆಗೆ ಡಾಂಬರು ಹಾಕಿ ಹದಗೊಳಿಸಲಾಗಿದೆ.

Advertisement

ಸೆಸ್ಕ್ನವರು ಮೇಳದ ಸ್ಥಳದಲ್ಲಿ ನೂತನವಾಗಿ ಟ್ರಾನ್ಸ್‌ ಫಾರ್ಮರ್‌ ಅಳವಡಿಸಿ ವಿದ್ಯುತ್‌ ಕೊರತೆಯಾಗದಂತೆ ಕ್ರಮ ಕೈಗೊಂಡಿದ್ದಾರೆ. ಇದೇ ಮೊದಲ ಬಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರ ಆದೇಶದಂತೆ ಕಾವೇರಿ ನದಿಯ ಮಧ್ಯ ಭಾಗದಲ್ಲಿರುವ ರುದ್ರಪಾದಕ್ಕೆ ಮರಳಿನ ಮೂಟೆಯ ಸೇತುವೆ ನಿರ್ಮಾಣ ಮಾಡಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ವಿದ್ಯುತ್‌ ದೀಪಾಲಂಕಾರ: ಪ್ರಮುಖ ದೇವಾಲಯಗಳಿಗೆ ಸುಣ್ಣ ಬಣ್ಣ ಬಳಿದು ಅಂದವಾಗಿ ಕಾಣುವಂತೆ ಮಾಡಲಾಗಿದೆ. ಈ ಬಾರಿ ವಿದ್ಯುತ್‌ ದೀಪಾಲಂಕಾರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ದಸರಾ ಮಾದರಿಯಂತೆ ಪಟ್ಟಣ ವಿದ್ಯುತ್‌ ದೀಪಗಳಿಂದ ಸಿಂಗಾರಗೊಂಡಿದೆ. ಪಟ್ಟಣದ ಪ್ರಮುಖ ರಸ್ತೆಗಳು, ಸರ್ಕಾರಿ ಕಚೇರಿಗಳು ದೀಪಾಲಂಕಾರದಿಂದ ಕಂಗೊಳಿಸುತ್ತಿವೆ.

ಈ ನಡುವೆ ಕುಂಭಮೇಳಕ್ಕೆ ತೀವ್ರವಾದ ಪ್ರಚಾರದ ಕೊರತೆ ಎದ್ದುಕಾಣುತ್ತಿದೆ. ಪಟ್ಟಣದ ನಾಲ್ಕುಕಡೆ ಮಾತ್ರ ಮೇಳದ ಸ್ವಾಗತದ ಪ್ಲೆಕ್ಸ್‌ಗಳನ್ನು ಮಾತ್ರ ಅಳವಡಿಸಿದ್ದು, ಪೂರ್ವಭಾವಿ ಸಭೆಯಲ್ಲಿ ತೀರ್ಮಾನವಾದಂತೆ ಸರ್ಕಾರಿ ಸಾರಿಗೆ ಸಂಸ್ಥೆಯವರು ಒಂದೇ ಒಂದು ಪೋಸ್ಟರ್‌ಗಳನ್ನು ಕೂಡ ಬಸ್‌ಗಳ ಮೇಲೆ ಹಾಕಿಲ್ಲ. ಇದನ್ನು ನೋಡಿದರೆ ಕೇವಲ ಪಟ್ಟಣದ ಜನತೆಗೆ ಮಾತ್ರ ಕುಂಭಮೇಳ ಸೀಮಿತವಾಗಿದೆಯೇ ಎಂಬ ಪ್ರಶ್ನೆ ಮೂಡಿದೆ.

ಬಾರದ ಸ್ವಾಮೀಜಿಗಳು: ಕುಂಭಮೇಳಕ್ಕೆ ಮೂಲ ಕಾರಣಕರ್ತರಾದ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮಿಜಿ, ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಓಂಕಾರಾಶ್ರಮದ ಮಧುಸೂದನ ನಂದಪುರಿ ಸ್ವಾಮಿಗಳು ಹಾಗೂ ಕೈಲಾಸಾಶ್ರಮದ ಜಯೇಂದ್ರ ಪುರಿ ಸ್ವಾಮಿಗಳು ಕುಂಭಮೇಳಕ್ಕೆ ಕೇವಲ ಒಂದೇ ಒಂದು ದಿನ ಬಾಕಿ ಇದ್ದಾಗಿಯೂ ತ್ರಿವೇಣಿ ಸಂಗಮದ ಕಡೆಗೆ ಸುಳಿಯದಿರುವುದು ಭಕ್ತರಿಗೆ ನಿರಾಸೆ ಮೂಡಿಸಿದೆ. ಈ ಬಗೆಯ ನಿರ್ಲಕ್ಷ್ಯ ನೋಡಿದ್ರೆ ಕುಂಭಮೇಳ ಏಕೆ ಮಾಡಬೇಕಿತ್ತು ಎಂಬ ಮಾತು ಕೇಳಿಬರುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next