Advertisement

ಮಿಣಜಗಿ ಆರ್ಟ್‌ ಗ್ಯಾಲರಿಗೆ ಅಂತಿಮ ಮೊಳೆ?

05:44 PM Dec 24, 2021 | Team Udayavani |

ಹುಬ್ಬಳ್ಳಿ: ಕಳೆದ ಎರಡೂವರೆ ದಶಕದಿಂದ ಚಿತ್ರಕಲಾ ಆರಾಧನೆಯ ದೇಗುಲವಾಗಿದ್ದ ಡಾ| ಎಂ.ವಿ. ಮಿಣಜಗಿ ಆರ್ಟ್‌ ಗ್ಯಾಲರಿಗೆ ಅಂತಿಮ ಮೊಳೆ ಹೊಡೆದು ಮತ್ಸ್ಯಾಲಯ ನಿರ್ಮಾಣಕ್ಕೆ ಕಸರತ್ತುಗಳು ನಡೆದಿವೆ. ನೇಮಕಾತಿಗಳಿಲ್ಲದೆ ಚಿತ್ರಕಲೆಯನ್ನು ಜೀವಾಳವಾಗಿಸಿಕೊಂಡು ಈ ವೇದಿಕೆ ಮೂಲಕ ಜೀವನ ಕಟ್ಟಿಕೊಂಡಿದ್ದವರ ಬದುಕಿಗೆ ಸ್ಮಾರ್ಟ್‌ಸಿಟಿ ಕಂಪನಿ ಕೊಳ್ಳಿ ಇಡಲು ಮುಂದಾಗಿದೆ.

Advertisement

ಲಲಿತಕಲೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕೇಂದ್ರ-ರಾಜ್ಯ ಸರಕಾರಗಳಿಂದ ಹಲವು ಯೋಜನೆ, ಸೌಲಭ್ಯ, ಅಕಾಡೆಮಿಗಳಿವೆ. ಆದರೆ ಇದಕ್ಕೆ ತದ್ವಿರುದ್ಧ ಬೆಳವಣಿಗೆ ನಗರದಲ್ಲಿದೆ. ಕಳೆದ ಎರಡೂವರೆ ದಶಕಗಳಿಂದ ಇಲ್ಲಿನ ಮಹಾತ್ಮ ಗಾಂಧಿ ಉದ್ಯಾನದಲ್ಲಿರುವ ಮಿಣಜಗಿ ಆರ್ಟ್‌ ಗ್ಯಾಲರಿಗೆ ಅಂತಿಮ ಮೊಳೆ ಹೊಡೆಯುವ ಕೆಲಸ ನಡೆಯುತ್ತಿದೆ. ಆರಂಭದ ಒಂದೂವರೆ ದಶಕಗಳ ಕಾಲ ಯಶಸ್ವಿಯಾಗಿ ನಡೆದು ಬಳಿಕ ಕುಂಟುತ್ತಾ, ತೆವಳುತ್ತಾ ಬಂದ ಗ್ಯಾಲರಿಗೆ ಬೀಗ ಬಿದ್ದಿತ್ತು.
ಹಿಂದಿನ ಜಿಲ್ಲಾಧಿಕಾರಿಯಾಗಿದ್ದ ದೀಪಾ ಚೋಳನ್‌ ಹಾಗೂ ಮೇಯರ್‌ ಸುಧೀರ ಸರಾಫ್‌ ಅವರು ಕಲೆ ಹಾಗೂ ಕಲಾವಿದರ ಬದುಕಿಗೆ ಜೀವ ತುಂಬುವ ಕೆಲಸ ಮಾಡಿದರು.ಆದರೆ ಪರಿಸ್ಥಿತಿ ಬದಲಾಗಿದ್ದು, ಸ್ಮಾರ್ಟ್‌ಟಿಸಿ ಯೋಜನೆಯಡಿ ಮತ್ಸ್ಯಾಲಯ ಮಾಡಲು ಸಂಪೂರ್ಣ ಕಟ್ಟಡ ಬಳಸಿಕೊಳ್ಳಲು ಮುಂದಾಗಿದೆ.

ಹೆಸರು ಬಂದಿದ್ದು ಹೇಗೆ?: ರಾಜ್ಯದಲ್ಲಿ ಲಲಿತಕಲಾ ಮಹಾವಿದ್ಯಾಲಯಗಳು ಇಲ್ಲದ ಸಂದರ್ಭದಲ್ಲಿ ಇಲ್ಲಿನ ಚಿತ್ರ ಕಲಾವಿದರು ಮುಂಬೈನಂತಹ ನಗರಗಳಿಗೆ ಹೋಗಿ ತರಬೇತಿ, ಶಿಕ್ಷಣ ಪಡೆಯುತ್ತಿದ್ದರು. ಕುಂಚಬ್ರಹ್ಮ ಡಾ| ಎಂ.ವಿ. ಮಿಣಜಗಿ ಅವರು ಲಂಡನ್‌ನ ರಾಯಲ್‌ ಅಕಾಡೆಮಿಯಲ್ಲಿ ಲಲಿತಕಲಾ ಶಿಕ್ಷಣ ಪಡೆದು ಬಂದು ಇಲ್ಲಿನ ವಿಜಯ ಮಹಾಂತೇಶ ಲಲಿತಕಲಾ ಮಹಾವಿದ್ಯಾಲಯ ಆರಂಭಿಸಿದರು.

ಇವರ ಸಮಕಾಲೀನರಾದ ದಾನಪ್ಪ ಹಾಲಭಾವಿ, ಡಿ.ಜಿ. ಬಡಿಗೇರ, ಅಕ್ಕಿ, ಎಂ.ಎ. ಚಟ್ಟಿ, ಕಮಡೊಳ್ಳಿ ಇನ್ನಿತರರ ಪ್ರೇರಣೆ, ಕಲಾರಾಧನೆ ಹಾಗೂ ಅವರ ಸಾಧನೆ ಈ ಭಾಗದಲ್ಲಿ ಚಿತ್ರಕಲಾವಿದರನ್ನು ಹುಟ್ಟುಹಾಕಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕುಂಚ ಕಲೆಯ ಮೂಲಕ ಈ ಭಾಗವನ್ನು ಪ್ರತಿನಿಧಿಸಿದ್ದ ಕಾರಣ ಮಿಣಜಗಿ ಅವರ ಹೆಸರಿನಲ್ಲಿ ಸುಮಾರು 150ಕ್ಕೂ ಹೆಚ್ಚು ಚಿತ್ರ ಕಲಾವಿದರು ಕೂಡಿಕೊಂಡು ಈ ಆರ್ಟ್‌ ಗ್ಯಾಲರಿ ಆರಂಭಿಸಿದ್ದರು.

ಬೇರೆ ಕಡೆ ಭರವಸೆ: ಬೆಂಗಳೂರಿನಂತಹ ನಗರದಲ್ಲಿ ಚಿತ್ರಕಲಾ ಪರಿಷತ್ತು, ಲಲಿತಕಲಾ ಅಕಾಡೆಮಿ, ವೆಂಕಟಪ್ಪ ಗ್ಯಾಲರಿ ಹೀಗೆ ಚಿತ್ರ ಕಲಾವಿದರಿಗೆ ಪ್ರೋತ್ಸಾಹ ನೀಡುವ ಕೆಲಸ ನಡೆಯುತ್ತಿದೆ. ರಾಜ್ಯದ ಹಾಗೂ ವಿವಿಧ ರಾಜ್ಯಗಳಿಂದ ಕಲಾವಿದರು ಆಗಮಿಸಲು ಹುಬ್ಬಳ್ಳಿ ಕೇಂದ್ರ ಸ್ಥಳ. ಇಂತಹ ಸ್ಥಳದಲ್ಲಿ ಒಂದು ಗ್ಯಾಲರಿಯಿದ್ದರೆ ಕಲಾವಿದರಿಗೆ ಸೂಕ್ತ ವೇದಿಕೆ ಹಾಗೂ ಚಿತ್ರಕಲೆ ಶಿಬಿರ, ಉಪನ್ಯಾಸ, ಕಾರ್ಯಾಗಾರ, ಪ್ರಾತ್ಯಾಕ್ಷಿಕೆ, ಚಿತ್ರ ಪ್ರದರ್ಶನದಂತಹ ಚಟುವಟಿಕೆಗಳಿಗೆ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿದಂತಾಗಲಿದೆ.

Advertisement

ಲಲಿತಕಲೆಗೆ ಹೊಸ ತಲೆಮಾರನ್ನು ಪರಿಚಯಿಸುವ ಕೆಲಸ ಆಗಲಿದೆ. ಇನ್ನೂ ಲಲಿತಕಲಾ ಆಸಕ್ತರಿಗೆ ಪ್ರೇರಣೆ ನೀಡಿದಂತಾಗುತ್ತದೆ. ಈ ಕಾರಣಕ್ಕೆ ಆರ್ಟ್‌ ಗ್ಯಾಲರಿ ಉಳಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆಯಾದರೂ ಬೇರೆ ಎಲ್ಲಿಯಾದರೂ ವ್ಯವಸ್ಥೆ ಮಾಡುತ್ತೇವೆ ಮರೆತು ಬಿಡಿ ಎನ್ನುವ ಉತ್ತರ ಶಾಸಕರು, ಪಾಲಿಕೆ ಆಯುಕ್ತ, ಸ್ಮಾರ್ಟ್‌ ಸಿಟಿ ಅಧಿಕಾರಿಗಳಿಂದ ವ್ಯಕ್ತವಾಗುತ್ತಿದೆ ಎನ್ನುತ್ತಾರೆ ಕಲಾವಿದರು.

ಕೋವಿಡ್‌ ಸಮಯದಲ್ಲಿ ಹುನ್ನಾರ
ಸುಮಾರು ಏಳೆಂಟು ವರ್ಷಗಳಿಂದ ನಿರ್ವಹಣೆ ಕೊರತೆಯಿಂದಾಗಿ ಆರ್ಟ್‌ ಗ್ಯಾಲರಿ ಸದ್ಬಳಕೆಯಾಗುತ್ತಿರಲಿಲ್ಲ. ಹೀಗಾಗಿ ಖಾಸಗಿ ಸಂಸ್ಥೆಯೊಂದಕ್ಕೆ ವಿಜ್ಞಾನ ಕಾರ್ಯಗಳಿಗೆ ನೀಡಿದ್ದರಿಂದ ಕಲಾವಿದರು ಪಾಲಿಕೆ ಮುಂಭಾಗದ ರಸ್ತೆ, ಖಾಸಗಿ ಕಟ್ಟಡಗಳಲ್ಲಿ ಚಿತ್ರಕಲಾ ಪ್ರದರ್ಶನ ಮಾಡುತ್ತಿದ್ದರು. ಇದನ್ನು ಗಮನಿಸಿ ಅಂದಿನ ಮೇಯರ್‌ ದಿ| ಸುಧೀರ ಸರಾಫ್‌ ಅವರು ಖಾಲಿಯಿದ್ದ ಕಟ್ಟಡ ನೀಡಿದರು. ಕಲಾವಿದರು ಸ್ವಯಂ ಪ್ರೇರಣೆಯಿಂದ ಸುಣ್ಣ-ಬಣ್ಣ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಿಕೊಂಡರು. ಒಂದಿಷ್ಟು ಪ್ರದರ್ಶನಗಳು ನಡೆದವಾದರೂ ಕೋವಿಡ್‌ನಿಂದಾಗಿ ಚಟುವಟಿಕೆಗಳು ನಿಂತವು. ಇದೇ ಸಂದರ್ಭವನ್ನು ಬಳಸಿಕೊಂಡು ಸ್ಮಾರ್ಟ್‌ಸಿಟಿ ಕಂಪನಿ ಇಡೀ ಕಟ್ಟಡವನ್ನು ಮತ್ಸ್ಯಾಲಯ ನಿರ್ಮಿಸಲು ಮುಂದಾಗಿದೆ.

ಆರ್ಟ್‌ ಗ್ಯಾಲರಿ ಸ್ಥಳವೀಗ ಪೊಲೀಸ್‌ ಠಾಣೆ
ಚಿಕ್ಕವೀರಯ್ಯ ಆರ್ಟ್‌ ಗ್ಯಾಲರಿಗಾಗಿ ವಿದ್ಯಾನಗರದ ಪಾಲಿಕೆ ಉದ್ಯಾನ ಬಳಿ ಕಟ್ಟಡ ನಿರ್ಮಿಸಲಾಗಿದೆ. ಈ ಕಟ್ಟಡವನ್ನು ಹಿಂದೆ ತೋಟಗಾರಿಕೆ ಇಲಾಖೆ, ವಿಜ್ಞಾನ ಶಿಕ್ಷಣದ ಕಾರ್ಯಗಳಿಗಾಗಿ ಸಂಸ್ಥೆಯೊಂದು ಬಳಕೆ ಮಾಡಿಕೊಳ್ಳುತ್ತಿದ್ದವು. ಇದೀಗ ಎರಡೂ ಕಚೇರಿ ಬೇರೆಡೆಗೆ ಸ್ಥಳಾಂತರಗೊಂಡಿದ್ದು, ಈ ಕಟ್ಟಡಕ್ಕೆ ವಿದ್ಯಾನಗರ ಪೊಲೀಸ್‌ ಠಾಣೆ ಸ್ಥಳಾಂತರಿಸಲಾಗಿದೆ. ಆದರೆ ಇದೀಗ ಈ ಕಟ್ಟಡವನ್ನು ಆರ್ಟ್‌ ಗ್ಯಾಲರಿಗಾಗಿ ಬಿಡಿಸಿಕೊಡಲಾಗುವುದು, ಗಾಜಿನ ಮನೆಯಲ್ಲಿರುವ ಕಟ್ಟಡ ಬಿಟ್ಟುಬಿಡಿ ಎನ್ನುವ ಭರವಸೆಗಳು ದೊರೆಯುತ್ತಿವೆ. ಈಗಾಗಲೇ ಪೊಲೀಸ್‌ ಠಾಣೆಯೊಂದಕ್ಕೆ ಕಟ್ಟಡ ನೀಡಿದ ಮೇಲೆ ಅದನ್ನು ವಾಪಸ್‌ ಪಡೆಯುವುದು ಅಷ್ಟೊಂದು ಸುಲಭವಲ್ಲ. ಕಲೆಗಾಗಿದ್ದ ಈ ಸ್ಥಳ ಬೇರೆ ಉದ್ದೇಶಕ್ಕೆ ಬಳಕೆಯಾಗುತ್ತಿದೆ ಎಂದು ಚಿಕ್ಕವೀರಯ್ಯ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ.

ಸಂಗೀತ, ನಾಟಕ ಇತರೆ ಕಲೆಗಳಿಗೆ ನೀಡಿದ ಪ್ರೋತ್ಸಾಹ ಲಲಿತಕಲೆಗೆ ದೊರೆಯುತ್ತಿಲ್ಲ. ಇದ್ದ ಒಂದು ಗ್ಯಾಲರಿಯನ್ನೂ ಮತ್ಸ್ಯಾಲಯ ಮಾಡಲು ಸ್ಮಾರ್ಟ್‌ಸಿಟಿ ಹೊರಟಿದೆ. ಈ ಕುರಿತು ಸಂಬಂಧಪಟ್ಟವರಿಗೆ ಮನವಿ ಮಾಡಿದರೂ ಕೇವಲ ಭರವಸೆಗಳು ದೊರೆಯುತ್ತಿವೆ. ಕೋಟ್ಯಂತರ ರೂ. ಖರ್ಚು ಮಾಡಿ ಕಟ್ಟಡ, ರಸ್ತೆ ಮಾಡಿದರೆ ಸ್ಮಾರ್ಟ್‌ ಎನ್ನುವ ಮನಸ್ಥಿತಿ ಬಿಟ್ಟು ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಕಲೆಗೂ ಒತ್ತು ಕೊಡಬೇಕು.
ಆರ್‌.ಬಿ. ಗರಗ,
ಹಿರಿಯ ಚಿತ್ರ ಕಲಾವಿದರು

ಗ್ಯಾಲರಿಗಾಗಿ ಹಲವು ವರ್ಷಗಳ ಬೇಡಿಕೆ, ಹೋರಾಟವಿದೆ. ಚಿತ್ರಕಲಾ ಶಿಕ್ಷಕರ ನೇಮಕಾತಿಯಿಲ್ಲದೆ ಒಂದಿಷ್ಟು ಕಲಾವಿದರು ಈ ಗ್ಯಾಲರಿ ಮೂಲಕ ಬದುಕು
ರೂಪಿಸಿಕೊಳ್ಳುತ್ತಿದ್ದರು. ಗ್ಯಾಲರಿಯಿಲ್ಲದ ಪರಿಣಾಮ ಒಂದೆರಡು ದಿನ ಬಾಡಿಗೆ ಪಡೆದು ಪ್ರದರ್ಶನ ಮಾಡುವ ಪರಿಸ್ಥಿತಿ ಎದುರಾಗಿದೆ. ಸೂಕ್ತ ವೇದಿಕೆಯಿಲ್ಲದಿದ್ದರೆ ಹೊಸ ಪ್ರತಿಭೆಗಳನ್ನು ಹುಟ್ಟುಹಾಕಲು ಸಾಧ್ಯವಿಲ್ಲ. ನಗರದಲ್ಲಿ ಲಲಿತಕಲೆಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ.
 ಕೆ.ವಿ. ಶಂಕರ,
ಹಿರಿಯ ಚಿತ್ರ ಕಲಾವಿದರು

ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next